ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಮತ್ತು ಕೇರಳದಿಂದ ಜಿಲ್ಲೆಗೆ ಆಗಮಿಸುತ್ತಿರುವವರಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನಲೆ ಯಲ್ಲಿ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಶುಕ್ರವಾರದಿಂದ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕೋವಿಡ್ ನಿಗಾ ಘಟಕವನ್ನು ಸ್ಥಾಪಿಸಿದ್ದು, ಜಿಲ್ಲೆಗೆ ಆಗಮಿಸುತ್ತಿರುವ ಕೇರಳದ ಪ್ರಯಾಣಿಕರ ತಪಾಸಣೆ ಆರಂಭಗೊಂಡಿದೆ.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಮಕೃಷ್ಣ ಬಾಯರಿ, ತಹಶೀಲ್ದಾರ್ ಗುರುಪ್ರಸಾದ್, ತಾಲೂಕು ಆರೋಗ್ಯ ಅಧಿಕಾರಿ ಡಾ| ಸುಜಯ್ ಭಂಡಾರಿ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ತಪಾಸಣೆ ಆರಂಭಗೊಂಡಿದ್ದು, ಹೆಚ್ಚಿನ ವಾಹನಗಳನ್ನು ತಡೆದು ದ.ಕ. ಜಿಲ್ಲೆ ಪ್ರವೇಶಿಸಲು ಕಡ್ಡಾಯವಾಗಿ ನೆಗೆಟಿವ್ ವರದಿ ನೀಡಬೇಕು ಎಂದು ಪ್ರಯಾಣಿಕರಿಗೆ ಮಾಹಿತಿ ನೀಡಿದರು.
ಬೆಳಗ್ಗೆ ಕೆಲವು ಕಾಲ ಗೊಂದಲ
ಶುಕ್ರವಾರ ಬೆಳಗ್ಗಿನಿಂದಲೇ ಆರೋಗ್ಯ ಇಲಾಖೆ ಸಿಬಂದಿ, ಉಳ್ಳಾಲ ಪೊಲೀಸರು, ಹೋಂ ಗಾರ್ಡ್ ಸಿಬಂದಿ ತಲಪಾಡಿ ಗಡಿಭಾಗದಲ್ಲಿ ಬ್ಯಾರಿಕೇಡ್ ಇಟ್ಟು ತಪಾಸಣೆ ಆರಂಭಿಸಿದರು. ಈ ಸಂದರ್ಭ ಸಂಚಾರ ಅಸ್ತವ್ಯಸವಾಗಿದ್ದು, ಕೆಲವು ಕಾಲ ಗೊಂದಲ ವಾತಾವರಣ ಸೃಷ್ಟಿಯಾಯಿತು. ಬಳಿಕ ವಾಹನಗಳನ್ನು ಸಂಚಾರಕ್ಕೆ ಬಿಟ್ಟಿದ್ದು, ರ್‍ಯಾಂಡಮ್ ಆಗಿ ವಾಹನಗಳ ತಪಾಸಣೆ ಆರಂಭವಾಯಿತು. ಈ ಸಂದರ್ಭ ಪೊಲೀಸರು, ಹೋಮ್ ಗಾರ್ಡ್ ಸಿಬಂದಿ ವಾಹನಗಳನ್ನು ನಿಲ್ಲಿಸಿ ಶನಿವಾರದಿಂದ ಕಡ್ಡಾಯವಾಗಿ ನೆಗೆಟಿವ್ ವರದಿ ತರಬೇಕು ಎಂದು ಪ್ರಯಾಣಿಕರಿಗೆ ತಿಳಿಸಿ ಸಂಚಾರಕ್ಕೆ ಅನುವು ಮಾಡಿದರು.
ಮಾಹಿತಿ ಸಂಗ್ರಹ
ಕೇರಳದಿಂದ ಆಗಮಿಸುತ್ತಿರುವ ಜನರ ಮಾಹಿತಿ ಸಂಗ್ರಹ ಕಾರ್ಯವನ್ನು ಕಂದಾಯ ಅಧಿಕಾರಿ ಸ್ಟೀಫನ್ ಅವರ ಮಾರ್ಗ ದರ್ಶನದಲ್ಲಿ ಕಂದಾಯ ಇಲಾಖೆ ಸಿಬಂದಿ ನಡೆಸಿದರು. ರ್‍ಯಾಂಡಮ್ ತಪಾಸಣೆಯಲ್ಲಿ ವರದಿ ಇಲ್ಲದ ಜನರಿಗೆ ಉಚಿತವಾಗಿ ಆರೋಗ್ಯ ಇಲಾಖೆಯಿಂದ ಸ್ವಾಬ್ ಕಲೆಕ್ಷನ್ ಮಾಡುವ ಕಾರ್ಯ ನಡೆಯಿತು. ತಲಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೇಶವ ಪೂಜಾರಿ, ಸಿಬಂದಿ ಉಪಸ್ಥಿತರಿದ್ದರು.