ವಿಜಯಪುರ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಈಶ್ವರಪ್ಪ ಅವರೇ ಸ್ವಂತ ನಿರ್ಧಾರ ಕೈಗೊಂಡಿದ್ದು, ಪಕ್ಷ ಒಲ್ಲದ ಮನಸ್ಸಿನಿಂದ ರಾಜೀನಾಮೆ ಸ್ವೀಕರಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಶುಕ್ರವಾರ ತಮ್ಮ ಮನೆ ದೇವರು ತೊರವಿ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆ ಹಿಂದೆ ಕುತಂತ್ರವಿದ್ದು, ಕಾಂಗ್ರೆಸ್ ಕೈವಾಡದ ಶಂಕೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಸಂಪುಟ ವಿಸ್ತರಣೆ ಯಾವಾಗ ನಡೆಯುತ್ತದೆ ಎಂಬುದು ತಿಳಿಯದು. ಖಾಲಿ ಇರುವ ಸ್ಥಾನಗಳಿಗೆ ಭರ್ತಿಗೆ ವಿಸ್ತರಣೆ ಆಗಲಿದೆ. ವಿಜಯಪುರ ಜಿಲ್ಲೆಗೆ ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕೊರಗು ಬೇಡ. ಸಂಪುಟ ವಿಸ್ತರಣೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೈಕಮಾಂಡ್ ನಾಯಕರು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು
ಇದನ್ನೂ ಓದಿ:ಕಳಂಕಿತ ಸಚಿವರ ರಕ್ಷಣೆಗೆ ನಿಂತು ಸಿಎಂ ಬೊಮ್ಮಾಯಿ ದೊಡ್ಡ ಅಪರಾಧ ಮಾಡುತ್ತಿದ್ದಾರೆ: ಡಿಕೆಶಿ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತು ಯಾವುದೇ ವಿಚಾರ ಪಕ್ಷದ ಮುಂದಿಲ್ಲ. ಬೊಮ್ಮಾಯಿ ಅವರು ಅತ್ಯಂತ ಸಮರ್ಥವಾಗಿ ಆಡಳಿತ ನಿಭಾಯಿಸುತ್ತಿದ್ದು, ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.