Advertisement
ಪಾಲೋಳಿಯಲ್ಲಿ ಸರ್ವಋತು ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆ ಇಂದು ನಿನ್ನೆಯದಲ್ಲ. ಎರಡೂವರೆ ದಶಕಗಳಿಂದ ಈ ಬಗ್ಗೆ ಪರಿಸರದ ಜನರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಸೇತುವೆ ನಿರ್ಮಾಣದ ನಿಟ್ಟಿನಲ್ಲಿ ಯಾವುದೇ ರೀತಿಯ ಪ್ರಗತಿ ಕಂಡು ಬಾರದ ಹಿನ್ನೆಲೆಯಲ್ಲಿ ಊರವರೇ ಸೇರಿಕೊಂಡು ಶ್ರಮದಾನದ ಮೂಲಕ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ.
ಪಾಲೋಳಿ ಮತ್ತು ಎಡಮಂಗಲ ಪೇಟೆಯ ಮಧ್ಯೆ ನಡುವೆ ಇರುವುದು ಕೇವಲ 2 ಕಿ.ಮೀ. ಗಳ ಅಂತರ. ಆದರೆ ಮಧ್ಯೆ ಕುಮಾರಧಾರಾ ಹೊಳೆ ಹರಿಯುತ್ತಿರುವುದರಿಂದ ಪಾಲೋಳಿ – ಪಿಜಕ್ಕಳದ ಜನರು ಎಡಮಂಗಲವನ್ನು ತಲುಪಬೇಕಾದರೆ ಕಡಬ – ಕೋಡಿಂಬಾಳ – ಪುಳಿಕುಕ್ಕು ಮೂಲಕ ಸುಮಾರು 15 ಕಿ.ಮೀ.ಗಳಷ್ಟು ದೂರ ಸುತ್ತುಬಳಸಿ ಪ್ರಯಾಣಿಸಬೇಕಿದೆ. ಅದೂ ಸಮರ್ಪಕ ಬಸ್ ಸೌಕರ್ಯ ಇಲ್ಲದಿರುವುದರಿಂದ ಸುಲಭದ ದಾರಿಯಲ್ಲ. ಈ ಸೇತುವೆಯ ಮೂಲಕ ಬೇಸಗೆಯಲ್ಲಿ ಕಡಬದಿಂದ ಕೇವಲ 5 ಕಿ.ಮೀ. ಸಂಚರಿಸಿ ಎಡಮಂಗಲ ತಲುಪಬಹುದು. ಇಲ್ಲಿ ಶಾಶ್ವತ ಸೇತುವೆ ನಿರ್ಮಾಣವಾದರೆ ಪುತ್ತೂರನ್ನು ಕಾಣಿಯೂರು ಮಾರ್ಗವಾಗಿ ನೇರವಾಗಿ ತಲುಪಲು ಸಾಧ್ಯ. ಎಡಮಂಗಲ-ನಿಂತಿಕಲ್ ಮೂಲಕ ಬೆಳ್ಳಾರೆ, ಸುಳ್ಯವನ್ನು ತಲುಪುವುದಕ್ಕೂ ಇದು ಹತ್ತಿರದ ದಾರಿ. ಕಡಬದಿಂದ ಹೊಳೆ ಬದಿಯ ತನಕ ಉತ್ತಮ ರಸ್ತೆ ಸಂಪರ್ಕವಿದೆ. ಹೊಳೆಯ ಇನ್ನೊಂದು ಬದಿಯಲ್ಲಿ ಪರ್ಲ ಎಂಬಲ್ಲಿವರೆಗೆ ಎಡಮಂಗಲದಿಂದ ರಸ್ತೆ ಸಂಪರ್ಕವಿದೆ. ಸೇತುವೆ ನಿರ್ಮಾಣದ ಬೇಡಿಕೆ ಗ್ರಾಮಸಭೆ, ಜನಸ್ಪಂದನ ಸಭೆಗಳಲ್ಲಿಯೂ ಪ್ರತಿಧ್ವನಿಸಿದೆ. ಗ್ರಾಮಸಭೆಯಲ್ಲಿ ಹಲವು ಸಲ ಈ ಕುರಿತು ನಿರ್ಣಯವನ್ನೂ ಕೈಗೊಳ್ಳಲಾಗಿದೆ.
Related Articles
ನಾಲ್ಕು ವರ್ಷಗಳ ಹಿಂದೆ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಸಿಮೆಂಟ್ ಪೈಪ್, ಕಲ್ಲು, ಲಾರಿ ಬಾಡಿಗೆ ಎಂದು 8 ಲಕ್ಷ ರೂ. ಖರ್ಚಾಗಿತ್ತು. ಇದರಲ್ಲಿ ಮಾನವ ಶ್ರಮದ ಲೆಕ್ಕ ಸೇರಿಲ್ಲ. ಆಗ 3 ಲಕ್ಷ ರೂ. ದೇಣಿಗೆ ಸಂಗ್ರಹವಾಗಿತ್ತು. ಉಳಿದ ಮೊತ್ತವನ್ನು ಸ್ಥಳೀಯ ಮೊತ್ತವನ್ನು ರೋಯ್ ಅಬ್ರಹಾಮ್ ಎಂಬುವರೇ ಭರಿಸಿದ್ದರು. ಈ ಸಲ ಮಾನವ ಶ್ರಮ ಹೊರತುಪಡಿಸಿ 60 ಸಾವಿರ ರೂ. ಖರ್ಚಾಗಿದೆ.
Advertisement
ಸೇತುವೆ ಕನಸು ಕಂಡ ಯುವಕರುಇಲ್ಲಿ ಬೇಸಗೆಯಲ್ಲಿ ಉಪಯೋಗಿಸಬಹುದಾದ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವ ಕಲ್ಪನೆಯನ್ನು ಕಂಡವರು ಸ್ಥಳೀಯ ಕುಮಾರಧಾರಾ ಯುವಕ ಮಂಡಲದ ಸದಸ್ಯರು. ಅದರ ಫಲವಾಗಿ 4 ವರ್ಷಗಳ ಹಿಂದೆ ದಾನಿಗಳ ಆರ್ಥಿಕ ನೆರವಿನಿಂದ ಎಡಮಂಗಲ ಹಾಗೂ ಪಿಜಕ್ಕಳ ಪರಿಸರದ ಜನರ ಶ್ರಮದಾನದ ಫಲವಾಗಿ ಸುಮಾರು 120 ಮೀ. ಉದ್ದದ 10 ಮೀ.ಅಗಲದ ಸೇತುವೆ ನಿರ್ಮಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ನೀರಿನ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋಗುವ ಸೇತುವೆಯನ್ನು ಪ್ರತೀ ಬೇಸಗೆಯಲ್ಲಿ ಊರವರು ಪುನರ್ನಿರ್ಮಾಣ ಮಾಡುತ್ತಲೇ ಬಂದಿದ್ದಾರೆ. ಈ ಬಾರಿ ಎಡಮಂಗಲ ಭಾಗದ ಜನರ ಮುತುವರ್ಜಿಯಿಂದಾಗಿ ಸೇತುವೆ ಮರು ನಿರ್ಮಾಣಗೊಂಡಿದೆ. ಶಾಶ್ವತ ಸೇತುವೆಯಾಗಲಿ
ಇಲ್ಲಿ ಸರಕಾರದಿಂದ ಸರ್ವಋತು ಸೇತುವೆ ನಿರ್ಮಾಣ ಆಗಬೇಕೆಂಬ ಬಯಕೆ ನಮ್ಮೆಲ್ಲರದಾಗಿದೆ. ಇಲ್ಲಿ ಶಾಶ್ವತ ಸೇತುವೆ ನಿರ್ಮಾಣವಾದರೆ ಈ ಭಾಗದ ಸಾರ್ವಜನಿಕರಿಗೆ ಬಹಳ ದೊಡ್ಡ ಪ್ರಯೋಜನ ಇದೆ. ಕಳೆದ 4 ವರ್ಷದಿಂದ ಊರವರೇ ಸೇರಿಕೊಂಡು ತಾತ್ಕಾಲಿಕ ಸೇತುವೆ ನಿರ್ಮಿಸುತ್ತಿದ್ದೇವೆ. ಈ ಬಾರಿ ಎಡಮಂಗಲ ಭಾಗದ ಜನರು ಹೆಚ್ಚಿನ ಶ್ರಮ ವಹಿಸಿದ್ದಾರೆ. ಸರಕಾರ ಜನರಿಗೆ ಆಗುತ್ತಿರುವ ತೊಂದರೆಯನ್ನು ಗಮನಿಸಿ ಶೀಘ್ರ ಶಾಶ್ವತ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆನ್ನುವುದು ನಮ್ಮೆಲ್ಲರ ಬೇಡಿಕೆ.
– ಕೇಂಜೂರು ಜೋಸ್ ಎ.ಜೆ., ಎಡಮಂಗಲ ನಾಗರಾಜ್ ಎನ್.ಕೆ