Advertisement

ಕೊಟ್ಟ ಮಾತು ತಪ್ಪಿದ ಬಿಜೆಪಿ ಸರಕಾರ

04:35 PM Feb 11, 2021 | Team Udayavani |

ತರೀಕೆರೆ: ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ತೈಲ ಬೆಲೆ ಏರಿಕೆಯನ್ನು ಖಂಡಿಸಿದ್ದ ಬಿಜೆಪಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಕಡಿಮೆ ಇದ್ದರು ಸಹ ತೈಲ ಬೆಲೆ ಏರಿಕೆ ಮಾಡಿ ಅವೈಜ್ಞಾನಿಕ ಸುಂಕಗಳನ್ನು ಹಾಕುವ ಮೂಲಕ ತೈಲ ಬೆಲೆ 100 ರೂ. ಗಡಿ ದಾಟಿಸಿದೆ. ಒಂದೊಮ್ಮೆ ಅಧಿಕಾರಕ್ಕೆ ಬಂದರೆ ತೈಲ ಬೆಲೆಯನ್ನು ಕಡಿಮೆ ಮಾಡುವ ಬಿಜೆಪಿ ಕೊಟ್ಟ ಮಾತು ತಪ್ಪಿದೆ. ಇದನ್ನು ನಾವು ಪ್ರಶ್ನಿಸಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

Advertisement

ಪಟ್ಟಣದ ಅರಮನೆ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೈಲಬೆಲೆ ಹೆಚ್ಚಳದಿಂದ ಜನಸಾಮಾನ್ಯರ ಮೇಲೆ ಹೊರೆ ಬೀಳುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಬಡವರು, ಮಧ್ಯಮ ವ ರ್ಗದ ಜನರು ಪರದಾಡುವಂತಾಗಿದೆ. ಅಡುಗೆ ಅನಿಲ ಬೆಲೆಯೂ ಏರಿಕೆಯಾಗುತ್ತಲೇ ಇದೆ. ಕಳೆದ ಹತ್ತು ತಿಂಗಳಿಂದ ಅನಿಲಕ್ಕೆ ನೀಡುವ ಸಬ್ಸಿಡಿಯನ್ನು ನೀಡಿಲ್ಲ. ಅಲ್ಲದೇ, ಇಲ್ಲದ ಸುಂಕಗಳನ್ನು ಹೇರುತ್ತಿದೆ. ಇದನ್ನು ಕಡಿಮೆ ಮಾಡುವ ತನಕ ಕಾಂಗ್ರೆಸ್‌ ಹೋರಾಟ ಮಾಡಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ತೈಲಬೆಲೆಯನ್ನು ಕೂಡಲೇ ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.

ರೈತರ ಪರ ಎಂದು ಹೇಳಿಕೊಳ್ಳುವ ಬಿಜೆಪಿ ಸರಕಾರ ರೈತರ ವಿಚಾರದಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದೆ. ಕಳೆದೆರಡು ವರ್ಷಗಳಲ್ಲಿ ರಾಜ್ಯದಲ್ಲಿ ಉಂಟಾದ ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ಇಲ್ಲಿಯ ತನಕ ಯಾವುದೇ ನೆರವನ್ನು ನೀಡಿಲ್ಲ. 20ಲಕ್ಷ ಹೆಕ್ಟೇರ್‌ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು, 4 ತಿಂಗಳಾದರು ಸಹ ರೈತನಿಗೆ ಪರಿಹಾರ ನೀಡುವಲ್ಲಿ ಸರಕಾರ ವಿಫಲವಾಗಿದೆ. ಇದೊಂದು ತಾಕತ್ತಿಲ್ಲದ ಸರಕಾರ. ಕೇಂದ್ರ ಸರಕಾರವನ್ನು ಪ್ರಶ್ನಿಸಲು ರಾಜ್ಯ ಸರಕಾರ ಮತ್ತು ಬಿಜೆಪಿ ಸಂಸದರಿಗೆ ಧ್ವನಿ ಇಲ್ಲದಂತಾಗಿದೆ ಎಂದು ದೂರಿದರು.

ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟಿರುವ ಗುತ್ತಿಗೆ ಕೃಷಿ ಅತ್ಯಂತ ಅಪಾಯಕಾರಿ. ಅಂಬಾನಿ, ಅದಾನಿ ಮತ್ತು ಕಾರ್ಪೋರೇಟ್‌ ವಲಯಗಳಿಗೆ ಮತ್ತು ಬಂಡವಾಳಶಾಹಿಗಳಿಗೆ ಅನುಕೂಲ ಕಲ್ಪಿಸಲು ಮೋದಿ ನೇತೃತ್ವದ ಸರಕಾರ ಕೃಷಿ ಕಾಯಿದೆಗೆ ತಿದ್ದುಪಡಿ ತಂದಿದೆ. ಒಂದೊಮ್ಮೆ ಇದು ದೇಶದಲ್ಲಿ ಜಾರಿಯಾದರೆ ಇದೊಂದು ರೈತನ ಪಾಲಿಗೆ ಮರಣ ಶಾಸನವಾಗಲಿದೆ. ರೈತರ ಹೋರಾಟಕ್ಕೆ ಕಾಂಗ್ರೆಸ್‌ ಪಕ್ಷದ ಬೆಂಬಲವಿದೆ. ಕಾಂಗ್ರೆಸ್‌ ರೈತರ ಜೊತೆಗಿದೆ ಎಂದರು.

ಕೇಂದ್ರ ಸರಕಾರದ ತಪ್ಪು ಆರ್ಥಿಕ ನೀತಿಯಿಂದ ಉದ್ಯೋಗ ನಷ್ಟ ಉಂಟಾಗಿದೆ. ಯುವಕರಿಗೆ ಉದ್ಯೋಗ ಸಿಗದೆ ಅವರ ಭವಿಷ್ಯ ನಾಶವಾಗುತ್ತಿದೆ. ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಬಿಎಸ್‌ಎನ್‌ಎಲ್‌, ರೈಲ್ವೆ, ಏರ್‌ ಲೈನ್ಸ್‌ ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣಗೊಳಿಸುವ ಹುನ್ನಾರ ಮಾಡುತ್ತಿರುವುದು ಅಭಿವೃದ್ಧಿಗೆ ಮಾರಕ ಎಂದು ಆರೋಪಿಸಿದರು.

Advertisement

ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಜನಸಾಮಾನ್ಯರ ಮೇಲೆ ಹೊರೆ ಹಾಕಿಲ್ಲ ಎಂದು ಹೇಳುತ್ತಿರುವ ಕೇಂದ್ರ ಸರಕಾರ ಕೃಷಿ ಸೆಸ್‌ ಹಾಕುವ ಮೂಲಕ ಹೊರೆ ಹೆಚ್ಚಿಗೆ ಮಾಡಿದೆ. ತೀವ್ರ ಆರ್ಥಿಕ ಕುಸಿತ ಕಂಡಿದ್ದ, ಕೋವಿಡ್‌, ಲಾಕ್‌ಡೌನ್‌, ಅವೈಜ್ಞಾನಿಕ ಜಿಎಸ್‌ಟಿ ಆರ್ಥಿಕತೆ ದಿವಾಳಿಯಾಗಿದ್ದನ್ನು ಕಂಡಿದ್ದ ಜನತೆ ಕೇಂದ್ರ ಬಜೆಟ್‌ನಿಂದ ಪರಿಹಾರ ನಿರೀಕ್ಷಿಸಿದ್ದರು. ಇಲ್ಲದ ಸಲ್ಲದ ಸುಂಕಗಳನ್ನು ಹಾಕುವ ಮೂಲಕ ಜನಸಾಮಾನ್ಯನಿಗೆ ಕಷ್ಟ ತಂದಿದ್ದಾರೆ ಎಂದರು.

ಕಾಂಗ್ರೆಸ್‌ ಪಕ್ಷದಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗುತ್ತಿದೆ. ಲೀಡರ್‌ ಬೇಸ್‌ ಪಾರ್ಟಿ ಎಂದು ಗುರುತಿಸಿಕೊಂಡಿದ್ದ ಪಕ್ಷದಲ್ಲಿಂದು ಕೇಡರ್‌ ಬೇಸ್‌ ಪಕ್ಷವನ್ನಾಗಿ ಬದಲಾಯಿಸಲಾಗುತ್ತಿದೆ. ಪಕ್ಷ ಸದೃಢವಾಗಿದೆ. ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಲಾಗುವುದು. ಇನ್ನು ಮುಂದೆ ಪಕ್ಷವನ್ನು ಕಾರ್ಯಕರ್ತರ ಪಕ್ಷವನ್ನಾಗಿ ಮಾಡಲಾಗುವುದು ಎಂದರು.

ಇದನ್ನೂ ಓದಿ :ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ

ಸುದ್ದಿಗೋಷ್ಠಿಯಲ್ಲಿ ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌, ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್‌, ಜಿಲ್ಲಾಧ್ಯಕ್ಷ ಡಾ|ಅಂಶುಮಂತ್‌, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಮಾಜಿ ಜಿಲ್ಲಾಧ್ಯಕ್ಷ ಡಾ|ಡಿ.ಎಲ್‌.ವಿಜಯಕುಮಾರ್‌, ಮಾಜಿ ಶಾಸಕ ಜಿ.ಎಚ್‌. ಶ್ರೀನಿವಾಸ್‌, ರೇಖಾ ಹುಲಿಯಪ್ಪಗೌಡ, ಕೆ.ಎಸ್‌.ಆನಂದ್‌, ಕೆ.ಆರ್‌.ಧೃವಕುಮಾರ್‌, ಟಿ.ಎನ್‌.ಗೋಪಿನಾಥ್‌, ಗಾಯಿತ್ರಿ ಶಾಂತೇಗೌಡ, ಎಚ್‌.ವಿಶ್ವನಾಥ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ರಾಮಚಂದ್ರಪ್ಪ, ಎ.ಸಿ.ಚಂದ್ರಪ್ಪ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next