Advertisement

ಕೃಷಿ ಪ್ರೋತ್ಸಾಹಕ್ಕೆ “ವಿಶೇಷ ಕೃಷಿ ವಲಯ’ಸ್ಥಾಪನೆ

06:20 AM Dec 12, 2017 | |

ಬೆಂಗಳೂರು: ಕೃಷಿ ಭೂಮಿ ಸಂರಕ್ಷಣೆ, ಕೃಷಿ ಉತ್ಪನ್ನ ಹೆಚ್ಚಳ, ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ತರಕಾರಿ ಬೆಳೆಯಲು ಪ್ರೋತ್ಸಾಹ ಮತ್ತು ಕೃಷಿಗೆ ಪೂರಕ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶದ ವಿಶೇಷ ಕೃಷಿ ವಲಯ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Advertisement

ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮಾಹಿತಿ ನೀಡಿದರು.

ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕುರಿತು ಕೃಷಿ ತಜ್ಞ ಡಾ.ಸ್ವಾಮಿನಾಥನ್‌ ಅವರ ಶಿಫಾರಸಿನನ್ವಯ ರಾಜ್ಯ ಸರ್ಕಾರ ರಾಜ್ಯದ ವಾತಾವರಣ ಮತ್ತು ಭೂಮಿಯ ಫ‌ಲವತ್ತತೆಗೆ ಸಂಬಂಧಿಸಿದಂತೆ ಯಾವ ಭಾಗದಲ್ಲಿ ಯಾವ ಉತ್ಪನ್ನಗಳು ಹೆಚ್ಚಾಗಿವೆ, ಅವುಗಳಿಗೆ ಯಾವ ರೀತಿ ಪ್ರೋತ್ಸಾಹ ಕೊಡಬೇಕು ಎಂಬ ಬಗ್ಗೆ ವರದಿ ನೀಡಲು ವಿಷನ್‌ ಗ್ರೂಪ್‌ ರಚಿಸಿತ್ತು. ವಿಷನ್‌ ಗ್ರೂಪ್‌ ನೀಡಿದ ವರದಿ ಆಧರಿಸಿ ಯಾವ್ಯಾವ ವಲಯದಲ್ಲಿ ಯಾವ ಕೃಷಿ ಉತ್ಪನ್ನಗಳು ಸಿಗುತ್ತವೆ? ಅವುಗಳ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ನೀತಿ ರೂಪಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ಅದರಂತೆ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಕೃಷಿ ಭೂಮಿಯಲ್ಲಿ ತರಕಾರಿ ಬೆಳೆಯಲು ಪ್ರೋತ್ಸಾಹ ನೀಡುವುದು, ಕೃಷಿ ವಲಯಗಳಲ್ಲಿ ಭೂಮಿಯ ಸಂರಕ್ಷಣೆ, ಹೂ, ತರಕಾರಿ, ಹಣ್ಣು ಸೇರಿದಂತೆ ಕೃಷಿ ಉತ್ಪನ್ನಗಳ ಉತ್ಪಾದನೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ವಿಶೇಷ ಕೃಷಿ ವಲಯಗಳನ್ನು ಗುರುತಿಸಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ಯಾವ್ಯಾವ ವಿಚಾರಗಳಿಗೆ ಪ್ರೋತ್ಸಾಹ ನೀಡಬೇಕು? ಎಷ್ಟು ವಲಯಗಳನ್ನು ಸ್ಥಾಪಿಸಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಸೇವಾ ಸಿಂಧು ಯೋಜನೆ:
ಸರ್ಕಾರದ ವಿವಿಧ 19 ಇಲಾಖೆಗಳ 346 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಸೇವಾ ಸಿಂಧು ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿರುವ ಬೆಂಗಳೂರು ವನ್‌, ಕರ್ನಾಟಕ ವನ್‌, ಅಟಲ್‌ದಿ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ನ್ಯಾಯಬೆಲೆ ಅಂಗಡಿಗಳು ಸೇರಿದಂತೆ ಸರ್ಕಾರದ ಸೇವೆಗಳನ್ನು ಒದಗಿಸುವ ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್‌ ಮೂಲಕ ಈ ಎಲ್ಲಾ ಸೇವೆಗಳನ್ನು ಒದಗಿಸಲಾಗುತ್ತದೆ. ಎನ್‌ಐಸಿಯವರು ಈ ಕುರಿತ ತಂತ್ರಾಂಶಗಳನ್ನು ಒದಗಿಸುವುದರ ಜತೆಗೆ ಏಜನ್ಸಿಯಾಗಿಯೂ ಕೆಲಸ ಮಾಡಲಿದ್ದಾರೆ ಎಂದು ಸಚಿವರು ಹೇಳಿದರು.

Advertisement

ನಗರ ತ್ಯಾಜ್ಯ ನೀರು ಮರುಬಳಕೆ ನೀತಿ:
ನಗರ ಪ್ರದೇಶಗಳಲ್ಲಿ ಬಳಕೆಯಾಗಿ ವ್ಯರ್ಥವಾಗುವ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ವಿಶೇಷ ಕಾರ್ಯನೀತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರಿನಲ್ಲಿ ಬಳಕೆಯಾಗುವ ಸುಮಾರು 18ರಿಂದ 19 ಟಿಎಂಸಿ ನೀರಿನ ಪೈಕಿ 10ರಿಂದ 11 ಟಿಎಂಸಿ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಆನೇಕಲ್‌ನ ಕೆರೆಗಳಿಗೆ ತುಂಬಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಈಗಾಗಲೇ ಕೈಗೆತ್ತಿಕೊಂಡಿದೆ. ನಗರೀಕರಣದಿಂದ ನೀರಿನ ಬಳಕೆ ಮತ್ತು ತ್ಯಾಜ್ಯ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಈ ತ್ಯಾಜ್ಯ ನೀರು ವ್ಯರ್ಥವಾಗದಂತೆ ಮರು ಬಳಕೆ ಮಾಡಲು ರಾಜ್ಯವಾಪಿ ಎಲ್ಲಾ ನಗರಗಳಲ್ಲಿ ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ನಗರ ತ್ಯಾಜ್ಯ ನೀರಿನ ಮರುಬಳಕೆಯ ಕಾರ್ಯನೀತಿ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

2018-19ರಲ್ಲಿ ಉಚಿತ ವಿದ್ಯುತ್‌ ಪೂರೈಕೆಗೆ 12 ಸಾವಿರ ಕೋಟಿ
ರಾಜ್ಯದಲ್ಲಿ 10 ಅಶ್ವಶಕ್ತಿ ಸಾಮರ್ಥ್ಯದವರೆಗಿನ ವಿದ್ಯುತ್‌ ಪಂಪ್‌ಸೆಟ್‌ಗಳು, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳಡಿ ಉಚಿತ ವಿದ್ಯುತ್‌ ಒದಗಿಸಲು ಸರ್ಕಾರ 2018-19ನೇ ಸಾಲಿನಲ್ಲಿ 12 ಸಾವಿರ ಕೋಟಿ ರೂ. ನಿಗದಿಪಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ವಿದ್ಯುತ್‌ ಪಂಪ್‌ಸೆಟ್‌ಗಳು ಹಾಗೂ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯಡಿ ಫ‌ಲಾನುಭವಿಗಳಿಗೆ ಉಚಿತವಾಗಿ ವಿದ್ಯುತ್‌ ಪೂರೈಕೆ ಮಾಡಲಾಗುತ್ತದೆ. ಈ ಮೊತ್ತವನ್ನು ಸರ್ಕಾರ ವಿದ್ಯುತ್‌ ಸರಬರಾಜು ಕಂಪೆನಿಗಳಿಗೆ ಪಾವತಿಸುತ್ತದೆ. ಅದಕ್ಕಾಗಿ ಈ ಮೊತ್ತ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಯಡಿ ಪ್ರತಿ ಯೂನಿಟ್ಟಿಗೆ ಎಸ್ಕಾಂಗಳಿಗೆ ಪಾವತಿಸಲು ನಿಗದಿಪಡಿಸಿದ್ದ ಮೊತ್ತವನ್ನು ಪರಿಷ್ಕರಿಸಲಾಗಿದೆ. ಇದರೊಂದಿಗೆ ಪ್ರಸ್ತುತ 19.51 ಲಕ್ಷದಷ್ಟಿರುವ 10 ಅಶ್ವಶಕ್ತಿ ಸಾಮರ್ಥ್ಯದವರೆಗಿನ ವಿದ್ಯುತ್‌ ಪಂಪ್‌ಸೆಟ್‌ಗಳ ಸಂಖ್ಯೆ 2018-19ನೇ ಸಾಲಿನಲ್ಲಿ 22.33 ಲಕ್ಷಕ್ಕೆ ಏರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಮೂರು ಯೋಜನೆಗಳಿಗೆ 12 ಸಾವಿರ ಕೋಟಿ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next