Advertisement

ಜಿಲ್ಲಾಡಳಿತದ ಪಕ್ಕ ಬಸವ ಮೂರ್ತಿ ಸ್ಥಾಪನೆ

03:13 PM Jun 16, 2021 | Team Udayavani |

ಬಾಗಲಕೋಟೆ: ಸದ್ಯ ಸದಾ ಚಟುವಟಿಕೆಯಿಂದ ಕೂಡಿರುವ ಹಳೆಯ ನಗರದ ಪ್ರಮುಖ ಕೇಂದ್ರ ಸ್ಥಾನದಲ್ಲಿರುವ ಬಸವೇಶ್ವರ ವೃತ್ತ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವೇಳೆ ಬೇರೆಡೆ ಸ್ಥಳಾಂತರಿಸಬೇಕಿದ್ದು, ನವನಗರದ ಯೂನಿಟ್‌-1 ಮತ್ತು ಯೂನಿಟ್‌-3ರ ಮಧ್ಯೆ ಜಿಲ್ಲಾಡಳಿತ ಪಕ್ಕದಲ್ಲೇ ವಿಶ್ವಗುರು ಬಸವಣ್ಣನವರ ಹೊಸ ವೃತ್ತ ತಲೆ ಎತ್ತಲಿದೆ.

Advertisement

ಹೌದು. ಈ ಕುರಿತು ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಸಧ್ಯ ಎಪಿಎಂಸಿ ವೃತ್ತ ಎಂದು ಕರೆಸಿಕೊಳ್ಳುವ ಜಾಗದಲ್ಲಿ ಬಸವೇಶ್ವರ ವೃತ್ತ ನಿರ್ಮಾಣಕ್ಕೆ ಎಲ್ಲ ಸದಸ್ಯರು ಪಕ್ಷಾತೀತವಾಗಿ ಅನುಮೋದನೆ ನೀಡಿದರು. ನವನಗರದಲ್ಲಿ ಬಸವೇಶ್ವರ ವೃತ್ತ ಸ್ಥಾಪಿಸಿ, ಅಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ನವನಗರದ ಎಪಿಎಂಸಿ ವೃತ್ತದಲ್ಲಿ ಬಸವಣ್ಣನ ಮೂರ್ತಿ ಸ್ಥಾಪಿಸಲಾಗುವುದು ಎಂದು ಶಾಸಕ ಡಾ| ವೀರಣ್ಣ ಚರಂತಿಮಠ ಸಭೆಯಲ್ಲಿ ತಿಳಿಸಿದರು.

ಲೋಕೋಪಯೋಗಿ ಇಲಾಖೆ, ಪೊಲೀಸ್‌ ಇಲಾಖೆ, ಅಗ್ನಿಶಾಮಕ ದಳದಿಂದ ಎನ್‌ಒಸಿ ಪಡೆದುಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಮೂರ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಡೆದುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು.

ಖಾಸಗಿ ಬಡಾವಣೆಗೆ ಸೌಲಭ್ಯ; ಎಚ್ಚರಿಕೆ : ನಗರದಲ್ಲಿ ಖಾಸಗಿ ಬಡಾವಣೆ ಅಭಿವೃದ್ಧಿಪಡಿಸಿ, ನಿವೇಶನ ಮಾರಾಟ ಮಾಡಿಕೊಳ್ಳುವ ರಿಯಲ್‌ ಎಸ್ಟೇಟ್‌ ಮಾಲಿಕರು, ತಮ್ಮ ಬಡಾವಣೆಗೆ ಅಗತ್ಯ ಭೂಲಭೂತ ಸೌಲಭ್ಯ ಕಲ್ಪಿಸಬೇಕು. ಯಾವುದೇ ಕೆಲಸ ಅರ್ಧ ಮಾಡಿ, ನಿವೇಶನ ಮಾರಾಟ ಮಾಡಿಕೊಳ್ಳಲು ಅವಕಾಶ ನೀಡಬಾರದು. ಒಂದು ವೇಳೆ ಆ ರೀತಿಯ ಪ್ರಯತ್ನ ಮಾಡಿದರೆ ಅವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಬೇಕು ಎಂದು ಶಾಸಕ ಚರಂತಿಮಠ ಸೂಚಿಸಿದರು. ರಸ್ತೆ, ಗಟಾರು, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸದೇ ಬಡಾವಣೆಗಳನ್ನು ನಗರಸಭೆಗೆ ಹಸ್ತಾಂತರಿಸಿದರೆ ಲೇಔಟ್‌ ನಿರ್ಮಾಣ ಮಾಡಿದವರ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸಬೇಕು. ಕೆಲವೊಂದು ಬಡಾವಣೆಗಳನ್ನು ಬೇಕಾಬಿಟ್ಟಿ ಮಾಡಿ ಜನರಿಗೆ ನಿವೇಶನ ನೀಡಿದ್ದಾರೆ ಅಂತಹವುಗಳನ್ನು ಪರಿಶೀಲಿಸುವ ಕೆಲಸ ನಗರಸಭೆಯ ಅಧಿಕಾರಿಗಳು ಮಾಡಬೇಕು ಎಂದರು.

ಒತ್ತುವರಿ ತೆರವು ನಿಲ್ಲಲ್ಲ: ಒತ್ತುವರಿ ವಿಷಯದಲ್ಲಿ ಯಾವುದೇ ರೀತಿಯಿಂದಲು ಹಿಂದೆ ಸರಿಯುವ ಪ್ರಶ್ನೆ ಇಲ್ಲ. ನಗರದಲ್ಲಿ ಯಾವುದೇ ಮುಲಾಜಿಲ್ಲದೇ ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ಗಟಾರ ಮೇಲೆ ಶೌಚಾಲಯ, ಕಂಪೌಂಡ್‌ ಕಟ್ಟಿದ್ದನ್ನು ತೆರವುಗೊಳಿಸಬೇಕು. ಸರ್ಕಾರಿ ಜಾಗದಲ್ಲಿ ಡಬ್ಟಾ ಅಂಗಡಿ ಹಾಗೂ ಇನ್ನಿತರ ಅಂಗಡಿಗಳನ್ನು ಇಟ್ಟುಕೊಂಡವರು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಬೇಕು. ಇಲ್ಲದಿದ್ದರೆ ನಗರಸಭೆಯ ಸುಪರ್ದಿಗೆ ತೆಗೆದುಕೊಂಡು ಹರಾಜು ಹಾಕಲಾಗುವುದು ಎಂದು ಸೂಚಿಸಿದರು.

Advertisement

ಹಳೆಯ ನಗರ, ನವನಗರ, ವಿದ್ಯಾಗಿರಿ ಪ್ರದೇಶ ದಲ್ಲಿ ಮಳೆ ಆದರೆ ರಸ್ತೆಯ ಮೇಲೆ ವ್ಯಾಪಕ ಪ್ರಮಾಣದಲ್ಲಿ ನೀರು ನಿಲ್ಲುತ್ತದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ವಿಷಯದಲ್ಲಿ ನಗರಸಭೆ, ಬಿಟಿಡಿಎ ಅಧಿಕಾರಿಗಳು ನಿರ್ಲಕ್ಷé ವಹಿಸುತ್ತಿದ್ದಾರೆ. ಪ್ರತಿಯೊಂದು ವಿಷಯವನ್ನು ಶಾಸಕರೇ ಗಮನಿಸಬೇಕು ಎಂದಿಲ್ಲ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಸದಸ್ಯರ ಸಹಿ ಪೋರ್ಜರಿ: ನಗರಸಭೆ ಸದಸ್ಯೆ ಶಶಿಕಲಾ ಮಜ್ಜಗಿ ಮಾತನಾಡಿ, ನಗರಸಭೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು. ಜನನ, ಮರಣ ಪ್ರಮಾಣ ಪತ್ರ ಸುಲಭವಾಗಿ ದೊರೆಯುತ್ತಿಲ್ಲ. ನನ್ನದೂ ಸೇರಿದಂತೆ ಕೆಲ ನಗರಸಭೆ ಸದಸ್ಯರ ಸಹಿ ಪೋರ್ಜರಿ ಮಾಡಿ, ದಾಖಲಾತಿ ಸೃಷ್ಟಿ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಬೀಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನಗರಸಭೆ ಅಧಿಕಾರಿಗಳು ಕಾರ್ಯ ಪ್ರವೃತ್ತಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ನಗರಸಭೆ ಸದಸ್ಯರ ಸಹಿಯನ್ನೇ ಪೋರ್ಜರಿ ಮಾಡಲಾಗುತ್ತಿದೆ ಎಂದರೆ ಗಂಭೀರ ವಿಷಯ. ಇಂತಹ ಅಕ್ರಮ ಸಹಿಸಲು ಸಾಧ್ಯವಿಲ್ಲ. ನಗರಸಭೆಯಲ್ಲಿ ಏಜೆಂಟರ್‌ ಹಾವಳಿ ತೆಡೆಗಟ್ಟಬೇಕು. ಸಾರ್ವಜನಿಕರ ಕೆಲಸ ಅಧಿಕಾರಿಗಳು ನೇರವಾಗಿ ಮಾಡಿಕೊಡಬೇಕು ಎಂದು ಸೂಚಿಸಿದರು.

ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಸಭಾಪತಿ ರವಿ ಧಾಮಜಿ, ಸದಸ್ಯರಾದ ವೀರಣ್ಣ ಶೀರಗಣ್ಣವರ, ಚನ್ನವೀರ ಅಂಗಡಿ, ಸವಿತಾ ಲೆಂಕೆನ್ನವರ, ಸರಸ್ವತಿ ಕುರಬರ, ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next