Advertisement

ಮೇವು ಬ್ಯಾಂಕ್‌ ಸ್ಥಾಪನೆ: ಪ್ರತಿ ತಾ|ಗೆ 20 ಲಕ್ಷ ರೂ. ಬಿಡುಗಡೆ

05:20 PM Mar 15, 2017 | Team Udayavani |

ಮಡಿಕೇರಿ: ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಪೂರೈಕೆ ಮಾಡಲು ಪ್ರತೀ ತಾಲ್ಲೂಕಿನಲ್ಲಿ ಮೇವು ಬ್ಯಾಂಕ್‌ ಸ್ಥಾಪನೆಗೆ ಈಗಾಗಲೇ ತಲಾ 20 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಪಶುಸಂಗೋಪನೆ ಸಚಿವರಾದ ಎ.ಮಂಜು ಅವರು ತಿಳಿಸಿದ್ದಾರೆ.  

Advertisement

ನಗರದ ಜಿಲ್ಲಾಡಳಿತ ಭವನದಲ್ಲಿ ಪಶುಸಂ ಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ಸಂಬಂಧ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ವೀಡಿಯೋ ಸಂವಾದದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜಾನುವಾರುಗಳಿಗೆ ನೀರು ಮತ್ತು ಮೇವು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ. ಆದರೂ ಚಾಮರಾಜನಗರ, ಮೈಸೂರು, ಹಾಸನ, ಬೀದರ್‌, ಗದಗ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಹೀಗೆ ನಾನಾ ಜಿಲ್ಲೆಗಳಲ್ಲಿ ಮೇವಿನ ಕೊರತೆ ಇರುವುದು ಕಂಡುಬಂದಿದೆ. ಆದ್ದರಿಂದ ಜನರಿಗೆ ಆಹಾರ ಭದ್ರತೆ ಹೇಗಿದೆಯೋ ಹಾಗೆಯೇ ಜಾನುವಾರುಗಳಿಗೂ ಮೇವಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ತಾಲೂಕುಗಳಲ್ಲಿ ಮೇವು ಬ್ಯಾಂಕ್‌ ಸ್ಥಾಪನೆಗೆ ಮುಂದಾಗಲಾಗಿದೆ ಎಂದು ಸಚಿವರು ತಿಳಿಸಿದರು.  

ಹಾಲು ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಬದ್ಧವಾಗಿದೆ. ಹಾಲು ದರ ಹೆಚ್ಚಳ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ಈಗಾಗಲೇ ಒಂದು ಸಭೆ ನಡೆದಿದ್ದು, ಮತ್ತೂಂದು ಸಭೆಯನ್ನು ಸದ್ಯದಲ್ಲೇ ಆಹ್ವಾನಿಸಲಾಗುವುದು. ಸರ್ಕಾರ ರೈತರ ಸಂಕಷ್ಟ ನಿವಾರಣೆಗೆ ಸದಾ ಬದ್ಧವಾಗಿದೆ. ಆ ನಿಟ್ಟಿನಲ್ಲಿ ಮುಂದಿನ ಸಭೆಯಲ್ಲಿ ಹಾಲು ದರ ನಿರ್ಧರಿಸಲಾಗುವುದು. ಸರ್ಕಾರದಿಂದ ಈಗಾಗಲೇ ಪ್ರತಿ ಲೀಟರ್‌ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.     

ಪ್ರತೀ ಹಳ್ಳಿಯಲ್ಲೂ ಜಾನುವಾರುಗಳ ಅನುಕೂಲ ಕ್ಕಾಗಿ ನೀರಿನ ತೊಟ್ಟಿಯನ್ನು ನಿರ್ಮಿ ಸಲು ಉದ್ದೇಶಿಸಿದೆ. ಜಾನುವಾರುಗಳಿಗೆ ನೀರು ಕುಡಿಯಲು ಅನುಕೂಲ ಮಾಡುವಂತೆ ಇದೇ ಸಂದರ್ಭ ಸಚಿವ ಮಂಜು ತಿಳಿಸಿದರು.  

Advertisement

ಪ್ರಗತಿ ಪರಿಶೀಲನೆ 
ಇದಕ್ಕೂ ಮೊದಲು ಪಶುಪಾಲನಾ ಇಲಾಖೆಯ ಪ್ರಗತಿ ಪರಿಶೀಲನೆಯನ್ನು ವಿಡಿಯೋ ಸಂವಾದ ಮೂಲಕ ನಡೆಸಿದ ಸಚಿವರಾದ ಎ. ಮಂಜು ಅವರು ಇಲಾಖೆಯ ಕಾರ್ಯಕ್ರಮಗಳಾದ ಪಶುಭಾಗ್ಯ ಯೋಜನೆ ಅನುಷ್ಠಾನ, ವಿಶೇಷ ಅಭಿವೃದ್ಧಿ ಯೋಜನೆ, ಹೈನುಗಾರಿಕೆ, ಅಮೃತ ಯೋಜನೆ, ಕುರಿ ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆ, ಸಂಬಂಧ ಪ್ರಗತಿ ಪರಿಶೀಲನೆ ನಡೆಸಿದರು.   

ಕೆಲವು ಜಿಲ್ಲೆಗಳಲ್ಲಿ ಬೌದ್ಧಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸದಿರುವುದಕ್ಕೆ ಸಚಿವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಈಗಾಗಲೇ ಬೇಸಿಗೆ ಶುರುವಾಗಿರುವುದರಿಂದ ಎಲ್ಲ ತಾಲೂಕುಗಳಲ್ಲಿ ಮೇವು ಸಂಗ್ರಹಣೆ ಮಾಡಿಕೊಂಡಿರಬೇಕು. ಎಲ್ಲ ಕಡೆಗಳಲ್ಲಿ ಸರಕಾರದ ನಿರ್ದೇಶನದಂತೆ ಜಾನುವಾರುಗಳಿಗೆ ಮೇವು ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಮೇವು ಕೊರತೆ ಇದೆ ಎಂಬ ದೂರುಗಳು  ಕೇಳಿ ಬರಬಾರದು ಎಂದು ಪಶುಪಾಲನೆ ಇಲಾಖೆ ಸಚಿವರಾದ ಎ. ಮಂಜು ಅವರು ಸೂಚನೆ ನೀಡಿದರು.  

ರೈತರು ಬದುಕಲು ಹೈನುಗಾರಿಕೆ ಉಪಯುಕ್ತವಾಗಿದೆ. ಆ ನಿಟ್ಟಿನಲ್ಲಿ ರೈತರಿಗೆ ಅನುಕೂಲ ಮಾಡಬೇಕು. ಅಧಿಕಾರಿಗಳು ಜಾನುವಾರುಗಳ ರಕ್ಷಣೆ ಮಾಡುವುದು ಮತ್ತು ಪೋಷಣೆ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸಚಿವರು ಸ್ಪಷ್ಟ ನಿರ್ದೇಶನ ನೀಡಿದರು.  

ಮಾರ್ಚ್‌ ಅಂತ್ಯದೊಳಗೆ ಎಸ್‌ಸಿಪಿ/ಟಿಎಸ್‌ಪಿ ಯೋಜನೆ ಸೇರಿದಂತೆ ಇತರೆ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಿ ಪ್ರಗತಿ ಸಾಧಿಸುವಂತೆ ಎ. ಮಂಜು ಅವರು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next