ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಲು ಹಾಗೂ ಪಾರದರ್ಶಕ ಚುನಾವಣೆ ನಡೆಸುವ ಸಂಬಂಧ ನಗರಾದ್ಯಂತ 400ಕ್ಕೂ ಹೆಚ್ಚು ಚೆಕ್‌ಪೋಸ್ಟ್ ಸ್ಥಾಪಿಸುವುದಾಗಿ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಗಡಿ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲು ಸೂಚಿಸಲಾಗಿದ್ದು, ಈ ಭಾಗಗಳಲ್ಲಿ 20ಕ್ಕೂ ಹೆಚ್ಚು ಚೆಕ್‌ಪೋಸ್ಟ್ ತೆರೆಯಲಾಗುವುದು. ಅನುಮಾನಸ್ಪಾದವಾಗಿ ಸಂಚರಿಸುವ ವಾಹನಗಳ ಮೇಲೆ ನಿಗಾ ವಹಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮೂರು ಸ್ಥಿರ ಚೆಕ್‌ಪೋಸ್ಟ್ ಸೇರಿದಂತೆ ಒಟ್ಟಾರೆ ನಗರಾದ್ಯಂತ 400ಕ್ಕೂ ಹೆಚ್ಚು ಚೆಕ್‌ಪೋಸ್ಟ್ ಕಾರ್ಯನಿರ್ವಹಿಸಲಿವೆ. ಅಷ್ಟೇ ಸಂಖ್ಯೆಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.
28 ವಿಧಾನಸಭಾ ಕ್ಷೇತ್ರಗಳ ಭದ್ರತೆಗಾಗಿ ಕೇಂದ್ರ ಸರ್ಕಾರದ ಶಸ್ತ್ರಸಜ್ಜಿತ (ಸಿಐಎಸ್‌ಎಫ್, ಎಸ್‌ಎಸ್‌ಬಿ, ಬಿಎಸ್‌ಎಫ್, ಆರ್‌ಎಎಫ್) ಸೇರಿ ಸುಮಾರು 48 ಪಡೆಗಳನ್ನು ಕರೆಸಲಾಗಿದ್ದು, ಈಗಾಗಲೇ 8 ಪಡೆ ನಗರಕ್ಕೆ ಬಂದಿಳಿದಿವೆ. ಪ್ರತಿ ಪಡೆಯಲ್ಲಿ 100ರಿಂದ 110 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ.
ಈ ಪಡೆಗಳು ಶಾಂತಿನಗರ, ಕೆ.ಆರ್.ಪುರಂ ಹಾಗೂ ಇತರೆಡೆ ಪರೇಡ್ ನಡೆಸಿವೆ. ಚುನಾವಣೆ ವೇಳೆ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ಎಸಿಪಿ ನೇತೃತ್ವದಲ್ಲಿ ನೋಡೆಲ್ ಅಧಿಕಾರಿಗಳು ಹಾಗೂ ಪೊಲೀಸರು ಒಳಗೊಂಡಂತೆ ತಂಡ ರಚಿಸಲಾಗುವುದು ಎಂದು ಅವರು ವಿವರಿಸಿದರು.
ನಗರಾದ್ಯಂತ ಇದುವರೆಗೂ 8 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಚುನಾವಣೆ ಪೂರ್ವಭಾವಿಯಾಗಿ ಸಮಾಜ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ನಗರದ ಸುಮಾರು 5 ಸಾವಿರಕ್ಕೂ ಹೆಚ್ಚು ರೌಟಿಶೀಟರ್‌ಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ ಎಂದು ಅವರು, 8 ಸಾವಿರ ಜಾಮೀನು ರಹಿತ ವಾರೆಂಟ್‌ಗಳಿದ್ದು, ಈ ಪೈಕಿ 5 ಸಾವಿರ ಮಂದಿಗೆ ವಾರೆಂಟ್ ಹೊರಡಿಸಲಾಗಿದೆ ಎಂದು ಹೇಳಿದರು.
ಹಣ ರಾಜಕೀಯ ಪಕ್ಷಗಳದ್ದಲ್ಲ: ಶುಕ್ರವಾರ ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದ 1.50 ಕೋಟಿ ರೂ. ಪತ್ತೆ ಪ್ರಕರಣದ ತನಿಖೆ ವೇಳೆ ರಾಜಕೀಯ ಪಕ್ಷಗಳಿಗೆ ಹಣ ಸೇರಿಲ್ಲ ಎಂದು ತಿಳಿದುಬಂದಿದೆ. ಜಪ್ತಿ ವೇಳೆ ಕಾರಿನಲ್ಲಿ ಯಾವುದೇ ರಾಜಕೀಯ ಪಕ್ಷಗಳ ಚಿಹ್ನೆ ಅಥವಾ ಗುರುತು ಕಂಡುಬಂದಿಲ್ಲ. ತನಿಖೆಯ ಮುಂದುವರೆದ ಭಾಗವಾಗಿ ಆದಾಯ ತೆರಿಗೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.