Advertisement

ಪಾವತಿ ವಿಳಂಬ, ಚಿಕಿತ್ಸೆಗೆ ಇಎಸ್‌ಐ ನೌಕರರ ಪರದಾಟ

02:13 AM Mar 11, 2022 | Team Udayavani |

ಕುಂದಾಪುರ: ಕಾರ್ಮಿಕರ ವಿಮಾ ಸಂಸ್ಥೆ ಇಎಸ್‌ಐಯ ಆರೋಗ್ಯ ವಿಮಾ ಯೋಜನೆಯಡಿ ಕರಾವಳಿಯ ಬಹುತೇಕ ಫ‌ಲಾನುಭವಿಗಳಿಗೆ ಸರಿಯಾಗಿ ಲಭ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಇಲ್ಲಿಸಾಕಷ್ಟು ಇಎಸ್‌ಐ ಆಸ್ಪತ್ರೆ ಇಲ್ಲದಿರುವುದು ಒಂದೆಡೆಯಾದರೆ, ಇನ್ನೊಂ ದೆಡೆ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ದೊರಕದಿರುವುದು.

Advertisement

ಮಂಗಳೂರು ಹೊರತು ಪಡಿಸಿ ಇತರೆಡೆ ಇಎಸ್‌ಐ ಆಸ್ಪತ್ರೆ ಇಲ್ಲದಿರುವುದರಿಂದ ಖಾಸಗಿ ಆಸ್ಪತ್ರೆಯ ಕದ ತಟ್ಟುವುದು ಅನಿವಾರ್ಯವಾಗಿದೆ. ಆದರೆ ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಯ ವೆಚ್ಚವನ್ನು ಇಲಾಖೆ ಪಾವತಿಸದಿರುವುದರಿಂದ ಅಲ್ಲಿಯೂ ಚಿಕಿತ್ಸೆ ಸಿಗುತ್ತಿಲ್ಲ.

ಈ ಹಿಂದೆ ಒಪ್ಪಂದ ಮಾಡಿಕೊಂಡ ಅನೇಕ ಆಸ್ಪತ್ರೆಗಳು ಇಲಾಖೆಯ ಧೋರಣೆಗಳಿಂದ ಬೇಸತ್ತು ಒಪ್ಪಂದದಿಂದ ಹಿಂದೆ ಸರಿದಿವೆ. ಸಕಾಲದಲ್ಲಿ ಬಿಲ್‌ ಪಾವತಿಯಾಗದಿರುವುದು, ಮೊದಲೇಅತ್ಯಂತ ಕಡಿಮೆ ವೆಚ್ಚಕ್ಕೆ ಒಪ್ಪಂದ ಆಗಿದ್ದರೂ ಅನಂತರವೂ ಬಿಲ್‌ ವಿಚಾರದಲ್ಲಿ ತಗಾದೆ ತೆಗೆಯಲಾಗುತ್ತದೆ, ವರ್ಷಗಟ್ಟಲೆ ಬಾಕಿ ಇಟ್ಟು ದೊಡ್ಡ ಮೊತ್ತವಾದ ಬಳಿಕ ಚೌಕಾಶಿ ಮಾಡುವುದು, ಕಾರಣ ಇಲ್ಲದೆ ಮೊತ್ತದಲ್ಲಿ ಭಾರೀ ಕಡಿತ ಮಾಡುವುದು, ಪತ್ರ, ಮನವಿ, ಇಮೇಲ್‌ಗ‌ಳಿಗೆ ಸ್ಪಂದಿಸದಿರುವುದು ಇತ್ಯಾದಿ. ಇತ್ತ ಇಎಸ್‌ಐ ಆಸ್ಪತ್ರೆಯೂ ಇಲ್ಲದೆ, ಅತ್ತ ಖಾಸಗಿ ಆಸ್ಪತ್ರೆಯಲ್ಲಿಯೂ ಸೇವೆ ಸಿಗದೆ ಇಎಸ್‌ಐ ಚಂದಾದಾರರು ಪರದಾಡುವಂತಾಗಿದೆ.

ಇಎಸ್‌ಐ ಯೋಜನೆ ಫಲಾ  ನುಭವಿಗಳು ವಾಸ ಸ್ಥಳದಿಂದ 10 ಕಿ.ಮೀ. ವ್ಯಾಪ್ತಿ ಯಲ್ಲಿ ಇಎಸ್‌ಐ ಆಸ್ಪತ್ರೆಗಳು ಲಭ್ಯವಿಲ್ಲದಿ ದ್ದರೆ ನೌಕರರ ರಾಜ್ಯ ವಿಮಾ ನಿಗಮದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಹತ್ತಿರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಮೊತ್ತವನ್ನು ಇಲಾಖೆ ಭರಿಸುತ್ತದೆ.

ಆಸ್ಪತ್ರೆ
ಇಎಸ್‌ಐ ಫಲಾನುಭವಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಫಲಾನುಭವಿಗಳು ಇಎಸ್‌ಐ ಇ-ಪೆಹಚಾನ್‌ ಕಾರ್ಡ್‌/ಆರೋಗ್ಯ ಪಾಸ್‌ಬುಕ್‌ ಜತೆಗೆ ಆಧಾರ್‌/ಸರಕಾರ ನೀಡಿದ ಗುರುತಿನ ಚೀಟಿಯೊಂದಿಗೆ ಇಎಸ್‌ಐ ಅಥವಾ ಒಪ್ಪಂದದ ಆಸ್ಪತ್ರೆಗೆ ಭೇಟಿ ನೀಡಬಹುದು. ಹೊರರೋಗಿ ವಿಭಾಗ ಸೇವೆಗಳಿಗೆ ನಗದು ರಹಿತ, ವೈದ್ಯಕೀಯ ಸಮಾಲೋಚನೆ ಪಡೆಯಬಹುದು. ಇಲಾಖೆಯ ಒಪ್ಪಿಗೆ ಪಡೆದು ದಾಖಲಾದರೆ ಚಿಕಿತ್ಸಾ ವೆಚ್ಚ ಪಡೆಯಬಹುದು.

Advertisement

ಕುಂದಾಪುರದಲ್ಲಿಲ್ಲ
ಕಾರವಾರದಿಂದ ಬ್ರಹ್ಮಾವರ ವರೆಗೆ 206 ಕಿ.ಮೀ. ಅಂತರದಲ್ಲಿ ಇಎಸ್‌ಐ ಆಸ್ಪತ್ರೆ ಅಥವಾ ಅದರ ಜತೆ ಒಪ್ಪಂದ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳೇ ಇಲ್ಲ . ಕುಂದಾಪುರದಲ್ಲಿ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಹಿಂದೆ ಸೌಲಭ್ಯ ಇತ್ತು. ಇಲಾಖೆಯಿಂದ ಒಂದು ಆಸ್ಪತ್ರೆಗೆ 55 ಲಕ್ಷ ರೂ. ಪಾವತಿ 1.5 ವರ್ಷದಿಂದ ಬಾಕಿಯಿದೆ. ಇದರಿಂದ ಬೇಸತ್ತ ಎರಡೂ ಆಸ್ಪತ್ರೆಗಳು ಒಪ್ಪಂದ ದಿಂದ ಹಿಂದೆ ಸರಿದಿವೆ. ಬ್ರಹ್ಮಾವರ, ಉಡುಪಿ, ಮಣಿಪಾಲ, ಮಂಗಳೂರಿನಲ್ಲಿ ಒಪ್ಪಂದ ಮಾಡಿ ಕೊಂಡ ಆಸ್ಪತ್ರೆಗಳಿವೆ. ಕುಂದಾಪುರ ದಲ್ಲಿ ಡಿಸ್ಪೆನ್ಸರಿ ಇದ್ದರೂ ಖಾಯಂ ವೈದ್ಯರಿಲ್ಲ. ವಾರ ಕ್ಕೊಮ್ಮೆ ಬರುವ ವೈದ್ಯರಿಗೆ ಆಡಳಿತಾತ್ಮಕ ಅಧಿಕಾರವಿದ್ದು, ದಾವಣಗೆರೆಯಿಂದ ನಿಯೋಜನೆ ಮೇರೆಗೆ ಬರುವ ವೈದ್ಯರಿಗೆ ಇಲ್ಲ.

ಖಾಯಂ ಬೇಕು
ಕುಂದಾಪುರಕ್ಕೆ ಖಾಯಂ ವೈದ್ಯರ ಅಗತ್ಯವಿದೆ. ಮಂಗಳೂರು ಇಎಸ್‌ಐ ಆಸ್ಪತ್ರೆಯಲ್ಲಿ 28 ವೈದ್ಯರು ಇರಬೇಕಾದಲ್ಲಿ 6 ಮಂದಿ ಇದ್ದಾರೆ. ಉಡುಪಿ ಜಿಲ್ಲೆಯಲ್ಲಿ 3 ವೈದ್ಯ ಹುದ್ದೆಗಳ ಪೈಕಿ ಒಬ್ಬರಷ್ಟೇ ಇದ್ದಾರೆ.

ಯಾರಿಗೆಲ್ಲ ಚಿಕಿತ್ಸೆ ?
10 ನೌಕರರಿಗಿಂತ ಹೆಚ್ಚು ಇರುವ ಎಲ್ಲ ಅಂಗಡಿ, ಹೊಟೇಲ್‌, ಕಾರ್ಖಾನೆ, ಸಾರಿಗೆ, ಶಿಕ್ಷಣ ಸೇರಿದಂತೆ ಖಾಸಗಿ, ಸರಕಾರಿ, ಅರೆ ಸರಕಾರಿ ಸಂಸ್ಥೆಯವರೂ ಇಎಸ್‌ಐಗೆ ನೋಂದಣಿ ಮಾಡಬೇಕು. ಮಾಸಿಕ 21 ಸಾವಿರ ರೂ.ಗಿಂತ ಕಡಿಮೆ ವೇತನ ಇರುವ ಎಲ್ಲರೂ ಇದಕ್ಕೆ ಅರ್ಹರು. ಕುಟುಂಬದ ಸದಸ್ಯರಿಗೂ ಈ ಯೋಜನೆಯನ್ವಯ ಚಿಕಿತ್ಸೆ ಲಭ್ಯ. ರಾಜ್ಯದಲ್ಲಿ 3.14 ಕೋಟಿ ಮಂದಿಗೆ ಇಎಸ್‌ಐ ದೊರೆಯುತ್ತದೆ.

ಇಎಸ್‌ಐ ಯೋಜನೆಯಡಿ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಒಪ್ಪಂದದಂತೆ ಲಭ್ಯ ಇರದಿರುವ ಕುರಿತು ಗಮನಹರಿಸುವೆ.
– ಎ. ಶಿವರಾಮ್‌ ಹೆಬ್ಟಾರ್‌,
ಕಾರ್ಮಿಕ ಸಚಿವ

ಖಾಸಗಿ ಆಸ್ಪತ್ರೆ ಜತೆಗೆ ಒಪ್ಪಂದ ಮಾಡಿಕೊಳ್ಳಲಿ. ಬಾಕಿ ಇರುವ ಹಣ ಸಕಾಲದಲ್ಲಿ ಪಾವತಿಸಲಿ. ನೌಕರರಿಗೆ, ಕಾರ್ಮಿಕರಿಗೆ ಸರಿಯಾದ ಚಿಕಿತ್ಸೆ ದೊರೆಯುವಂತಾಗಲಿ. ಇಲಾಖೆ ಈ ಕುರಿತು ತತ್‌ಕ್ಷಣ ಗಮನಹರಿಸಲಿ.
– ಎಚ್‌. ನರಸಿಂಹ ಕುಂದಾಪುರ,
ಕಾರ್ಮಿಕ ಮುಖಂಡ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next