Advertisement

ಹೋರಾಟ ಮಾಡಿ ಸೌಲಭ್ಯ ಪಡೆದುಕೊಳ್ಳಿ

03:55 PM Feb 11, 2021 | Team Udayavani |

ಹೊಸದುರ್ಗ: ದಲಿತ, ಹಿಂದುಳಿದ ಮಠಾಧೀಶರು ಒಗ್ಗಟ್ಟಾಗಬೇಕು. ಸಮುದಾಯ ಮತ್ತು ಮಠಕ್ಕೆ ಬೇಕಾದ ಸೌಲಭ್ಯಗಳನ್ನು ಯಾವುದೇ ಸರಕಾರವಿದ್ದರೂ ಎಚ್ಚರಿಕೆ ನೀಡುವ ಮೂಲಕವಾದರೂ  ಪಡೆದುಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತತು ಪಂಚಾಯತ್‌ರಾಜ್‌ ಇಲಾಖೆ ಸಚಿವ ಕೆ.ಎಸ್‌ .ಈಶ್ವರಪ್ಪ ಹೇಳಿದರು.

Advertisement

ತಾಲೂಕಿನ ಬ್ರಹ್ಮವಿದ್ಯಾನಗರದ ಸಗರ ಚಕ್ರವರ್ತಿ ಮಹಾಮಂಟದಲ್ಲಿ ಬುಧವಾರ ನಡೆದ ಭೂತೇಶ್ವರಸ್ವಾಮಿ ದೇವಾಲಯ ಪ್ರಾರಂಭೋತ್ಸವ ಹಾಗೂ ಶ್ರೀ ಪುರುಷೋತ್ತಮಾನಂದ ಪುರಿಗಳ 22ನೇ ವರ್ಷದ ಪಟ್ಟಾಭಿಷೇಕದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಒಂದೇ ಸಮುದಾಯದಲ್ಲಿ ನಾಲ್ಕೈದು ಮಠಗಳಿವೆ. ಅವರಲ್ಲಿ ಒಬ್ಬರನ್ನು ಕಂಡರೆ ಮತ್ತೂಬ್ಬರಿಗೆ ಆಗುವುದಿಲ್ಲ. ಆದರೆ ದಲಿತ ಹಿಂದುಳಿದ ಮಠಾಧಿಧೀಶರು ಒಕ್ಕೂಟ ರಚಿಸಿಕೊಂಡು ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಮಠಕ್ಕೆ ಅನುದಾನ ಕೇಳಿದ್ದರು. ಆಗ ಸಿಎಂ ಆಗಿದ್ದ ಸದಾನಂದ ಗೌಡರಿಂದ 39 ಮಠಗಳಿಗೆ 100 ಕೋಟಿ ರೂ. ಅನುದಾನ ಕೊಡಿಸಿದೆ. ಹಾಗೆಯೇ ಇಂದು ಕುರುಬರು ಎಸ್‌ಟಿ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಎಲ್ಲರ ಸಹಕಾರ ಮುಖ್ಯ. ಮಠಾ ಧೀಶರ ಸಂಘಟಿತ ಒಕ್ಕೂಟವಿದ್ದಾಗ ಅವರ ಯಾವುದೇ ಮನವಿಗಾದರೂ ಸರಕಾರ ಸ್ಪಂ ದಿಸುತ್ತದೆ ಎಂದರು.

ಕನಕ ಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಉಪ್ಪಾರ ಸಮಾಜ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದೆ. ಈ ಸಮಾಜದ ಅನೇಕ ಜನರಿಗೆ ಮನೆ, ಭೂಮಿ, ಮಕ್ಕಳಿಗೆ ಶಿಕ್ಷಣ ಇಲ್ಲ. ರಾಜಕೀಯ ಪ್ರಾಬಲ್ಯವೂ ಇಲ್ಲ. ಅವಕಾಶ ಹಾಗೂ ಹಕ್ಕುಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳಬೇಕು. ಶಿವಪುರಿ ಸ್ವಾಮೀಜಿ ಮತ್ತು ತಿರುಚ್ಚಿ ಸ್ವಾಮೀಜಿಯವರು ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬಿದರು. ನಮ್ಮ ಸಹೋದರ ಉಪ್ಪಾರ ಸಮಾಜ ಎಸ್‌ಟಿ ಮೀಸಲಾತಿ ಪಡೆಯಲು ಪ್ರಯತ್ನ ನಡೆಸುತ್ತಿದೆ. ಅವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.

ಚಿತ್ರದುರ್ಗ ಕಬೀರಾನಂದಮಠದ ಶ್ರೀ ಶಿವಾಲಿಂಗಾನಂದ ಸ್ವಾಮೀಜಿ ಮಾತನಾಡಿ, 1974 ರಲ್ಲಿ ನಾನು ಸಂಸ್ಕೃತಿ ಅಧ್ಯಯನಕ್ಕೆ ಬೆಂಗಳೂರಿಗೆ ಹೋದ ಸಂದರ್ಭದಲ್ಲಿ ಈಶ್ವರಾನಂದಪುರಿ ಶ್ರೀಗಳು ಆಗಿನ್ನೂ ಬಾಲಕರಾಗಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದರು. ಇಂದು ದೊಡ್ಡ ಸಮುದಾಯದ ಮಠಾಧೀಶರಾಗಿದ್ದಾರೆ. ಇವತ್ತು ಗ್ರಾಪಂ ಸದಸ್ಯರನ್ನೇ ಮಾತನಾಡಿಸುವುದೇ ಕಷ್ಟ. ಇಂತಹ ಸನ್ನಿವೇಶದಲ್ಲಿ ಸರಳತೆಯನ್ನೇ ಮೈಗೂಡಿಸಿಕೊಂಡು ಬಂದವರು ಈಶ್ವರಾನಂದ ಶ್ರೀಗಳು. 22 ವರ್ಷಗಳ ಹಿಂದೆ ಉತ್ತರಾಧಿಕಾರಿಯಾಗಿ ನೇಮಕಗೊಂಡ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ ಪಟ್ಟಾಭಿಷೇಕ ಮಹೋತ್ಸವವನ್ನು ಶಿವಪುರಿ ಸ್ವಾಮೀಜಿಯವರ ಶಿಷ್ಯರಾಗಿದ್ದ ಈಶ್ವರಾನಂದಪುರಿ ಶ್ರೀಗಳೇ ನೆರವೇರಿಸಿದ್ದರು ಎನ್ನುವುದನ್ನು ಮಠದ ಇತಿಹಾಸ ನೆನಪಿಸುತ್ತದೆ ಎಂದರು.

Advertisement

ಇದನ್ನೂ ಓದಿ :ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಕಡಿದು ಹಾಕಿದ್ದೇನು  ?

ಡಾ| ಶಿವಮೂರ್ತಿ ಮುರುಘಾ ಶರಣರು, ಡಾ| ಶಾಂತವೀರ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಮಡಿವಾಳ ಮಾಚಿದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಬಕಾರಿ ಸಚಿವ ಗೋಪಾಲಯ್ಯ, ರಾಜ್ಯ ಉಪ್ಪಾರ ನಿಗಮ ಮಂಡಳಿ ಅಧ್ಯಕ್ಷ ಗಿರೀಶ್‌ ಉಪ್ಪಾರ್‌, ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ್‌, ಜಿಪಂ ಸದಸ್ಯೆ ವಿಶಾಲಾಕ್ಷಿ, ಸಾಹಿತಿ ಗುರುಮೂರ್ತಿ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next