Advertisement
ಹೀಗೊಂದು ಕರೆ ಬಂದರೆ ಅಚ್ಚರಿಯೇನಿಲ್ಲ! ಇದು ಬೈಂದೂರು ವಲಯದ ಶಿಕ್ಷಕರು ತಮ್ಮ ಶಾಲೆಯ ಎಸೆಸೆಲ್ಸಿ ಓದುತ್ತಿರುವ ಮಕ್ಕಳನ್ನು ಖುದ್ದಾಗಿ ವಿಚಾರಿಸುವ ಬಗೆ. ರಾತ್ರಿ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಆ ವಿದ್ಯಾರ್ಥಿ ಟೀವಿ, ಸಿರೀಯಲ್ ಅಥವಾ ಇನ್ಯಾವುದೋ ರಿಯಾಲಿಟಿ ಶೋ ನೋಡದೇ, ಓದಿನತ್ತ ಹೆಚ್ಚಿನ ಗಮನ ಕೇಂದ್ರಿಕರಿಸಬೇಕು ಎನ್ನುವ ಉದ್ದೇಶದಿಂದ ನಿತ್ಯ ಕರೆ ಮಾಡುವ ಪ್ರಯೋಗವೊಂದನ್ನು ಆರಂಭಿಸಿದ್ದಾರೆ.
ಉಡುಪಿ ಜಿಲ್ಲೆ ಕಳೆದ ಬಾರಿ ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿತ್ತು. ಆದರೆ ಜಿಲ್ಲೆಯಲ್ಲಿರುವ ಒಟ್ಟು 5 ವಲಯಗಳ ಪೈಕಿ ಕಡಿಮೆ ಫಲಿತಾಂಶ ಬರುವ ವಲಯ ಎನ್ನುವ ಹಣೆಪಟ್ಟಿ ಅಂಟಿಕೊಂಡಿರುವ ಬೈಂದೂರು ವಲಯವು ಈ ಬಾರಿಯಾದರೂ ಫಲಿತಾಂಶ ಹೆಚ್ಚಿಸುವ ಮೂಲಕ ಜಿಲ್ಲೆಯ ವಲಯವಾರು ಪಟ್ಟಿಯಲ್ಲಿ ಪ್ರಗತಿ ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ “ಟಾರ್ಗೆಟ್ -90′ ಯೋಜನೆಯೊಂದಿಗೆ ಈ ತರಹದ ವಿಭಿನ್ನವಾದ ಪ್ರಯೋಗಗಳನ್ನು ಮಾಡುತ್ತಿದೆ. ಏನಿದರ ಉದ್ದೇಶ ?
ಇನ್ನೀಗ ಪರೀಕ್ಷಾ ಸಮಯ. ಈಗಿನಿಂದಲೇ ವಿದ್ಯಾರ್ಥಿಗಳು ಮಾತ್ರವಲ್ಲ ಶಿಕ್ಷಕರು ಸಹ ಉತ್ತಮ ಫಲಿತಾಂಶಕ್ಕಾಗಿ ಸರ್ವ ರೀತಿಯಲ್ಲೂ ಅಣಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾತ್ರಿ 7 ರಿಂದ 9 ರವರೆಗೆ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಸಮಯವಾಗಿದ್ದು, ಆದರೆ ಈ ಅವಧಿಯಲ್ಲಿಯೇ ಹೆತ್ತವರು ಮನೆಯಲ್ಲಿ ಟೀವಿ ನೋಡುತ್ತಿದ್ದರೆ ವಿದ್ಯಾರ್ಥಿಗಳು ಓದಿನತ್ತ ಗಮನ ಕೇಂದ್ರಿಕರಿಸಲು ಕಷ್ಟವಾಗುತ್ತಿದೆ. ಆ ನಿಟ್ಟಿನಲ್ಲಿ ಅವರ ಗಮನ ಓದಿನತ್ತ ಮಾತ್ರ ಇರುವಂತಾಗಲು ಇಲಾಖೆ ಈ ನಡೆಯನ್ನು ಅನುಸರಿಸಿದೆ.
Related Articles
ಬೈಂದೂರು ವಲಯದಲ್ಲಿ 16 ಸರಕಾರಿ, 5 ಅನುದಾನಿತ ಹಾಗೂ 11 ಅನುದಾನ ರಹಿತ ಸೇರಿ ಒಟ್ಟು 32 ಪ್ರೌಢಶಾಲೆಗಳಿದ್ದು, ಸುಮಾರು 2,273 ಮಂದಿ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಬೈಂದೂರು ವಲಯವು 2015ರಲ್ಲಿ ಶೇ. 91.99, 2016ರಲ್ಲಿ ಶೇ. 87.91, 2017ರಲ್ಲಿ ಶೇ. 78.58 ಹಾಗೂ 2018ರಲ್ಲಿ 85.09 ಫಲಿತಾಂಶ ಗಳಿಸಿತ್ತು.
Advertisement
ಸಿದ್ಧತೆ ಬಗ್ಗೆ ಪರಿಶೀಲನೆಎಸೆಸೆಲ್ಸಿ ಪರೀಕ್ಷೆಗೆ ಇನ್ನಿರುವುದು 60 ದಿನಗಳಷ್ಟೇ. ಈಗಿನಿಂದಲೇ ಮಕ್ಕಳು ಓದಿನತ್ತ ಹೆಚ್ಚಿನ ಗಮನ ವಹಿಸಬೇಕು ಹಾಗೂ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಪ್ರತಿ ಶಾಲೆಯ ಇಬ್ಬರು ಶಿಕ್ಷಕರು ಪ್ರತಿ ದಿನ (ಹೆಚ್ಚಿನ ಮಕ್ಕಳಿರುವ ಶಾಲೆಯಿದ್ದರೆ ಇನ್ನಷ್ಟು ಶಿಕ್ಷಕರು ಕರೆ ಮಾಡುತ್ತಾರೆ.) ತಲಾ 15 ಮಂದಿ ವಿದ್ಯಾರ್ಥಿಗಳಿಗೆ ಕರೆ ಮಾಡಿ ಅವರ ಓದಿನ ಕ್ರಮ, ವೇಳಾಪಟ್ಟಿ ಸಿದ್ಧಪಡಿಸುವ ಕುರಿತು, ಪರೀಕ್ಷಾ ವಿಚಾರವಾಗಿ ಅನುಮಾನಗಳಿದ್ದರೆ ಪರಿಹರಿಸುವ, ಸೂಕ್ತ ಸಲಹೆ, ಸೂಚನೆಗಳನ್ನು ಕೊಡುವುದರ ಜತೆಗೆ ಪೋಷಕರಿಗೂ ಮಕ್ಕಳ ಓದಿನ ಬಗ್ಗೆ ಗಮನಕೊಡಲು ತಿಳಿ ಹೇಳುವ ಪ್ರಯತ್ನವಿದು.
-ಒ.ಆರ್. ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಬೈಂದೂರು – ಪ್ರಶಾಂತ್ ಪಾದೆ