Advertisement

ನಗರದಲ್ಲಿ ಗಾರ್ಮೆಂಟ್‌ ವಿವಿ ಸ್ಥಾಪನೆ

12:23 PM Mar 12, 2018 | |

ಬೆಂಗಳೂರು: ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗಾರ್ಮೆಂಟ್ಸ್‌ ಕೆಲಸಗಾರರಿಗೆ ತರಬೇತಿ ನೀಡಲು ಕೇಂದ್ರ ಸರ್ಕಾರದಿಂದ ಬೆಂಗಳೂರಿನಲ್ಲಿ ಗಾರ್ಮೆಂಟ್‌ ವಿಶ್ವವಿದ್ಯಾಲಯ ಆರಂಭಿಸುವುದಾಗಿ ಕೇಂದ್ರ ಸಚಿವ ಅನಂತಕುಮಾರ್‌ ಹೇಳಿದ್ದಾರೆ.

Advertisement

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಾರ್ಮೆಂಟ್‌ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂಬ ಬಗ್ಗೆ ಈಗಾಗಲೇ ಕೇಂದ್ರ ಜವಳಿ ಸಚಿವೆ ಸ್ಮತಿ ಇರಾನಿ ಅವರೊಂದಿಗೆ ಮಾತನಾಡಿದ್ದು, ಅವರು ಸಮ್ಮತಿ ನೀಡಿದ್ದಾರೆ ಎಂದರು.

ನಗರದಲ್ಲಿ ಗಾರ್ಮೆಂಟ್‌ ಕಾರ್ಖಾನೆಗಳಿದ್ದು, 40 ಸಾವಿರಕ್ಕೂ ಹೆಚ್ಚು ಮಂದಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಕಾರ್ಮಿಕರನ್ನು ಅಂತಾರಾಷ್ಟ್ರೀಯ ಮಟ್ಟದ ಜವಳಿ ಉತ್ಪಾದನೆಗೆ ಸಜ್ಜುಗೊಳಿಸಲು ಅವರಿಗೆ ತರಬೇತಿ ಅಗತ್ಯವಿದ್ದು, ಆ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಸ್ಮತಿ ಇರಾನಿ ಸಮ್ಮತಿಸಿದ್ದಾರೆ. ಈ ಹಿಂದೆ ಕರ್ನಾಟಕಕ್ಕೆ ಐಐಟಿ ಬೇಕು ಎಂದು ಹೇಳಿದಾಗ ತಕ್ಷಣ ಮಂಜೂರು ಮಾಡಿದಂತೆ ಗಾರ್ಮೆಂಟ್‌ ವಿಶ್ವವಿದ್ಯಾಲಯ ಸ್ಥಾಪನೆಗೂ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಭರವಸೆ ಇದೆ ಎಂದರು.

ವಂಶ ಪಾರಂಪರ್ಯ ಆಡಳಿತ ಬೇಡ: ನಮ್ಮ ದೇಶಕ್ಕೆ ವಂಶ ಪಾರಂಪರ್ಯ ಆಡಳಿತ ಬೇಡ. ಅದರ ಬದಲು ಜನಪರ ಕಾಳಜಿ ಮತ್ತು ಬಡ ಜನರ ಅಭಿವೃದ್ಧಿಗೆ ಶ್ರಮಿಸುವ ಆಡಳಿತ ಬೇಕು. ಇದುವರೆಗೆ ದೇಶಕ್ಕೆ ವಂಶ ಪಾರಂಪರ್ಯ ಆಡಳಿತ ನೀಡಿದ ಕಾಂಗ್ರೆಸ್‌ನಿಂದ ಇದು ಸಾಧ್ಯವಿಲ್ಲ. ಅದರ ಬದಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜನಪರ ಆಡಳಿತ ನೀಡುವ ಸರ್ಕಾರ ರಾಜ್ಯದಲ್ಲೂ ಅಧಿಕಾರಕ್ಕೆ ಬರಬೇಕಿದ್ದು, ಅದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಬಗ್ಗೆ ವ್ಯಂಗ್ಯವಾಡಿದ ಅನಂತಕುಮಾರ್‌, ರಾಹುಲ್‌ ಗಾಂಧಿ ಅವರು ಥೈಲ್ಯಾಂಡ್‌, ಸಿಂಗಾಪುರ, ಬ್ಯಾಂಕಾಕ್‌ ಎಂದು ಸುತ್ತಾಡುತ್ತಿದ್ದಾರೆ. ಧ್ಯಾನ ಮಾಡಲು ಥೈಲ್ಯಾಂಡ್‌ಗೆ ಹೋಗಿದ್ದಾಗಿ ಹೇಳುತ್ತಾರೆ. ಥೈಲ್ಯಾಂಡ್‌ಗೆ ಏಕೆ ಹೋಗುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಥೈಲ್ಯಾಂಡ್‌ನ‌ಲ್ಲಿ ಧ್ಯಾನ ಮಾಡುವವರಿಗಿಂತ ತಾಯ್ನಾಡಿನಲ್ಲಿ ಸೇವೆ ಸಲ್ಲಿಸುವವರ ಅಗತ್ಯ ದೇಶಕ್ಕಿದೆ ಎಂದರು.

Advertisement

ಅಧರ್ಮದ ವಿರುದ್ಧ ಹೋರಾಟಕ್ಕೆ ಮಾತೃಶಕ್ತಿ: ಕೇಂದ್ರ ಜವಳಿ ಸಚಿವೆ ಸ್ಮತಿ ಇರಾನಿ ಮಾತನಾಡಿ, 2014ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ನಾನು ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿದಾಗ ಕೆಲವರು, ರಾಹುಲ್‌ ವಿರುದ್ಧ ಮಹಿಳೆ ಕಣಕ್ಕಿಳಿಯುವುದೇ ಎಂದು ಪ್ರಶ್ನಿಸಿದ್ದರು.

ಅದಕ್ಕೆ ಬಿಜೆಪಿಯ ಹಿರಿಯ ನಾಯಕರು, ಅಧರ್ಮದ ವಿರುದ್ಧದ ಹೋರಾಟಕ್ಕೆ ಮಾತೃಶಕ್ತಿಯ ಅಗತ್ಯವಿದೆ ಎಂದು ಸ್ಮತಿ ಇರಾನಿಯನ್ನು ಕಣಕ್ಕಿಳಿಸಿರುವುದಾಗಿ ಹೇಳಿದ್ದರು. ಅದೇ ರೀತಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧರ್ಮದ ವಿರುದ್ಧ ರಾಜ್ಯದ ಮಾತೃಶಕ್ತಿಗಳು ಒಂದಾಗಿ ಹೋರಾಟಕ್ಕಿಳಿಯಬೇಕು ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ, ವಿಧಾನ ಪರಿಷತ್‌ ಸದಸ್ಯೆ ತಾರಾ ಅನುರಾಧ, ನಿವೃತ್ತ ಐಎಎಸ್‌ ಅಧಿಕಾರಿ ಶಿವರಾಮ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ಪ್ರಕಾಶ್‌, ಪಾಲಿಕೆ ಸದಸ್ಯ ರಾಮಮೋಹನ ರಾಜು ಮತ್ತಿತರರು ಇದ್ದರು. ಇದೇ ವೇಳೆ ಹಿರಿಯ ಮಹಿಳೆಯರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next