ಬೆಂಗಳೂರು: ರಾಜ್ಯ ಸರ್ಕಾರ ಎಸ್ಮಾ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ಭಾನುವಾರ ಬೆಳಗ್ಗೆಯಿಂದಲೇ ನಗರದಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ಆರಂಭಿಸಿದ್ದಾರೆ. ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ವ್ಯವಸ್ಥೆ ರದ್ದುಪಡಿಸಬೇಕು ಎಂದು ಒತ್ತಾಯಿಸಿ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ಶನಿವಾರ ದಿಢೀರ್ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿದ್ದರು.
ಜತೆಗೆ ಕರ್ತವ್ಯಕ್ಕೆ ಹಾಜರಾದ ಗುತ್ತಿಗೆ ಪೌರಕಾರ್ಮಿಕರನ್ನು ದೌರ್ಜನ್ಯದಿಂದ ತಡೆಯಲಾಗಿತ್ತು. ಆದರೆ, ಶನಿವಾರ ಸರ್ಕಾರ ಎಸ್ಮಾ ಜಾರಿಗೊಳಿಸಿದ್ದರ ಪರಿಣಾಮ ಭಾನುವಾರದಿಂದಲೇ ತ್ಯಾಜ್ಯ ವಿಲೇವಾರಿಯಲ್ಲಿ ತೊಡಗಿಕೊಂಡಿದ್ದಾರೆ. ದಸರಾ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದು ಪಾಲಿಕೆ ಹಾಗೂ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು.
ಹಬ್ಬದ ಸಂದರ್ಭದಲ್ಲಿ ಪ್ರಮುಖ ಮಾರುಕಟ್ಟೆಗಳು ಸೇರಿದಂತೆ ಎಲ್ಲ ಪ್ರದೇಶಗಳಲ್ಲಿ ರಾಶಿರಾಶಿ ತ್ಯಾಜ್ಯ ಸೃಷ್ಟಿಯಾಗುತ್ತದೆ. ಆಯುಧ ಪೂಜೆಯ ದಿನವೂ ಹೂ, ಹಣ್ಣು, ಬಾಳೆಎಲೆ ತ್ಯಾಜ್ಯ, ಪೂಜಾ ಸಾಮಗ್ರಿಗಳು ರಸ್ತೆ ಬದಿಗಳಲ್ಲಿ ಎಸೆಯಲಾಗುತ್ತದೆ. ಇದೇ ಸಮಯದಲ್ಲಿ ಕಸ ವಿಲೇವಾರಿ ನಿಲ್ಲಿಸಿದರೆ ಪಾಲಿಕೆ ಹಾಗೂ ಸರ್ಕಾರ ಸಾರ್ವಜನಿಕರ ಟೀಕೆಗೆ ಗುರಿಯಾಗಬೇಕಿತ್ತು.
ಅದನ್ನೆ ಅಸ್ತ್ರವಾಗಿಟ್ಟುಕೊಂಡು ಗುತ್ತಿಗೆದಾರರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದರು. ಆದರೆ, ಸರ್ಕಾರ ಎಸ್ಮಾ ಜಾರಿಗೊಳಿಸುವ ಮೂಲಕ ಅವರ ತಂತ್ರಗಳನ್ನು ವಿಫಲಗೊಳಿಸಿದ್ದು, ಪಾಲಿಕೆಯ ಅಧಿಕಾರಿಗಳು ಇದರಿಂದ ನಿಟ್ಟುಸಿರು ಬಿಡುವಂತಾಗಿದೆ. ನಗರದಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸೋಮವಾರದ ವೇಳೆಗೆ ಸಹಜ ಸ್ಥಿತಿಗೆ ಮರಳಲಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಗುತ್ತಿಗೆದಾರರ ಸಮಸ್ಯೆ ಅರಿಯಲು ಸರ್ಕಾರ ಸೋಮವಾರ ಸಭೆ ನಡೆಸಲು ನಿರ್ಧರಿಸಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಗೃಹ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ವೇಳೆ ಗುತ್ತಿಗೆದಾರರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತರು