Advertisement

ಪರಾರಿ ಪ. ಜಾತಿ ಕಾಲನಿ-ಬೈಕಂಡಿ ರಸ್ತೆ ಅಭಿವೃದ್ಧಿ

03:45 AM Jun 30, 2017 | Team Udayavani |

ಬಂಟ್ವಾಳ : ಬಿ. ಮೂಡ ಗ್ರಾಮ ಪರಾರಿ ಪ. ಕಾಲನಿ – ಬೈಕಂಡಿ ಸಂಪರ್ಕ ರಸ್ತೆಯು ಸುಮಾರು ಎರಡೂವರೆ ವರ್ಷಗಳಿಂದ ಯಾವುದೇ ರೀತಿಯಲ್ಲಿ ಅಭಿವೃದ್ಧಿಯಾಗದೆ ಉಳಿದಿದೆ. ಸ್ಥಳೀಯರು ರಸ್ತೆ ವಿಸ್ತರಣೆಗೆ ಅವಕಾಶ ನೀಡದೆ ಅದನ್ನು  ಮುಂದುವರಿಸಲು ಆಗದ ಸ್ಥಿತಿ ಎದುರಾಗಿದೆ ಎಂದು ಬಂಟ್ವಾಳ ಪುರಸಭೆಯಲ್ಲಿ ಜೂ. 28ರಂದು ನಡೆದ ಪ.ಜಾತಿ ಪಂಗಡದ ಕುಂದುಕೊರತೆ ಸಭೆಯಲ್ಲಿ ಸುದೀರ್ಘ‌ ಅವಧಿ ಚರ್ಚೆ ನಡೆಯಿತು.

Advertisement

ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಸಭೆಯ ಅಧ್ಯಕ್ಷತೆ ವಹಿಸಿದ್ದರು.ರಸ್ತೆ ಅಭಿವೃದ್ಧಿ ವಿಳಂಬ ಜಮೀನು ತಕರಾರು ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ಕೆಲಸ ನನೆಗುದಿಗೆ ಬಿದ್ದಿತ್ತು. ಕನಿಷ್ಠ ಜಮೀನು ಹೊಂದಿರುವ ಸ್ಥಳೀಯರು ತಮ್ಮ ಸ್ಥಳದಲ್ಲಿ ರಸ್ತೆಗೆ ಅವಕಾಶ ನೀಡಿದರೆ ತಮಗೆ ಅವಕಾಶವಿಲ್ಲ ಎಂದು ಅವರ ನಿಗದಿತ ಸ್ಥಳವನ್ನು ತೆರವಿಗೆ ಅವಕಾಶ ನೀಡದ ಕಾರಣ ರಸ್ತೆ ವಿಸ್ತರಣೆ ಅಭಿವೃದ್ಧಿ ವಿಳಂಬವಾಗಿತ್ತು ಎಂದು ಸಭೆಯಲ್ಲಿ  ಮುಖ್ಯಾಧಿಕಾರಿ ಪ್ರಸ್ತಾವನೆ ನೀಡಿದರು.

ಪುರಸಭಾ ಅಧ್ಯಕ್ಷರು ಸಂಬಂಧ ಪಟ್ಟವರಲ್ಲಿ  ಚರ್ಚಿಸಿದ್ದು ಇದನ್ನು  ಸೌಹಾರ್ದಯುತವಾಗಿ ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕೆಲವರು ರಸ್ತೆ ವಿಸ್ತರಣೆಗೆ ಅವಕಾಶ ನೀಡುವ ಕುರಿತು ಒಪ್ಪಿಕೊಂಡಿದ್ದಾರೆ. ಎಲ್ಲರ ಒಪ್ಪಿಗೆಯ ಹಿನ್ನೆಲೆಯಲ್ಲಿ ರಸ್ತೆ ಕೆಲಸ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಲಾಯಿತು.

ಎರಡು ಸಿಲಿಂಡರ್‌ ಒದಗಿಸಲು ಕ್ರಮ 
ಪ.ಜಾತಿ ಪಂಗಡದ ಅನೇಕರ ಮನೆ ದುರಸ್ತಿ ಆಗಬೇಕಾಗಿದ್ದು ಸರಕಾರದ ಅನುದಾನದಲ್ಲಿ ಅದನ್ನು ನಿರ್ವಹಿಸುವುದು, ಈಗಾಗಲೇ ಇರುವಂತಹ ಕಾನೂನಿನ ಪ್ರಕಾರ ಒಂದು ಮನೆಗೆ ಒಂದು ಅಡುಗೆ ಅನಿಲ ಒದಗಿಸಲಾಗಿದೆ. ಆದರೆ ಅನಿಲ ಮುಗಿದಾಗ ಇನ್ನೊಂದು ತರುವುದಕ್ಕೆ ಸಮಯ ಹೋಗುತ್ತದೆ. ಹಾಗಾಗಿ ಎರಡು ಅನಿಲ ಜಾಡಿಗಳನ್ನು ಒದಗಿಸುವ ಕ್ರಮ ಆಗಬೇಕು ಎಂದು ಸಭೆಯಲ್ಲಿ ಪ್ರಸ್ತಾವನೆ ಮಾಡಲಾಯಿತು.ಈ ಬಗ್ಗೆ ನಿರ್ಣಯವನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಪ್ರತೀ ಮನೆಗೆ ಎರಡು ಜಾಡಿಗಳನ್ನು ನೀಡುವುದು.   ಇನ್ನೊಂದು ಜಾಡಿ ಇರುವ ಅವಕಾಶದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಜಮೀನಿನ ದಾಖಲೆ ಸಮಸ್ಯೆ 
ಪುರಸಭಾ ವ್ಯಾಪ್ತಿಯಲ್ಲಿ ಪ. ಜಾತಿ,

ಪಂಗಡದ ಮಂದಿಯ ಹಿರಿಯರ ಹೆಸರಿನಲ್ಲಿ ಜಮೀನು ಇರುತ್ತದೆ. ಅವರ ಮರಣದ ಅನಂತರ ಇರುವ ಜಮೀನನ್ನು ಸರಿಯಾಗಿ ವಿಂಗಡಿಸಿ ನೀಡದಿರುವುದು,  ಸರಿಯಾದ ದಾಖಲೆ ಇಲ್ಲದಿರುವುದು,  ಇದ್ದರೂ ಒಂದೊಂದು ದಾಖಲೆಯಲ್ಲಿ ಒಂದೊಂದು ರೀತಿಯ ಹೆಸರು ಇರುವುದನ್ನು ಸಭೆಯಲ್ಲಿ ಪ್ರಸ್ತಾವಿಸಲಾಯಿತು. ವ್ಯಕ್ತಿಯೊಬ್ಬ ಮರಣ ಹೊಂದಿದಾಗ  ಅದನ್ನು ಪಡೆಯುವಲ್ಲಿ ಸಮಸ್ಯೆ ಆಗುತ್ತಿದೆ ಎಂದು ಗಮನ ಸೆಳೆಯಲಾಯಿತು.

Advertisement

ಈ ಬಗ್ಗೆ ಚರ್ಚಿಸಿ ನಿರ್ಣಯಕ್ಕೆ ಬಂದು ಇದೇ ಉದ್ದೇಶಕ್ಕೆ ತಹಶೀಲ್ದಾರ್‌ ಮೂಲಕ ಕಂದಾಯ ಅದಾಲತ್‌ ನಡೆಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ಸಭೆಯಲ್ಲಿ ಪ್ರಮುಖರಾದ ಜನಾರ್ದನ ಚಂಡ್ತಿಮಾರ್‌, ರಾಜ ಪಲ್ಲಮಜಲು, ವಿಶ್ವನಾಥ ಚಂಡ್ತಿಮಾರ್‌, ಗಂಗಾಧರ ಪರಾರಿ,ಸುರೇಶ ಅರ್ಬಿಗುಡ್ಡೆ, ಗೀತಾ ಬೊಂಡಾಲ, ವಾರಿಜಾ ಪಾಣೆಮಂಗಳೂರು, ಗುಲಾಬಿ ಬೊಂಡಾಲ, ಸಂಜೀವ ಚಂಡ್ತಿಮಾರ್‌,  ಗೀತಾ ಮಾದ್ರಿಗುಡ್ಡೆ ಮತ್ತಿತರರು ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೊಂಡರು.

ಬುಡಾ ಅಧ್ಯಕ್ಷ ಸದಾಶಿವ ಬಂಗೇರ,  ಕೌನ್ಸಿಲರ್‌ಗಳಾದ ವಸಂತಿ ಚಂದಪ್ಪ,  ಗಂಗಾಧರ, ಪ್ರವೀಣ್‌ ಬಿ. ,  ಜಗದೀಶ ಕುಂದರ್‌,  ವಾಸು ಪೂಜಾರಿ,  ಜೆಸಿಂತಾ ಡಿ’ಸೋಜಾ, ನಾಮನಿರ್ದೇಶನ ಸದಸ್ಯ ನೋರ್ಬರ್ಟ್‌ ಡಿ’ಸೋಜಾ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯಾಧಿಕಾರಿ ಸಿ.ಎಚ್‌. ಸುಧಾಕರ್‌ ಸ್ವಾಗತಿಸಿ, ಸಮುದಾಯ ಸಂಘಟನ  ಅಧಿಕಾರಿ ಮತ್ತಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next