Advertisement
ಮನೆ ಸುತ್ತ ಇರುವ ಹೊಲದ ಜಾಗದಲ್ಲಿ ನಮ್ಮತ್ತೆ ಕಡಿಮೆ ನೀರಿನಲ್ಲಿ ಬರವನ್ನು ಎದುರಿಸುವ ಸಾಮರ್ಥ್ಯ ಇರುವ “ಜವಾರಿ’ ಹುಣಿಸೆ ಗಿಡಗಳನ್ನು ಹಾಕಿದ್ದಳು. ನಾನು ಮದುವೆಯಾಗಿ ಬರುವಷ್ಟರಲ್ಲಿ ಅವೆಲ್ಲ ಮರಗಳಾಗಿದ್ದವು. ಮನೆಗೆ ಬಂದವರೆಲ್ಲ ಮನೆ ಸುತ್ತು ಹುಣಿಸೆ ಮರಗಳಿವೆ, ತುಂಬಾ ಪಿತ್ತ-ದುಷ್ಟ ಶಕ್ತಿಗಳು ಇಲ್ಲೇ ಇರೋದು ಎನ್ನುತ್ತಿದ್ದರು. ಹುಣಿಸೆ ಮರಗಳು ಮನೆ ಸುತ್ತ ಇರುವುದರಿಂದಲೇ ಏನೋ, ಬೇಸಿಗೆಯಲ್ಲಿ ನಮ್ಮ ಮನೆ ತಂಪಾಗಿರುತ್ತದೆ.
Related Articles
Advertisement
ಎಲ್ಲಮ್ಮದೇವಿಯ ಎಡೆಗೆ ಹುಣಿಸೆಖಾರ ಶ್ರೇಷ್ಠ. ಪ್ರತಿವರ್ಷ ಎಡೆಗೋಸ್ಕರ ಹುಣಿಸೆ ಖಾರ ಹಾಕಲೇಬೇಕು. ಅದು ಮೊದಲು ದೇವಿಗೆ ಮೀಸಲು. ಎಂತಹ ಬಡವರಾದರೂ ಕನಿಷ್ಠ ಅರ್ಧ ಕೇಜಿ ಹುಣಿಸೆಖಾರ ಹಾಕದೇ ಇರುವುದಿಲ್ಲ. ರಾಯಚೂರು ಜನ ಹುಣಿಸೆಖಾರ ಎಂದರೆ, ಧಾರವಾಡ ಹುಬ್ಬಳ್ಳಿ ಕಡೆ ಹುಣಿಸೆ ತೊಕ್ಕು, ಹುಣಿಸೆ ಚಟ್ನಿ ಎಂದೆಲ್ಲ ಕರೆಯುತ್ತಾರೆ. ಇನ್ನು ಮಾಡುವ ವಿಧಾನವು ವಿಶೇಷ. ಡೋರು ಹುಣಿಸೆಕಾಯಿಯನ್ನು ಮರದಿಂದ ಹರಿದ ತಕ್ಷಣ, ತೊಳೆದು ನೀರೆಲ್ಲ ಸೋಸಿ ಉಪ್ಪಿನೊಂದಿಗೆ ಅರೆಯುತ್ತಾರೆ. ಇದಕ್ಕೂ ಮೊದಲು ಮೆಂತ್ಯ ಹಾಗೂ ಅರಸಿನವನ್ನು ಪುಡಿಮಾಡಿ ನೆನೆಸಿ ರೆಡಿ ಮಾಡಿ ಇಟ್ಟುಕೊಂಡಿರುತ್ತಾರೆ. ಇದನ್ನು ಅರಿಯಲು ವಿಶೇಷವಾದ ಹಾಸುಗಲ್ಲು ಹಾಗೂ ಗುಂಡುಕಲ್ಲು ಇರುತ್ತದೆ. ಮಣಗಟ್ಟಲೆ (10 ಕೆಜಿ) ಹಾಕುವಾಗ ಕನಿಷ್ಠ ನಾಲ್ಕು ಹೆಣ್ಣು ಮಕ್ಕಳು ಹುಣಿಸೆಖಾರ ಸಿದ್ಧಪಡಿಸಲು ಬೇಕೇಬೇಕು. ಇತ್ತೀಚೆಗೆ ಪಟ್ಟಣಗಳಲ್ಲಿ ದೋಸೆಹಿಟ್ಟು ರುಬ್ಬುವ ಯಂತ್ರದಲ್ಲಿಯೇ ಹುಣಿಸೆಕಾರವನ್ನು ರುಬ್ಬಿ ಕೊಡಲಾಗುತ್ತದೆ. ದೋಸೆ ಆದರೆ ಕಲ್ಲಿನಿಂದ ಅರೆದ ಹುಣಿಸೇಖಾರದ ಅದ್ಭುತ ರುಚಿಯೇ ಬೇರೆ. ಇದನ್ನು ಎಲ್ಲಮ್ಮದೇವಿಯ ಎಡೆಗಾಗಿ ಮಾಡುವುದರಿಂದ ಹೆಣ್ಮುಮಕ್ಕಳು ಅತೀ ಶ್ರದ್ಧೆ ಹಾಗೂ ಶುಚಿತ್ವದಿಂದ ಮಾಡುತ್ತಾರೆ. ಮೊದಲೆಲ್ಲ ಮಣಗಟ್ಟಲೆ ಹಾಕಿದ ಹುಣಿಸೆ ಖಾರವನ್ನು ಮಣ್ಣಿನ ಪಡಗಗಳಲ್ಲಿ ತುಂಬಿಬಿಡುತ್ತಿದ್ದರು. ಈಗ ಅರ್ಧ ಕೆಜಿ ಅಥವಾ ಒಂದು ಕೆಜಿ ಹಾಕುವುದರಿಂದ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿಡುತ್ತಾರೆ. ಹುಣಿಸೇಖಾರ ಹಾಕಿದ ದಿನ ಸಾಯಂಕಾಲ ಭಕ್ತಿಯಿಂದ ಮನೆಗೆ ಲಕ್ಷ್ಮೀ¾ ಬಂದಳೆಂದು ಹೊಸ ಹುಣಿಸೆಖಾರವನ್ನು ಪೂಜಿಸುತ್ತಾರೆ. ಉಳ್ಳವರು ಊರಗೌಡರು ಈಗಲೂ ಮಣಗಟ್ಟಲೆ ಹುಣಿಸೆ ಖಾರವನ್ನು ಹಾಕುತ್ತಾರೆ. ಹುಣಿಸೇ ಖಾರವನ್ನು ಕೇಳಲು ಬಂದವರಿಗೆ ಇಲ್ಲ ಅನ್ನದೆ ಕೊಡುತ್ತಾರೆ. ಸಣ್ಣಮಕ್ಕಳಿಗೆ ಘನ ಆಹಾರವನ್ನು ಪ್ರಾರಂಭಿಸುವಾಗ ಮೆತ್ತನೆಯ ಅನ್ನ ತುಪ್ಪ ಹಾಗೂ ಹುಣಸೇಖಾರವನ್ನು ತಿನ್ನಿಸುತ್ತಾರೆ. ಅಥವಾ ಅನ್ನ ಹಾಲು ಹುಣಿಸೆಖಾರ ತಿನ್ನಿಸುತ್ತಾರೆ. ಕರುಗಳಿಗೆ ಹುಲ್ಲು ತಿನ್ನಿಸುವ ಅಭ್ಯಾಸ ಮಾಡಿಸಲು ಮೆತ್ತನೆಯ ಜೋಳದ ರೊಟ್ಟಿಗೆ ಹುಣಸೆಖಾರ ತಿನ್ನಿಸುತ್ತಾರೆ. ರಾಸುಗಳ ನಾಲಿಗೆಯಲ್ಲಿ ಮುಳ್ಳಾದರೆ ಹುಣಿಸೆ ಖಾರ ನೆಕ್ಕಿಸುತ್ತಾರೆ. ಜ್ವರ ಬಂದು ನಾಲಿಗೆ ರುಚಿ ಹೋದರೆ ಹುಣಿಸೆ ಖಾರದೊಂದಿಗೆ ಊಟ ಮಾಡುತ್ತಾರೆ. ಎಂತಹ ಭೂರಿಭೋಜನವಿರಲಿ, ಹುಣಿಸೆಖಾರ ಇಲ್ಲದೆ ಹೋದರೆ ಊಟವನ್ನು ಯಾರೂ ಮೆಚ್ಚುವುದಿಲ್ಲ. ಬಿಸಿ ಜೋಳದ ರೊಟ್ಟಿಯ ಜೊತೆಯಲ್ಲಿ ಹುಣಿಸೆಖಾರ ತುಪ್ಪವಿದ್ದರೆ ಎರಡು ರೊಟ್ಟಿ ಹೆಚ್ಚಿಗೆ ಹೋಗುತ್ತದೆ. ನಮ್ಮತ್ತೆ ಹೇಳುತ್ತಿದ್ದರು, “ಊಟ ಜೊತೆ ಹುಣಿಸೆಖಾರವಿದ್ದರೆ ಊಟದ ರುಚಿ ಹೆಚ್ಚಿಸುತ್ತದೆ. ಆದರೆ, ಈಗಿನ ವೈದ್ಯರ ಪ್ರಕಾರ ಹುಣಿಸೆಕಾರ ಅಸಿಡಿಟಿ ಉಂಟುಮಾಡು
ತ್ತದೆ ತಿನ್ನಬೇಡಿ ಎನ್ನುತ್ತಾರೆ. ಹುಣಿಸೇಕಾರದ ರುಚಿ ಗೊತ್ತಿರುವವರು ಅದನ್ನು ಹೇಗೆ ಬಿಡುತ್ತಾರೆ?’ಮುಂದೆ ಬರುವುದೇ ಹುಣಿಸೆ ಹಣ್ಣಿನ ಕಾಲ. ಹುಣಿಸೆಹಣ್ಣು ಹೆಸರು ಒಂದು ಆದರೆ, ಅದರಲ್ಲಿರುವ ವೈವಿಧ್ಯತೆ ಹೇಳತೀರದು. ಎರಡು ಬೋಟಿನ ಒಂದೇ ಗೊಂಚಲಿನಲ್ಲಿ ಹತ್ತಾರು ಕಾಯಿ ನೇತಾಡುವ ಮರ, ಎರಡು ಬೆರಳು ಅಗಲದ ನೀಲವಾಗಿ ಪಟ್ಟಿ ಆಕಾರದ ಹುಣಿಸೆಹಣ್ಣು, ಜಾಂಗೀರು ಆಕಾರದ ಹುಣಿಸೆಹಣ್ಣು. ಎರಡು-ಮೂರು ಬೋಟಿನ ಒಂಟಿಯಾಗಿ ನೇತಾಡುವ ಹುಣಿಸೆಹಣ್ಣು. ಹುಣಿಸೆಹಣ್ಣಿನ ಬಣ್ಣದಲ್ಲಿಯೂ ವಿವಿಧ ಚಂದದ ಕೆಂಪು ಬಣ್ಣ, ಇದ್ದಿಲ ಮಸಿ ಬಣ್ಣ , ಗಾಢ ಕೆಂಪು ಬಣ್ಣ ರುಚಿಯೂ ಅಷ್ಟೇ, ಕಡಕ್ ಹುಳಿ. ಬೆಲ್ಲದಷ್ಟು ಸಿಹಿಯಾಗಿರುವ ಹುಣಿಸೆಹಣ್ಣು ಕೂಡಾ ಇದೆ. ರೆಂಬೆ ಅಲ್ಲಾಡಿಸಿದರೆ ಪಟಪಟ ಉದುರುವ, ಕುಡುಗೋಲಿನಿಂದ ಹಾಕಿ ಎಳೆದರೂ ಬಾರದ ಹುಣಿಸೆಹಣ್ಣಿನ ಪ್ರಕಾರಗಳಿವೆ. ಇಪ್ಪತ್ತೈದು ವರ್ಷಗಳ ಹಿಂದೆ ಅಣ್ಣಿಗೇರಿಯ ನಡುಕಟ್ಟಿನ್ ಅವರ ಮನೆಗೆ ಹೋಗಿದ್ದೆ. ಅವರ ಹುಣಿಸೆಹಣ್ಣನ್ನು ಪ್ರತ್ಯೇಕಿಸಲು ವಿಶೇಷವಾದ ಯಂತ್ರವನ್ನು ಕಂಡುಹಿಡಿದು ಉಪಯೋಗಿಸುತ್ತಿದ್ದರು. ಹುಣಿಸೇಹಣ್ಣನ್ನು ಮರದಿಂದ ಹರಿಯಲು ಟ್ರ್ಯಾಕ್ಟರ್‌ಗೆ ವಿಶೇಷವಾದ ಯಂತ್ರವನ್ನು ಜೋಡಿಸಿದ್ದರು. ಹುಣಿಸೇಹಣ್ಣಿನ ನಾರು, ತೊಗಟೆ, ಬೀಜವನ್ನು ಪ್ರತ್ಯೇಕಿಸಲು ವಿಶೇಷವಾದ ಯಂತ್ರ ಬಳಸುತ್ತಿದ್ದರು. ಹಣ್ಣಿನ ಸಿಪ್ಪೆ ಮತ್ತು ಬೀಜ ಪಶು ಆಹಾರಕ್ಕೆ ಮಾರಾಟ ಮಾಡುತ್ತಿದ್ದರು. ಹುಣಿಸೇಹಣ್ಣನ್ನು ಮಾರಾಟ ಮಾಡುವುದರ ಜೊತೆಗೆ ಅದರಿಂದ ತಯಾರಿಸಿದ ಚಾಕಲೇಟ್ ಅನ್ನು ಕೂಡಾ ಮಾರಾಟ ಮಾಡುತ್ತಿದ್ದರು. ಹುಣಿಸೆಹಣ್ಣನ್ನು ಮಾರಾಟ ಮಾಡಿ “ಟೀಕೆ ಮಣಿ’ (ಒಂದು ವಿಧದ ಚಿನ್ನ ನೆಕ್‌ಲೆಸ್) ಮಾಡಿಸಿಕೊಂಡ ಹೆಣ್ಣು ಮಕ್ಕಳೆಷ್ಟೋ? ಹುಣಿಸೇಹಣ್ಣು ಹಾಗೂ ಬೆಲ್ಲದ ಜ್ಯೂಸ್ ಬೇಸಿಗೆಯಲ್ಲಿ ತಂಪು ನೀಡುತ್ತದೆ. ಉರಿಮೂತ್ರ ಶಮನಕಾರಿ. ಹುಣಿಸೇಮರ ಮರಮುಟ್ಟುಗಳಿಗೆ ಉಪಯೋಗ, ಮರದ ತೊಗಟೆ ಔಷಧಿ ಗುಣ ಹೊಂದಿದೆ. ಎಂತಹ ಬರಗಾಲದಲ್ಲೂ ಹಣ್ಣು ಹೂಬಿಟ್ಟು ನಳನಳಿಸುತ್ತಿರುತ್ತದೆ ಹುಣಿಸೇ ಮರ. ಆದರೆ, ಹವಾಮಾನ ವೈಪರೀತ್ಯ ಹುಣಿಸೇ ಮರಕ್ಕೂ ತಟ್ಟಿದೆ. ಮೇ-ಜೂನ್ ತಿಂಗಳಲ್ಲಿ ತುಂತುರು ಮಳೆಯಾಗದಿದ್ದರೆ ಹುಣಿಸೇ ಗಿಡ ಚಿಗುರುವುದಿಲ್ಲ. ವರ್ಷಾನುಗಟ್ಟಲೆ ಕಾಯಿಬಿಡದೆ ಹಾಗೆಯೇ ನಿಂತ ಮರಗಳ ಸಂಖ್ಯೆಯೇ ಜಾಸ್ತಿಯಾಗುತ್ತದೆ. ಎಸ್.ಬಿ. ಅನುರಾಧಾ, ಮಾನ್ವಿ