ಬೆಂಗಳೂರು: ಇಂದಿರಾಗಾಂಧಿ ಸಂಗೀತ ಕಾರಂಜಿ ಪಾರ್ಕ್‌ನ “ರಾಷ್ಟ್ರೀಯ ಸೈನಿಕ ಸ್ಮಾರಕ’ದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಏಕಶಿಲಾ ವೀರಗಲ್ಲು ಸ್ಥಾಪನೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.
ವೀರಗಲ್ಲು ಪ್ರತಿಷ್ಠಾಪನೆಗೆ ಮುಂದಾದ ಬಿಡಿಎ ಕ್ರಮ ಪ್ರಶ್ನಿಸಿ ಅದರ ಶಿಲ್ಪಿ ಅಶೋಕ್ ಗಡಿಗಾರ್ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ “ಸೋಮವಾರ ಸಂಜೆ 5.10ಕ್ಕೆ ವೀರಗಲ್ಲು ಪ್ರತಿಷ್ಠಾಪನೆ ಕೆಲಸ ಯಾವ ಸ್ಥಿತಿಯಲ್ಲಿದೇ ಅದೇ ಸ್ಥಿತಿಯಲ್ಲಿ ಕಾಪಾಡಿಕೊಂಡು ಹೋಗಬೇಕು ಎಂದು ಬಿಡಿಎಗೆ ನಿರ್ದೇಶಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲರು, ವೀರಗಲ್ಲು ಕೆತ್ತನೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಅದಕ್ಕೂ ಮುನ್ನವೇ ವೀರಗಲ್ಲು ನಿಲ್ಲಿಸಲು ಬಿಡಿಎ ಮುಂದಾಗಿದೆ. ಆ ವೀರಗಲ್ಲು 80 ಅಡಿಗೂ ಎತ್ತರವಿದ್ದು, ಅದನ್ನು ನಿಲ್ಲಿಸಿದರೆ ಬಾಕಿಯಿರುವ ಕೆತ್ತನೆ ಕಾರ್ಯ ಪೂರ್ಣಗೊಳಿಸಲು ಸಾಧ್ಯವಿಲ್ಲ. ಹಾಗೆಯೇ, ಬಿಡಿಎ ಟೆಂಡರ್ ಒಪ್ಪಂದಂತೆ ಅರ್ಜಿದಾರರಿಗೆ ಹಣ ಪಾವತಿಸಿಲ್ಲ ಎಂದು ದೂರಿದರು. ಅದಕ್ಕೆ ಬಿಡಿಎ ಪರ ವಕೀಲರ ಉತ್ತರಿಸಿ, ಟೆಂಡರ್ ಪ್ರಕಾರವೇ ಅರ್ಜಿದಾರರಿಗೆ ಹಣ ಪಾವತಿಸಲಾಗಿದೆ ಎಂದು ತಿಳಿಸಿದರು.
ನ್ಯಾಯಪೀಠ ಬೇಸರ: ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ಹೇಳುವಂತೆ ಕೆತ್ತನೆ ಕಾರ್ಯ ಪೂರ್ಣವಾಗದಿದ್ದರೂ ವೀರಗಲ್ಲು ಸ್ಥಾಪನೆಗೆ ಮುಂದಾಗಿರುವುದು ದುರದೃಷ್ಟಕರ ಸಂಗತಿ. ಬಿಡಿಎ ಸೈನಿಕರಿಗೆ ಅಪಮಾನ ಮಾಡುತ್ತಿದೆ. ಇದು ವೀರಗಲ್ಲು ಹೊರತು ಸಾಮಾನ್ಯ ಕಲ್ಲು ಅಲ್ಲ. ಅದರ ಪ್ರತಿಷ್ಠಾಪನೆಗೆ ತುರ್ತು ಏನಿದೆ?, ಸೈನಿಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಾರೆ. ಆದರೆ, ಅವರ ಸ್ಮಾರಕದ ಕಲ್ಲುಗಳ ಮೇಲೆ ಹೆಸರು ಕೆತ್ತಿಸಿಕೊಳ್ಳಲು ರಾಜಕಾರಣಿಗಳು ಆಸೆ ಪಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿತು.
ಅರ್ಜಿದಾರರ ದೂರೇನು?: ನಗರದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ 77 ಅಡಿ, 9 ಇಂಚು ಎತ್ತರದ ಏಕಶಿಲ ವೀರಗಲ್ಲು ಸ್ಥಾಪಿಸುವ ಹಿನ್ನೆಲೆಯಲ್ಲಿ 94,08,903 ರೂ. ವೆಚ್ಚದಲ್ಲಿ ಅದರ ಕೆತ್ತನೆ ಹಾಗೂ ಸ್ಥಾಪನೆ ಕಾಮಗಾರಿಯನ್ನು ತಮಗೆ ನೀಡಿ 2011ರ ಮೇ 4ರಂದು ಕಾರ್ಯಾದೇಶ ನೀಡಲಾಗಿತ್ತು. ಆದರೆ, ತದನಂತರ ಬಿಡಿಎ ನೀಡಿದ ನಿರ್ದೇಶನಗಳನ್ವಯ ವೀರಗಲ್ಲು ಎತ್ತರ ಹೆಚ್ಚಿಸಲಾಗಿದೆ. ಅದಕ್ಕಾಗಿ ಹೆಚ್ಚುವರಿ ಹಣ ಖರ್ಚಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಅಲ್ಲದೆ, ಈ ಮಧ್ಯೆ ಕೆತ್ತನೆ ಕಾರ್ಯ ಪೂರ್ಣವಾಗಿರದಿದ್ದರೂ, ನ.4ರಂದು ವೀರಗಲ್ಲು ಅನ್ನು ರಾಷ್ಟ್ರೀಯ ಸೈನಿಕರ ಸ್ಮಾರಕದಲ್ಲಿ ಪ್ರತಿಷ್ಠಾಪಿಸಲು ಬಿಡಿಎ ಮುಂದಾಗಿದೆ. ವೀರಗಲ್ಲು ಪ್ರತಿಷ್ಠಾಪನೆಯಾದರೆ ಬಾಕಿ ಇರುವ ಕೆತ್ತನೆ ಕಾರ್ಯ ಪೂರ್ಣಗೊಳಿಸಲು ಸಾಧ್ಯವಿಲ್ಲ. ಹಾಗೆಯೇ, ಹೆಚ್ಚುವರಿ ಖರ್ಚಾದ ಹಣವನ್ನೂ ಸಹ ಬಿಡಿಎ ತಮಗೆ ಪಾವತಿಸಿಲ್ಲ. ಆದ್ದರಿಂದ ಹೆಚ್ಚುವರಿ ಖರ್ಚಾದ ಹಣವನ್ನು ಪಾವತಿಸಲು ಮತ್ತು ಕೆತ್ತನೆ ಕಾರ್ಯ ಪೂರ್ಣಗೊಂಡ ನಂತರವೇ ವೀರಗಲ್ಲು ಪ್ರತಿಷ್ಠಾಪಿಸುವಂತೆ ಬಿಡಿಎಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.