Advertisement

ಮಕ್ಕಳಿಂದಲೇ ಗ್ರಂಥಾಲಯ ಸ್ಥಾಪನೆ

10:44 AM Jan 14, 2019 | Team Udayavani |

ಮಸ್ಕಿ: ಪಟ್ಟಣದ ಬಯ್ನಾಪುರ ಮಹಾಂತಮ್ಮ ಲಿಂಗನಗೌಡ ಮೆಮೋರಿಯಲ್‌ ಪ್ರೈಮರಿ ಶಾಲೆ ಹೊಸ ಹೊಸ ವಿನೂತನ ಪ್ರಯೋಗಗಳನ್ನು ಮಾಡುವ ಮೂಲಕ ಪಾಲಕರ ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಪಟ್ಟಣದ ಬಹುತೇಕ ಶಾಲಾ-ಕಾಲೇಜು ಗಳಲ್ಲಿ ಹೊಸ ವರ್ಷವನ್ನು ಕೇಕ್‌ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸುವುದು ವಾಡಿಕೆ. ಆದರೆ ಬಿಎಂಎಲ್‌ ಶಾಲೆಯಲ್ಲಿ ಈ ವರ್ಷ ವಿಭಿನ್ನವಾಗಿ ಹೊಸ ವರ್ಷ ಆಚರಿಸಲಾಯಿತು.

ಮುಖ್ಯೋಪಾಧ್ಯಾಯ ಮೌನೇಶ ಹೊಸಮನಿ ಶಾಲೆಯಲ್ಲಿ ಗ್ರಂಥಾಲಯ ಇರದಿದ್ದನ್ನು ಕಂಡು ಹೊಸ ವರ್ಷದಲ್ಲಿ ಮಕ್ಕಳಿಗೆ ಗ್ರಂಥಾಲಯ ಸ್ಥಾಪಿಸಲು ಪ್ರೇರಣೆ ನೀಡಿದ್ದಾರೆ. ಅದರಂತೆ ಮಕ್ಕಳು ಪುಸ್ತಕಗಳನ್ನು ದೇಣಿಗೆ ನೀಡಿ ಗ್ರಂಥಾಲಯ ಸ್ಥಾಪಿಸಿದ್ದು ಮೆಚ್ಚುಗೆಗೆ ಕಾರಣವಾಗಿದೆ.

ಪಾಲಕರಿಂದ ಹಣ ಪಡೆದು ಪುಸ್ತಕ ಖರೀದಿಸುವುದಕ್ಕಿಂತ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಹಿರಿಯರು ಓದಿದ ಪುಸ್ತಕಗಳನ್ನು ಶಾಲೆಯ ಗ್ರಂಥಾಲಯಕ್ಕೆ ದೇಣಿಗೆ ಕೊಡುವಂತೆ ಸೂಚಿಸಿದಾಗ ವಿದ್ಯಾರ್ಥಿಗಳಿಂದ ಅಂದಾಜು 20 ಸಾವಿರ ರೂ.ಮೌಲ್ಯದ 800 ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯ ಸ್ಥಾಪಿಸಿ ಮಾದರಿಯಾಗಿದ್ದಾರೆ.

ಮಕ್ಕಳ ಆಸಕ್ತಿ ಮತ್ತು ಶಿಕ್ಷಕರ ಕಾಳಜಿಯಿಂದ ಪಾಲಕರೊಬ್ಬರು ಶಾಲೆಗೆ ಪುಸ್ತಕ ಸಂಗ್ರಹಕ್ಕಾಗಿ 10 ಸಾವಿರ ರೂ. ಮೌಲ್ಯದ ಅಲ್ಮೇರಾ ದೇಣಿಗೆ ನೀಡಿದರೆ, ಪ್ರೌಢಶಾಲೆ ಶಿಕ್ಷಕರು 10 ಸಾವಿರ ರೂ. ದೇಣಿಗೆ ಗ್ರಂಥಾಲಯ ಸ್ಥಾಪನೆಗೆ ಸಾಥ್‌ ನೀಡಿದ್ದಾರೆ.

Advertisement

ಬ್ಯಾಗ್‌ ಲೆಸ್‌ ಡೇ: ಮಕ್ಕಳಿಗೆ ಪ್ರತಿದಿನ ಪುಸ್ತಕದ ಭಾರ ಕಡಿಮೆ ಮಾಡುವ ಉದ್ದೇಶದಿಂದ ಕ್ಲಾಸ್‌ ವರ್ಕ್‌ ಬುಕ್ಸ್‌ಗಳನ್ನು ತರಗತಿ ಕೊಠಡಿಯಲ್ಲಿಡುವ ವಾರಕ್ಕೆ ಒಂದು ದಿನ ಬ್ಯಾಗ್‌ ರಹಿತ (ಬ್ಯಾಗ್‌ ಲೆಸ್‌ ಡೇ) ಶಾಲೆಗೆ ಬರುವಂತೆ ಮಾಡುವ ಮೂಲಕ ಶಿಕ್ಷಕರು ವಿಶೇಷ ಕಾಳಜಿ ವಹಿಸಿದ್ದಾರೆ.

ವಿಶೇಷ ಪ್ರಾತ್ಯಕ್ಷಿಕೆ: ಪ್ರತಿವಾರ ಒಂದು ದಿನ ಮಕ್ಕಳು ಶಾಲೆಯ ಪಠ್ಯದ ಜತೆಗೆ ಜನರು ಬಳಸುವ ದವಸ-ಧಾನ್ಯಗಳನ್ನು ಬೆಳೆಯುವ ಕುರಿತು ಪ್ರಾತ್ಯಕ್ಷಿಕೆ, ಬಣ್ಣಗಳ ಗುರುತಿಸುವಿಕೆ, ಪಶು ಪಕ್ಷಿಗಳ ಮಾಹಿತಿ ಮತ್ತು ಅವುಗಳ ಧ್ವನಿ ಪರಿಚಯ ಮಾಡಿಸುವ ಕೆಲಸ ಮಾಡುತ್ತಿದ್ದಾರೆ.

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪುಸ್ತಕ ಪಾಠದ ಜತೆಗೆ ಇತರೆ ವಿಷಯಗಳ ಕುರಿತು ಮಾಹಿತಿ ನೀಡಿ ಮಕ್ಕಳಲ್ಲಿ ಕುತೂಹಲ ಮೂಡಿಸಿ ಇನ್ನೂ ಹೆಚ್ಚಿನದನ್ನು ಕಲಿಯುವಂತೆ ಮಾಡುತ್ತಾರೆ. ಓದಿನ ಜತೆ ಆಟ ಮುಖ್ಯವಾಗಿದ್ದು ಮಕ್ಕಳಿಗೆ ನಿಯಮಿತವಾಗಿ ದೇಶಿ ಆಟಗಳನ್ನು ಆಡಿಸುತ್ತಿದ್ದು ಪ್ರತಿ ಸ್ಪರ್ಧೆಯಲ್ಲಿ ಗೆದ್ದವರಿಗೆ ಪುಸ್ತಕಗಳ ಬಹುಮಾನ ನೀಡುವ ಪರಿಪಾಠ ಹಾಕಿಕೊಂಡಿದ್ದಾರೆ.

ಮಕ್ಕಳಿಗೆ ಅಷ್ಟೆ ಅಲ್ಲ ಪಾಲಕರ ಸಭೆ ನಡೆಸಿ ಮಕ್ಕಳಿಗೆ ಆಟ-ಊಟ-ಪಾಠಗಳ ಸಮತೋಲನ ಕಾಯ್ದುಕೊಳ್ಳುವಂತೆ ವಿಶೇಷ ತಜ್ಞರನ್ನು ಕರೆಸಿ ಉಪನ್ಯಾಸ ಏರ್ಪಡಿಸುವ ಮೂಲಕ ಪಾಲಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಇದು ಜನರಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next