ಬಹುಶಃ ನಾನು ಪ್ರೈಮರಿ ಏಳನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಮೊದಲ ಸಾರಿ ಟೆಂಟ್‌ನಲ್ಲಿ ಕುಳಿತು ಸಿನಿಮಾ ನೋಡಿದ್ದೆ. ಆಗ ನಾವು ಹೆಗ್ಗಡೆದೇವನ ಕೋಟೆ ತಾಲ್ಲೂಕಿನ, ಸಂತೆ ಸರಗೂರು ಎಂಬ ಊರಿನಲ್ಲಿ ಇದ್ದೆವು. ನಮ್ಮ ಮನೆ ಊರಿನಿಂದ ಹೊರಗಿತ್ತು. ಮನೆಯಿಂದ ಸುಮಾರು 15-20 ಹೆಜ್ಜೆಗಳಷ್ಟು ದೂರದಲ್ಲಿ ಸಿನಿಮಾ ಟೆಂಟ್ ಇತ್ತು. ಅದನ್ನು ನೋಡುವವರೆಗೆ ನನಗೆ ಟೆಂಟ್‌ನ ಕಲ್ಪನೆಯೇ ಇರಲಿಲ್ಲ. ಮಾಸಲು ಬಣ್ಣದ, ದಪ್ಪನೆಯ ಬಟ್ಟೆಯ ಭಾಗಗಳನ್ನು ಜೋಡಿಸಿ ಹೊಲೆದಂತಿದ್ದ ಟೆಂಟ್, ಸಾಧಾರಣ ಗುಡಾರಕ್ಕಿಂತ ಎಷ್ಟೋ ಪಟ್ಟು ದೊಡ್ಡದಾಗಿತ್ತು. ಒಂದು ಊರಿನಲ್ಲಿ ಹಲವು ತಿಂಗಳುಗಳ ಕಾಲ ಸಿನಿಮಾಗಳನ್ನು ಪ್ರದರ್ಶಿಸಿದ ನಂತರ ಟೆಂಟ್ ಮತ್ತೂಂದು ಊರಿಗೆ ಪ್ರಯಾಣಿಸುತ್ತಿತ್ತು. ಸಂಜೆ ಆರು ಗಂಟೆಯಾಗುತ್ತಿದ್ದಂತೆ ನಮೋ ವೆಂಕಟೇಶ ಹಾಡಿನೊಡನೆ ಟೆಂಟ್ ಜೀವ ತಳೆಯುತ್ತಿತ್ತು.
ನಂತರ ಬೊಂಬೆಯಾಟವಯ್ನಾ, ಶಿವಪ್ಪ ಕಾಯೋ ತಂದೆ, ಇತ್ಯಾದಿ ಹಾಡುಗಳನ್ನು ಹಾಕುತ್ತಿದ್ದರು. ಸಿನಿಮಾ ನೋಡಲು ಎರಡು ಶ್ರೇಣಿಯ ಟಿಕೆಟ್‌ಗಳಿದ್ದವು. ಕುರ್ಚಿಗೆ ಎಪ್ಪತ್ತೆçದು ಪೈಸೆ (ಅಥವಾ ಐವತ್ತು ಪೈಸೆಯೋ ಸರಿಯಾಗಿ ನೆನಪಿಲ್ಲ). ನೆಲಕ್ಕೆ ಇಪ್ಪತ್ತೆçದು ಪೈಸೆ. ಆಗ ನಾಲ್ಕಾಣೆಯೂ ಚಲಾವಣೆಯಲ್ಲಿ ಇದ್ದುದರಿಂದ ನೆಲದ ಮೇಲೆ ಕುಳಿತವರನ್ನು ನಾಲ್ಕಾಣೆ ಪ್ರಭುಗಳು ಎಂದು ಕರೆಯುತ್ತಿದ್ದದ್ದೂ ಉಂಟು. ಅವರು ಮನೆಯಿಂದ ಜಮಖಾನ ಅಥವಾ ಚಾಪೆ ತಂದು ಹಾಸಿ ಅದರ ಮೇಲೆ ಕುಳಿತುಕೊಳ್ಳುತ್ತಿದ್ದರು. ಕೆಲವರು ಬೇಕೆಂದೇ ಸ್ಕ್ರೀನ್‌ಗೆ ಹತ್ತಿರದಲ್ಲಿ ಕುಳಿತುಕೊಳ್ಳಲು ಇಷ್ಟಪಡುತ್ತಿದ್ದರು. ಚಳಿಗಾಲದಲ್ಲಿ ಟೆಂಟ್‌ನಲ್ಲಿ ಚಳಿ ಇರುತ್ತಿತ್ತು. ಆದ್ದರಿಂದ ಟವೆಲ್ಲನ್ನೋ, ಪಂಚೆಯನ್ನೋ ಹೊದ್ದು ಕುಳಿತುಕೊಳ್ಳುತ್ತಿದ್ದರು. ಕುಳಿತಲ್ಲೇ ಬೀಡಿ ಸೇದುವುದು ತೀರಾ ಸಾಮಾನ್ಯವಾಗಿತ್ತು. ಆ ಕಾಲದಲ್ಲಿ ನಮ್ಮೂರ ಟೆಂಟ್‌ನಲ್ಲಿ ಪ್ರದರ್ಶಿಸುತ್ತಿದ್ದ ಸಿನಿಮಾಗಳು ಕನ್ನಡ, ತೆಲುಗು ಮತ್ತು ತಮಿಳು ಭಾಷೆಯವು ಮಾತ್ರ. ಪೌರಾಣಿಕ ಸಿನಿಮಾಗಳಲ್ಲಿ ದೇವಾಧಿದೇವತೆಗಳ ಪಾತ್ರಧಾರಿಗಳು ಕಣ್ಣು ಕೋರೈಸುವ ಹೊಳೆಯುವ ಆಭರಣಗಳನ್ನು, ಮಿಂಚುವ ಉಡುಪುಗಳನ್ನು ಧರಿಸಿ ತೆರೆಯ ಮೇಲೆ ಕಾಣಿಸಿಕೊಂಡರೆ, ಸ್ಕ್ರೀನ್‌ಗೆ ಸಮೀಪದಲ್ಲಿ ಕುಳಿತಿದ್ದ ಮಹಿಳೆಯರು ಎದ್ದು ನಿಂತು ಕೈ ಮುಗಿದರೆ, ಪುರುಷರು ಕಾಸುಗಳನ್ನು ಎಸೆದು ತಮ್ಮ ಸಂತೋಷ ವ್ಯಕ್ತಪಡಿಸುತ್ತಿದ್ದರು.
ಸಿನಿಮಾ ಒಂದು ರೀತಿ ಖುಷಿ ಕೊಟ್ಟರೆ ಅರ್ಧ ಸಿನಿಮಾ ನಂತರ ಬರುತ್ತಿದ್ದ ವಿರಾಮ ಮತ್ತೂಂದು ರೀತಿ ಖುಷಿಯುಂಟು ಮಾಡುತ್ತಿತ್ತು. ಕೆಲವರು ಬೀಡಿ, ಸಿಗರೇಟುಗಳನ್ನು ಸೇದಲು ಹೊರಗೆ ಹೋಗುತ್ತಿದ್ದರು. ಅದೇ ಸಮಯಕ್ಕೆ ತಿಂಡಿ ಮಾರುವವರು ಒಳಗೆ ಬರುತ್ತಿದ್ದರು. ಒಬ್ಟಾತ ಬುಟ್ಟಿಯಲ್ಲಿ ಬೇಯಿಸಿದ ಅಥವಾ ಹುರಿದ ಕಡೆÛàಕಾಯಿ ತಂದರೆ ಮತ್ತೂಬ್ಬ ಉಪ್ಪು, ಖಾರ ಹಚ್ಚಿದ ಸೌತೇಕಾಯಿ ಅಥವಾ ಮಾವಿನ ಕಾಯಿ ತರುತ್ತಿದ್ದ. ಮಗದೊಬ್ಬ ಮಸಾಲಾ ವಡೆ, ಕೊಬ್ರಿ ಮಿಠಾಯಿ ತರುತ್ತಿದ್ದ. ಅವುಗಳನ್ನು ತಿನ್ನುತ್ತ, ಸಿನಿಮಾ ನೋಡುತ್ತಿದ್ದರೆ ಆಗ ಸಿಕ್ಕುತ್ತಿದ್ದ ಆನಂದವೇ ಬೇರೆ. ಆದರೆ, ನಮ್ಮಮ್ಮನಿಗೆ ನಾವು ಅವುಗಳನ್ನು ತಿನ್ನುವುದು ಇಷ್ಟವಾಗುತ್ತಿರಲಿಲ್ಲ. ಆದ್ದರಿಂದ ಮನೆಯಲ್ಲಿ ಮಾಡುತ್ತಿದ್ದ ಕುರುಕು ತಿಂಡಿಗಳನ್ನು ಡಬ್ಬಿಗಳಲ್ಲಿ ಹಾಕಿ ಕೊಟ್ಟು ಕಳುಹಿಸುತ್ತಿದ್ದರು. ಹೆಚ್ಚೆಂದರೆ ಕಡ್ಳೆಕಾಯಿ ಕೊಳ್ಳಬಹುದಿತ್ತಷ್ಟೇ. ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಟೆಂಟ್‌ನಲ್ಲಿ ಮಾರುತ್ತಿದ್ದ ತಿಂಡಿಗಳನ್ನು ತಿಂದಾಗ ದೊರೆಯುತ್ತಿದ್ದ ಸಂತೋಷ, ಮನೆಯಿಂದ ತಂದ ತಿಂಡಿಗಳನ್ನು ತಿಂದಾಗ ಸಿಕ್ಕುತ್ತಿರಲಿಲ್ಲ. ನಮ್ಮ ತಂದೆಗೆ ಏನು ಕಾರಣವೋ ರೇಡಿಯೋ ಎಂದರೆ ಅಲರ್ಜಿ. ಆದ್ದರಿಂದ, ಮನೆಯಲ್ಲಿ ರೇಡಿಯೋ ಇರಲಿಲ್ಲ. ನಾವಿದ್ದ ಹಳ್ಳಿಯಲ್ಲಿ ನಮಗಿದ್ದ ಮನರಂಜನೆ ಎಂದರೆ ಸಿನಿಮಾ ಮಾತ್ರ.
ಒಮ್ಮೊಮ್ಮೆ ಅದಕ್ಕೂ ಅಡಚಣೆಯಾಗುತ್ತಿತ್ತು. ಒಮ್ಮೆ ಹೀಗಾಯಿತು. ಟೆಂಟ್‌ನಲ್ಲಿ ಮಾಯಾ ಬಜಾರ್ ಸಿನಿಮಾ ಬಂದಿತ್ತು. ಅದು ತುಂಬಾ ಚೆನ್ನಾಗಿದೆ ಎಂದೂ, ಅದರಲ್ಲಿ ಬಹಳಷ್ಟು ಮಾಯಾಮಂತ್ರದ ದೃಶ್ಯಗಳಿವೆಯಂದೂ, ಬೆಂಗಳೂರಿನಲ್ಲಿದ್ದ ನನ್ನ ಚಿಕ್ಕಮ್ಮಂದಿರು ಶಿಫಾರಸು ಮಾಡಿದ್ದರು. ಆದ್ದರಿಂದ ಮೊದಲನೆಯ ದಿನವೇ ಸಿನಿಮಾ ನೋಡಲು ಹೋದೆವು. ಟೆಂಟ್ ಕಿಕ್ಕಿರಿದು ತುಂಬಿತ್ತು. ಅರ್ಧ ಗಂಟೆ ಕಳೆಯುತ್ತಿದ್ದಂತೆ, ಕರೆಂಟ್ ಕೈ ಕೊಟ್ಟಿತು. ಈಗ ಬರಬಹುದು, ಆಗ ಬರಬಹುದು ಎಂದು ಒಂದು ಗಂಟೆ ಕಾದರೂ ಕರೆಂಟ್ ಬರಲಿಲ್ಲ. ಒಳಗಿದ್ದವರು ಟೆಂಟ್‌ನ ಮಾಲೀಕನನ್ನು ಅವಾಚ್ಯ ಶಬ್ದಗಳಿಂದ ಬೈಯಲು ಪ್ರಾರಂಭಿಸಿದರು. ಮತ್ತೆ ಕೆಲವರು ಸ್ಕ್ರೀನ್‌ಗೆ ಕಲ್ಲೆಸೆದರು. ಪಾಪ ! ಆ ಬಡಪಾಯಿ ಎಲ್ಲವನ್ನೂ ಸಹಿಸಿಕೊಂಡ. ಮಾರನೆಯ ದಿನ ಟಿಕೆಟ್‌ನ ಅರ್ಧ ಭಾಗವನ್ನು ತೋರಿಸಿ ಪೂರ್ತಿ ಸಿನಿಮಾ ನೋಡಬಹುದೆಂದು ಆಶ್ವಾಸನೆ ನೀಡಿದ. ನಾವೂ ಛಲ ಬಿಡದ ತ್ರಿವಿಕ್ರಮನಂತೆ ಒಂದು ದಿನವೂ ತಪ್ಪಿಸದೆ ಒಂದು ವಾರ ಟೆಂಟ್‌ಗೆ ಭೇಟಿಕೊಟ್ಟೆವು. ಯಥಾಪ್ರಕಾರ ಕರೆಂಟ್ ಅರ್ಧ ಗಂಟೆಯಾಗುತ್ತಿದ್ದಂತೆ, ಕೆಲವೊಮ್ಮೆ ಒಂದು ಗಂಟೆ ಕಳೆಯುತ್ತಿದ್ದಂತೆ ಹೋಗುತ್ತಿತ್ತು. ಆಶ್ಚರ್ಯವೆಂದರೆ, ಊರಿನಲ್ಲಿ ಕರೆಂಟ್ ಇದ್ದರೂ ಟೆಂಟ್‌ನಲ್ಲಿ ಮಾತ್ರ ಇರುತ್ತಿರಲಿಲ್ಲ . ಕೊನೆಗೊಮ್ಮೆ ಪೂರ್ತಿ ಸಿನಿಮಾ ನೋಡುವ ಅವಕಾಶ ದೊರೆತಿತ್ತು. ವರ್ಷಗಳು ಉರುಳಿವೆ. ಟೆಂಟ್ ಸಿನಿಮಾಗಳು ಪೂರ್ತಿಯಾಗಿ ನೇಪಥ್ಯಕ್ಕೆ ಸರಿದಿವೆ. ಈಗಿನ ಬಹಳಷ್ಟು ಮಕ್ಕಳಿಗೆ ಆ ಪದದ ಪರಿಚಯವೇ ಇಲ್ಲವೆಂದರೆ ಉತ್ಪ್ರೇಕ್ಷೆಯಾಗದು. ಟೆಂಟ್‌ಗಳ ಜಾಗದಲ್ಲಿ ವರ್ಷವಿಡೀ ಸಿನಿಮಾ ಪ್ರದರ್ಶಿಸುವ ಟಾಕೀಸ್‌ಗಳು ಬಂದಿವೆ. ಮಹಾನಗರಗಳಲ್ಲಿ ಅವುಗಳೇ ಥಿಯೇಟರ್ ಎಂಬ ಹೆಸರಿನಲ್ಲಿ ರಾರಾಜಿಸುತ್ತಿವೆ. ಬೆಂಗಳೂರು ಒಂದರಲ್ಲೇ ನೂರಕ್ಕೂ ಹೆಚ್ಚು ಸಿನಿಮಾ ಥಿಯೇಟರ್‌ಗಳಿವೆ.
ಅಷ್ಟು ಸಾಲದೆ ಮಾಲ್‌ಗಳಿಗೆ ಅಂಟಿದಂತೆ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳೂ ಇವೆ. ಟಿಕೆಟ್‌ಗಳಿಗಾಗಿ ಮುಂಚಿನಂತೆ ಬಿಸಿಲು-ಮಳೆ ಎನ್ನದೆ ಗಂಟೆಗಟ್ಟಲೆ ಕ್ಯೂ ನಿಲ್ಲುವ ಅಗತ್ಯವೂ ಇಲ್ಲ. ಈಗಿನವರಿಗೆ ಅಷ್ಟು ತಾಳ್ಮೆಯೂ ಇಲ್ಲ. ಮನೆಯಲ್ಲಿದ್ದೇ ಆನ್‌ಲೈನ್‌ನಲ್ಲಿ ಮುಂಚಿತವಾಗಿ ಟಿಕೆಟ್‌ಗಳನ್ನು ಖರೀದಿಸಬಹುದು. ಅದೂ ಬೇಡದಿದ್ದರೆ ಮನೆಯಲ್ಲಿ ಕುಳಿತೇ ಟಿ.ವಿ.ಯಲ್ಲಿ ಬರುವ ಸಿನೆಮಾಗಳನ್ನು ವೀಕ್ಷಿಸಬಹುದು ಅಥವಾ ಬೇಕಾದ ಸಿನಿಮಾಗಳ ಸಿ.ಡಿ. ತಂದು ನೋಡಬಹುದು. ಇಷ್ಟೆಲ್ಲ ಅನುಕೂಲತೆಗಳಿದ್ದರೂ ಟೆಂಟ್‌ನಲ್ಲಿ ಕುಳಿತು ಅಲ್ಲಿ ಮಾರುತ್ತಿದ್ದ ತಿನಿಸುಗಳನ್ನು ಮೆಲ್ಲುತ್ತ ಸಿನಿಮಾಗಳನ್ನು ನೋಡುತ್ತ ಪಡೆಯುತ್ತಿದ್ದ ಸಂತೋಷಕ್ಕೆ ಯಾವುದೂ ಸಾಟಿಯಾಗಲಾರದು ಎನಿಸಿದರೂ ಆ ಬಾಲ್ಯದ ದಿನಗಳು ಮತ್ತೂಮ್ಮೆ ಬರಬಾರದೇ ಎನಿಸುತ್ತದೆ. ಆದರೂ ಕಾಲಾಯ ತಸ್ಮೈ ನಮಃ, ಅಲ್ಲವೆ?
ಪದ್ಮಜಾ ಸುಂದರೇಶ್