Advertisement
ಅಷ್ಟು ಹೇಳಿದ ಮೇಲೆ ಹೊಸತಾಗಿ ಇನ್ವಿಟೇಷನ್ ಏನು ಕಳಿಸೋದು ಬೇಡ ಅಂದುಕೊಂಡು ಮಾರನೆಯ ದಿನವೇ ಅವಳ ಮನೆ ಬಾಗಿಲು ತಟ್ಟಿದ್ದೆ. ಮಧ್ಯಾಹ್ನದ ಹೊತ್ತದು. “”ಅರೇ ಇದೇನೇ? ಇದ್ದಕ್ಕಿದ್ದಂತೆ ಹಾಜರಿ ಹಾಕಿದೀಯಾ. ನ ಚಿಟ್ಟಿ ನ ಕೋಯಿ ಸಂದೇಸ್” ಎನ್ನುತ್ತಲೇ ಬಾಗಿಲಿನಿಂದ ತನ್ನ ದೇಹ ಸರಿಸಿ ನನಗೆ ಒಳ ನುಗ್ಗಲು ಜಾಗ ಬಿಟ್ಟಳು. “”ಒಳ್ಳೆಯ ಕೆಲಸಕ್ಕೆ ಮುಹೂರ್ತ ಅಂತ ಇರೋದಿಲ್ಲ ಕಣೇ. ಯಾವಾಗ ಅದನ್ನು ಮಾಡ್ತೀವೋ ಆಗಲೇ ಒಳ್ಳೆಯ ಮುಹೂರ್ತ, ಈಗೇನು ಕುಡಿಯಕ್ಕೆ ಏನದ್ರೂ ಕೊಡ್ತೀಯೋ ಅಥಾÌ ಅದನ್ನೂ ನಾನೇ ತೆಗೋಬೇಕಾ” ಎಂದು ಅವಳು ಕುಳಿತು ನೋಡುತ್ತಿದ್ದ ಸೀರಿಯಲ್ಲಿನ ವಿಲನಿಣಿಯಂತಹ ಪೋಸ್ ಕೊಟ್ಟೆ.
Related Articles
Advertisement
“”ಅಯ್ಯೋ ಸುಮ್ನಿರು ಮಾರಾಯ್ತಿ. ತರಕಾರಿ ಕತ್ತರಿಸುವ ತರಹೇವಾರಿ ಮೆಷಿನ್ನುಗಳ ಈ ಕಾಲದಲ್ಲಿ ನೀನಿನ್ನೂ ಮೆಟ್ಟುಗತ್ತಿಯÇÉೇ ತರಕಾರಿ ಹೆಚ್ಚುವವಳು ಎಂದು ಗೊತ್ತಾದ್ರೆ ನಿನ್ನನ್ನೂ ಇದೇ ಮ್ಯೂಸಿಯಮ್ಮಿನಲ್ಲಿ ಕೂರಿಸ್ತಾರೆ ಬಾ” ಎಂದು ಹೊರಡುವ ಮನಸ್ಸಿಲ್ಲದ ನನ್ನನ್ನು ಎಳೆದು ಹೊರ ನೂಕಿದಳು.
ದಾರಿಯುದ್ದಕ್ಕೂ ಆ ತುಕ್ಕು ಹಿಡಿದ ಮೆಟ್ಟುಗತ್ತಿಯ ಗತವೈಭವ ಹೇಗಿದ್ದಿರಬಹುದು ಎಂದು ಮನ ಲೆಕ್ಕ ಹಾಕುತ್ತಿತ್ತು.ಶಾಲೆಗೆ ರಜೆ ಸಿಕ್ಕಿದ ಕೂಡಲೇ ಅಜ್ಜನ ಮನೆಗಟ್ಟಿಯೋ ನಾವು ಗಟ್ಟಿಯೋ ಎಂದು ನೋಡಲು ಎರಡು ತಿಂಗಳು ಅಲ್ಲೇ ಟೆಂಟ್ ಹಾಕಿ ಕುಳಿತು ಅಪ್ಪ-ಅಮ್ಮಂದಿರ ಬಿಪಿ ಕಡಿಮೆ ಮಾಡುತ್ತಿದ್ದ ಮಕ್ಕಳು ನಾವು. ರಜೆಯಲ್ಲಿ ಮುಖ್ಯ ಕೆಲಸ ಎಂದರೆ ಗೇರು ಬೀಜ ಹೆಕ್ಕುವುದು. ಪುಳ್ಳಿಯಕ್ಕಳಿಗೆಲ್ಲ ಒಂದೊಂದು ಕೊಕ್ಕೆಯೂ, ಹೆಕ್ಕಿದ ಗೇರುಬೀಜಗಳನ್ನು ಹಾಕಲು ಒಂದು ಬಿದಿರಿನ ಬುಟ್ಟಿ ಸಿದ್ಧವಾಗಿರುತ್ತಿತ್ತು. ನಾವೆಲ್ಲ ಭಕ್ತಿಯಿಂದ ಗೇರುಬೀಜ ಕೊಯ್ಯುವ ಮತ್ತು ಒಂದೂ ಬಿಡದಂತೆ ಹೆಕ್ಕುವ ಕೆಲಸವನ್ನು ಮಾಡುತ್ತಿ¨ªೆವು. ಇದು ಕೆಲಸದ ಮೇಲಿನ ನಮ್ಮ ಶ್ರದ್ಧೆ ಎಂದೇನಾದರೂ ನೀವು ತಿಳಿದುಕೊಂಡರೆ ಅದು ನಿಮ್ಮ ತಪ್ಪಭಿಪ್ರಾಯ. ಆ ಕೆಲಸದ ಮೇಲಿನ ಪ್ರೀತಿಗೆ ಕಾರಣ ಮುತ್ತು ಎಂಬ ಅಜ್ಜಿ. ಮೈಮೇಲಿನ ಮೂಳೆ ಎಣಿಸಬಹುದಾದಂತಹ ಕೃಶ ಶರೀರೆಯಾದ ಮುತ್ತುವಿನ ನಿಧಾನಗತಿಯ ನಡಿಗೆಯನ್ನು ನೋಡಿ “ಇವಳೆಂಥ ಕೆಲಸ ಮಾಡ್ಲಿಕ್ಕುಂಟಾ, ತಿಂಡಿಯಾಸೆಗೆ ಬರುವುದಾ!’ ಎಂದೆಲ್ಲಾ ನಾವು ನಾವೇ ಮಾತಾಡಿಕೊಳ್ಳುತ್ತಿ¨ªೆವು. ಅದು ನಮ್ಮ ಅಜ್ಞಾನ ಎಂದು ಗೊತ್ತಾಗಲು ಹೆಚ್ಚು ಸಮಯವೇನೂ ಬೇಕಾಗುತ್ತಿರಲಿಲ್ಲ. ಬಾಯಿ ತುಂಬಾ ಕವಳ ಹಾಕಿಕೊಂಡು ಆಕೆ ಗೇರುಬೀಜದ ರಾಶಿಯ ಪಕ್ಕ ನಿಂತೊಡನೇ ನಮ್ಮ ಓರಗೆಯವಳೇ ಆದ ಅವಳ ಪುಳ್ಳಿ ಮೆಟ್ಟುಗತ್ತಿಯೊಂದನ್ನು ಅಜ್ಜಿಯ ಪಕ್ಕ ಇಡುತ್ತಿದ್ದಳು. ಅದರಲ್ಲಿ ಸೊಂಟ ಹಿಡಿದುಕೊಂಡು ಕುಳಿತುಕೊಳ್ಳುವುದಷ್ಟೇ. ಆಕೆ ಸಿಂಹವಾಹಿನಿಯಾದ ದುರ್ಗೆಯಂತೆ ಬದಲಾಗಿ ಬಿಡುತ್ತಿದ್ದಳು. ಪಕ್ಕದಲ್ಲಿದ್ದ ಗೇರುಬೀಜದ ರಾಶಿ ಕಚ ಕಚನೆ ಅವಳ ಬೆರಳುಗಳಿಂದ ಸೆಳೆಯಲ್ಪಟ್ಟು ಮೆಟ್ಟುಗತ್ತಿಯ ಆಘಾತಕ್ಕೆ ಸಿಲುಕಿ ಎರಡು ಸಮನಾದ ತುಂಡುಗಳಾಗಿ ಹೊರಬೀಳುತ್ತಿದ್ದವು. ಕೆಲಸ ಮುಗಿಯುವವರೆಗೂ ಅದೇ ವೇಗವನ್ನು ಮೈಂಟೇನ್ ಮಾಡುತ್ತಿದ್ದ ಆಕೆ, ಮೆಟ್ಟುಗತ್ತಿಯಿಂದ ಎದ್ದ ಕೂಡಲೇ ಮೊದಲಿನಂತೆ ಬೆನ್ನು ಬಾಗಿದ, ನಿಧಾನಗತಿಯ ಮುತ್ತುವಾಗಿ ಬದಲಾಗುವುದು ನಮಗಚ್ಚರಿ ತರುತ್ತಿತ್ತು. ಇದು ಮೆಟ್ಟುಗತ್ತಿಯ ಮಹಿಮೆಯಲ್ಲದೇ ಇನ್ನೇನು!
ಮಕ್ಕಳಾದ ನಾವು ಮೆಟ್ಟುಗತ್ತಿಯೆಂಬ ಸಿಂಹಾಸವನ್ನೇರಲು ತಪಸ್ಸು ಮಾಡಬೇಕಿತ್ತು, ಅಜ್ಜನೋ ಅಜ್ಜಿಯೋ ಮನೆಯಲ್ಲಿಲ್ಲದ ವೇಳೆಗಾಗಿ. ತೋಟದಿಂದ ಬಾಳೆಎಲೆಯೋ ಅಡಿಕೆ ಹಾಳೆಯೋ ಹೀಗೆ ಎಂತಾದರೂ ಕೈ ಸಿಕ್ಕಿದ್ದನ್ನು ಸಣ್ಣಗೆ ಕೊಚ್ಚುತ್ತ ಕುಳಿತುಕೊಳ್ಳುತ್ತಿ¨ªೆವು. ಆಕಸ್ಮಿಕವಾಗಿ ನಮ್ಮನ್ನದರ ಮೇಲೆ ಕಂಡುಬಿಟ್ಟರಂತೂ ಬೈಗಳಿನ ಸುರಿಮಳೆಯೇ. “”ಹೇ ಮಾರಿ, ಅದರÇÉೆಂತಕೆ ಕೂತದ್ದು, ಕೈ ಕೊಯೊRಂಡು ಹೋದರೆ ನಿನ್ನ ಅಪ್ಪ-ಅಮ್ಮಂಗೆ ಯಾರು ಉತ್ತರ ಹೇಳ್ಳೋರು” ಎನ್ನುವೆಲ್ಲ ಮಂತ್ರಪುಷ್ಪಗಳಿಂದ ನಮಗೆ ಅರ್ಚನೆಯಾಗುತ್ತಿತ್ತು. ಮತ್ತೆ ನಾಲ್ಕು ದಿನ ಅದರ ತಂಟೆಗೆ ಹೋಗದಿದ್ದರೂ ಮೆಟ್ಟುಗತ್ತಿ ನಮ್ಮನ್ನು ಕೂಗಿ ಕರೆಯುತ್ತಿತ್ತು. ಅದರ ಮೇಲೆ ಧೈರ್ಯದಿಂದ ಕುಳಿತುಕೊಳ್ಳಲು ಬರಬೇಕಾದ ಯೋಗ್ಯತೆಯನ್ನು ಕಾಯುತ್ತ ನಮ್ಮನ್ನೇ ಹಳಿದುಕೊಳ್ಳುತ್ತಿದ್ದ ಕಾಲವದು. ಗತವೆಂದೇನೂ, ಈಗಲೂ ಮೆಟ್ಟುಗತ್ತಿ ಗಟ್ಟಿಗಿತ್ತಿಯೇ ಸೈ.
ಸಮಾರಂಭಗಳಲ್ಲಿ ಮುನ್ನಾ ದಿನ ಇದುವೇ ಹೀರೋಯಿನ್. ಹಲಸಿನಕಾಯಿಯನ್ನು ತುಂಡು ಮಾಡಲೋ, ಸಿಹಿಗುಂಬಳದ ಕಲ್ಲಿನಂತಹ ಹೊರಮೈಯನ್ನು ಭಾಗ ಮಾಡಿ ಹಾಕಲೋ, ಗಜಗಾತ್ರದ ಕುಂಬಳವನ್ನು ಕತ್ತರಿಸಿಕೊಡಲೋ, ಕೇನೆ, ಮುಂಡಿಯಂತಹ ಗಟ್ಟಿ ಗಡ್ಡೆಗಳ ಸಿಪ್ಪೆ ತೆಗೆದು ಪಲ್ಲೆಗಳನ್ನಾಗಿಸಲೋ ಮೆಟ್ಟುಗತ್ತಿಗೆ ಮಣೆ ಹಾಕುತ್ತಾರೆ. ಚಾಕು-ಚೂರಿಗಳೇನಿದ್ದರೂ ಸಣ್ಣ ಗಾತ್ರದ ಮೆತ್ತನೆಯ ತರಕಾರಿಗಳಿಗೆ. ಬರೀ ತರಕಾರಿ ಹೆಚ್ಚಲೆಂದು ಮಾತ್ರವಲ್ಲ, ಅಡಿಕೆ ಬೆಳೆಗಾರರಾದ ನಮ್ಮಲ್ಲಿ ಅಡಿಕೆ ಸುಲಿಯಲೆಂದು ತುದಿ ಮಾತ್ರ ಹರಿತವಿರುವ ವಿಶೇಷ ಕತ್ತಿಗಳನ್ನು ಅಳವಡಿಸಿದ ಮೆಟ್ಟುಗತ್ತಿಯೂ ಉಪಯೋಗಿಯೇ. ನನ್ನೂರಿನ ಮಂದಿ ಈಗಲೂ ಮಗಳನ್ನು ಬೆಂಗಳೂರಿನ ಹುಡುಗನಿಗೆ ಮದುವೆ ಮಾಡಿ ಕೊಡುವಾಗ, “ಮೆಟ್ಟುಗತ್ತಿ ಒಂದು ಇಲ್ಲಿಂದಲೇ ತೆಕ್ಕೊಂಡೋಗು ಮಗಾ’ ಎಂದು ತವರುಮನೆಯ ಉಡುಗೊರೆಯಾಗಿ ಕೊಟ್ಟು ಬಿಡುತ್ತಾರೆ. ಅದು ಕೇರಂ ಬೋರ್ಡಿನ ಸ್ಟ್ರೆಕರಿನಂತೆ ಬೆಂಗಳೂರಿಗೆ ಹೋದಷ್ಟೇ ವೇಗದಲ್ಲಿ, “ಥೋ… ಅದನ್ನೆಲ್ಲ ಇಡ್ಲಿಕ್ಕೆ ಜಾಗ ಇಲ್ಲ, ನಾನು ಆನ್ ಲೈನ್‌ನಲ್ಲಿ ವೆಜ್ ಕಟ್ಟರ್ ಆರ್ಡರ್ ಮಾಡಿದ್ದೇನೆ’ ಎಂಬ ಮಾತಿನೊಂದಿಗೆ ಮರಳಿ ಬಂದು ಮನೆ ಅಟ್ಟದಲ್ಲಿ ತಣ್ಣಗೆ ಕುಳಿತುಬಿಡುತ್ತದೆ. ನಮ್ಮ ಪರಿಚಯದವರೊಬ್ಬರಂತೂ ಪೇಟೆಯಲ್ಲಿದ್ದ ಬಸುರಿ ಮಗಳಿಗೆ ಸಹಾಯ ಮಾಡಲೆಂದು ಹೋಗಿ ಅಲ್ಲಿನ ಚಾಕು-ಚೂರಿಗಳಲ್ಲಿ ದಿನದ ಅಡುಗೆ ತರಕಾರಿ ಕತ್ತರಿಸುವುದೂ ಸಾಧ್ಯವಾಗದೇ, ಊರಿನಿಂದ ಸ್ಪೆಷಲ್ ಕಾರಿನಲ್ಲಿ ಮೆಟ್ಟುಗತ್ತಿ ತರಿಸಿಕೊಂಡ ಇತಿಹಾಸವೂ ಇದೆ. ಇಷ್ಟೆಲ್ಲ ಪರಾಕುಗಳನ್ನು ಹೊಂದಿದ್ದರೂ ಈಗ ತನ್ನ ಅರಸೊತ್ತಿಗೆಯ ಕಾಲ ಮುಗಿದು ವಾನಪ್ರಸ್ಥಾಶ್ರಮಕ್ಕೆ ಹೋಗಲೇಬೇಕಾದ ಮಹಾರಾಜನಂತೆ ಕಾಣಿಸುವ ಮೆಟ್ಟುಗತ್ತಿಯ ಮೇಲೆ ಈಗಲೂ ನನಗೆ ಅಭಿಮಾನವೇ. ಕೆಳಗೆ ಆರಾಮವಾಗಿ ಕಾಲು ಚಾಚಿ ಕುಳಿತು ತರಕಾರಿ ಕತ್ತರಿಸುವ ಸಕಲ ಸವಲತ್ತುಗಳನ್ನು ಒದಗಿಸುವ ಮೆಟ್ಟುಗತ್ತಿಗೆ ಸಿಗಬೇಕಾದ ಮರ್ಯಾದೆ ಈಗ ಸಿಗುತ್ತಿಲ್ಲವಲ್ಲ ಎಂಬ ಕೊರಗು ಮಾತ್ರ ನನ್ನದು. ಅನಿತಾ ನರೇಶ ಮಂಚಿ