ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಸಚಿವ ಕೆ. ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುರುವಾರ ಸಂಜೆ ಹೇಳಿದ್ದಾರೆ.
ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಬಿಜೆಪಿಯ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಇವತ್ತಿನವರೆಗೂ ಕೆಲಸ ಮಾಡಿದ್ದೇನೆ.ನಾನು ತೀರ್ಮಾನ ಮಾಡಿದ್ದೇನೆ, ನಾಳೆ ನಾನು ರಾಜೀನಾಮೆ ಕೊಡುತ್ತೇನೆ. ನನ್ನನ್ನು ಇಲ್ಲಿಯವರೆಗೆ ಬೆಳೆಸಿದ್ದಾರೆ. ಅವರಿಗೆ ಇರಿಸು ಮುರಿಸು ಅಗಬಾರದು. ಇದೊಂದೇ ಕಾರಣಕ್ಕೆ ನಾನು ರಾಜೀನಾಮೇ ಕೊಡುತ್ತಿದ್ದೇನೆ. ಬೊಮ್ಮಾಯಿ ಜತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ನಾಳೆ ಸಂಜೆ ಬೆಂಗಳೂರಿಗೆ ಹೋಗಿ ಸಿಎಂಗೆ ರಾಜೀನಾಮೆ ಕೊಡುತ್ತೇನೆ ಎಂದರು.
ಈ ಎಪಿಸೋಡ್ ನಲ್ಲಿ ನನ್ನ ಪಾತ್ರ ಇಲ್ಲ. ಇದರಲ್ಲಿ ನನ್ನ ಪಾತ್ರ 1 ಪರ್ಸೆಂಟ್ ಇದ್ದರೂ, ದೇವರೇ ನನಗೆ ಶಿಕ್ಷೆ ಕೊಡಲಿ.ನನ್ನ ಪಾತ್ರ ಇಲ್ಲ, ಮುಕ್ತನಾಗಿ ಹೊರಗೆ ಬರುತ್ತೇನೆ ಎಂದು ಒತ್ತಿ ಹೇಳಿದರು.
ಸಚಿವ ಈಶ್ವರಪ್ಪ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಬುಧವಾರ ಬೆಳಗ್ಗೆ ಹೇಳಿಕೊಂಡಿದ್ದರು. ಬಿಜೆಪಿ ಕೇಂದ್ರ ನಾಯಕರ ಒತ್ತಡದಿಂದ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಈಶ್ವರಪ್ಪ ವಿಷಯದಲ್ಲಿ ಹೈಕಮಾಂಡ್ ನ ಮಧ್ಯ ಪ್ರವೇಶವಿಲ್ಲ. ಅವರು ಕೇವಲ ಮಾಹಿತಿ ಪಡೆದಿದ್ದಾರೆ, ಆದರೆ ಇದರಲ್ಲಿ ಅವರ ಪಾತ್ರವೇನಿಲ್ಲ. ಪ್ರಾಥಮಿಕ ತನಿಖೆ ಆಗುವವರೆಗೂ ಈಶ್ವರಪ್ಪ ರಾಜೀನಾಮೆ ಪಡೆಯುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.