ಕುಂದಾಪುರ:ಕುಂದಾಪುರ ಕನ್ನಡ ಭಾಷಾ ಅಕಾಡೆಮಿ ರಚನೆಗೆ ಸಂಬಂಧಪಟ್ಟಂತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಶನಿವಾರ (ಫೆ.25) ಸಚಿವ ವಿ.ಸುನಿಲ್ ಕುಮಾರ್ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಅರ್ಕಾವತಿ ಹಗರಣದಲ್ಲಿದ್ದವರು ಜೈಲಿಗೆ ಹೋಗುತ್ತಾರೆ: ನಳಿನ್ ಕುಮಾರ್ ಕಟೀಲ್
ಕುಂದಾಪುರ ಭಾಷಾ ಅಕಾಡೆಮಿ ರಚನೆ ಕುರಿತಂತೆ ಮನವಿ ನೀಡುವುದಾಗಿ ತಿಳಿಸಿದಾಗ, ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿರುವುದಾಗಿ ಜಯಪ್ರಕಾಶ್ ಹೆಗ್ಡೆ ಅವರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಮಂಗಳೂರು ವಿವಿಯಲ್ಲಿ ಅಧ್ಯಯನ ಪೀಠ ರಚನೆಗೆ ಆದೇಶ ಆಗಿದೆ. ಅಲ್ಲಿ ಶೈಕ್ಷಣಿಕ, ಸಂಶೋಧನೆ ಮೊದಲಾದ ಅಧ್ಯಯನಾತ್ಮಕ ಚಟುವಟಿಕೆಗಳು ನಡೆಯಲಿವೆ. ಇದು ಕುಂದಾಪುರ ಭಾಷೆಯ ಕುರಿತು ಮುಂದಿನ ಪೀಳಿಗೆಗೆ ಮಾಹಿತಿಯನ್ನು ಒದಗಿಸಿಕೊಡಲಿದೆ.
ಇದರ ಜತೆಗೆ ಅಕಾಡೆಮಿ ರಚನೆಯಾದರೆ ಸಂಶೋಧನೆ, ಪ್ರಕಟನೆ ಜತೆಗೆ ಕಲೆ, ಸಂಸ್ಕೃತಿಯ ಪ್ರಸಾರಕ್ಕೂ ಕೊಡುಗೆ ನೀಡಿದಂತಾಗುತ್ತದೆ. ಸಚಿವರ ಕ್ಷೇತ್ರದಲ್ಲೇ ಹೆಬ್ರಿಯಲ್ಲಿ ಕನ್ನಡ ಮಾತನಾಡುವವರು ಇದ್ದಾರೆ. ಬ್ರಹ್ಮಾವರದಿಂದ ಬೈಂದೂರಿನವರೆಗೆ ಕುಂದಾಪುರ ಭಾಷೆ ಮಾತನಾಡುವವರು ಇದ್ದಾರೆ. ಆದ್ದರಿಂದ ಅಕಾಡೆಮಿ ರಚನೆಯಿಂದ ಈ ಭಾಗದ ಭಾಷೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹಿಂದುಳಿದ ಆಯೋಗಗಳ ಅಧ್ಯಕ್ಷರಾದ ಹೆಗ್ಡೆಯವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಕುಂದಾಪುರ ಭಾಷಾ ಅಕಾಡೆಮಿ ರಚನೆ ಕುರಿತು ಸಚಿವ ವಿ.ಸುನಿಲ್ ಕುಮಾರ್ ಅವರನ್ನು ಭೇಟಿಯಾಗಿ ಅಕಾಡೆಮಿ ಸ್ಥಾಪನೆಗೆ ಯತ್ನಿಸುವುದಾಗಿ ಈ ಸಂದರ್ಭದಲ್ಲಿ ಅವರು ತಿಳಿಸಿದ್ದರು.