ಬೀದರ:ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಸೋಮವಾರ ಬೀದರ್ ಹಾಗೂ ಹುಮನಾಬಾದ ತಾಲೂಕಿನಲ್ಲಿ ಬಿಜೆಪಿ ಮುಖಂಡರು ಬರ ಪರಿಸ್ಥಿತಿ ವೀಕ್ಷಿಸಿದರು. ಬೀದರ್ ತಾಲೂಕಿನ ಅಣದೂರ ಗ್ರಾಮದ ಕೆರೆ ಹಾಗೂ ಬೆಳೆಗಳ ವೀಕ್ಷಣೆ ಮಾಡಿದ ಕೆ.ಎಸ್. ಈಶ್ವರಪ್ಪ, ಹುಮನಾಬಾದ ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಹೊಲಗಳಲ್ಲಿ ಸಂಚರಿಸಿ ಬೆಳೆಗಳ ಸ್ಥಿತಿಗತಿಯನ್ನು ರೈತರಿಂದ ಆಲಿಸಿದರು. ಮಳೆ ಕೊರತೆಯಿಂದ ರೈತರ ಸ್ಥಿತಿ ಹೀನಾಯವಾಗಿದೆ. ಸದ್ಯ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಈ ಸಂದರ್ಭದಲ್ಲಿ ಈಶ್ವರಪ್ಪ ಅವರು ರೈತರೊಂದಿಗೆ ಮಾತನಾಡಿ, ರೈತರ ನೋವು ಸರ್ಕಾರಕ್ಕೆ ಮುಟ್ಟಿಸುತ್ತೇವೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಅವರು, ಜಿಲ್ಲೆಯ ಬರ ಕುರಿತು ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಹಾಗೂ ಜಿಪಂ ಸಿಇಒ ಮಹಾಂತೇಶ ಬೀಳಗಿ ಜಿಲ್ಲೆಯ ಸ್ಥಿತಿಗತಿ ವಿವರಿಸಿದರು. ಇದೇ ವೇಳೆ ನಗರ ಸಭೆ ಪೌರಾಯುಕ್ತರ ವರ್ಗಾವಣೆ ವಿಷಯ ಕೂಡ ಚರ್ಚೆ ನಡೆದಿದ್ದು, ವರ್ಗಾವಣೆ ತಡೆಯುವಂತೆ ಬಿಜೆಪಿ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರೈತರ ಘೇರಾವ್: ಜಿಲ್ಲಾಧಿಕಾರಿಗಳ ಆವರಣದಿಂದ ಸುದ್ದಿಗೋಷ್ಠಿ ಮುಗಿಸಿಕೊಂಡು ಹೊರ ಹೋಗುತ್ತಿರುವ ಸಂದರ್ಭದಲ್ಲಿ ಕೆ.ಎಸ್. ಈಶ್ವರಪ್ಪ ಅವರ ಕಾರಿಗೆ ಔರಾದ ತಾಲೂಕಿನ ರೈತರು ಘೇರಾವ್ ಹಾಕಿದರು. ಎರಡು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನೀರಿಗಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಜಿಲ್ಲೆಯ ಶಾಸಕರು, ಸಚಿವರು ಹಾಗೂ ಸಂಸದರು ಯಾರೂ ನಮ್ಮ ಬೇಡಿಕೆಗಳನ್ನು ಕೇಳಲು ಬಂದಿಲ್ಲ. ಅಲ್ಲದೆ, ಜಿಲ್ಲಾ ಧಿಕಾರಿಗಳು ಕೂಡ ಸ್ಪಂದನೆ ಮಾಡುತ್ತಿಲ್ಲ. ಕಾರಂಜಾ ಜಲಾಶಯದಿಂದ ಔರಾದ ತಾಲೂಕಿಗೆ ನೀರು ಹರಿಸಲು ಯಾರೂ ಮುಂದಾಗುತ್ತಿಲ್ಲ ಎಂದು ತಮ್ಮ ನೋವನ್ನು ಈಶ್ವರಪ್ಪ ಅವರ ಎದುರು ಹೇಳಿಕೊಂಡರು.
ಹೋರಾಟಗಾರರ ಮಾತು ಆಲಿಸಿದ ನಂತರ, ಈ ಕುರಿತು ಸರ್ಕಾರದ ಗಮನ ಸೇಳೆಯುವುದಾಗಿ ಭರವಸೆ ನೀಡಿದರು.
ಸಂಸದ ಭಗವಂತ ಖೂಬಾ, ಬಿಜೆಲಿ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಬಾಬು ವಾಲಿ ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು ಇದ್ದರು.