ಗಂಗಾವತಿ: ಎಪಿಎಂಸಿ ಖಾಸಗೀಕರಣ ಮೂರು ಮತ್ತು ಕೃಷಿ ಕಾಯ್ದೆ ರದ್ದುಗೊಳಿಸಲು ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ದಾರಿ ತಪ್ಪಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಈ ಹಿಂದೆ ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡದೇ ಕಾಂಗ್ರೆಸ್ ಸರಕಾರ ವರದಿ ಮೂಲೆಗುಂಪು ಮಾಡಿತ್ತು. ಇದೀಗ ರೈತರನ್ನು ಮುಂದುಟ್ಟು ಅವರ ಹೆಗಲ ಮೇಲೆ ಬಂದೂಕು ಇಟ್ಟು ಕೇಂದ್ರ ಸರಕಾರದ ವಿರುದ್ಧ ಹೋರಾಟ ನಡೆಸುವಂತೆ ನೋಡಿಕೊಳ್ಳುತ್ತಿದೆ ಎಂದು ವಾದ್ದಳಿ ನಡೆಸಿದರು.
ಭೂಮಿ ಖರೀದಿಗೆ ಅಡ್ಡಿಯಾಗಿರುವ 79 ಎ,ಬಿ ಸಿ ಹಾಗೂ 108 ಕಾಯ್ದೆಯಿಂದಾಗಿ ರಾಜ್ಯದ ಕೃಷಿ ಭೂಮಿಯ ಪೈಕಿ ಶೇ.12 ಭೂಮಿಯಲ್ಲಿ ಏನು ಬೆಳೆಯಲು ಆಗುತ್ತಿಲ್ಲ. ಆದ್ದರಿಂದ ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ರೈತ ಸಂಘದ ಸಂಸ್ಥಾಪಕರಾಗಿದ್ದ ದಿವಂಗತ ಪ್ರೋ.ಎಂ.ಡಿ. ನಂಜುಡಸ್ವಾಮಿಯವರು ಸಹ ಈ ಕಾಯ್ದೆಯ ವಿರುದ್ಧ ಇದ್ದರು. ಕೇಂದ್ರ ಸರಕಾರ ಎಂಎಸ್ಪಿ ಬೆಂಬಲ ಬೆಲೆ ಹಾಗೂ ವಿದ್ಯುತ್ ಖಾಸಗೀಕರಣ ವಿಷಯದಲ್ಲಿ ಸರಕಾರ ಸ್ಪಂದಿಸುವ ಭರವಸೆ ನೀಡಿದೆ ಎಂದರು.
ಕೇಂದ್ರ ಸರಕಾರದ ವಿರುದ್ದ ರೈತರನ್ನು ಎತ್ತಿಕಟ್ಟುವ ಕೆಲ ರೈತರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಕಾನೂನು ಓದುವ ವ್ಯವದಾನವಿಲ್ಲ. ಕೇಂದ್ರದ ಸರಕಾರದ ರೈತ ಪರ ಯೋಜನೆಗಳನ್ನು ರೈತರಿಗೆ ತಿಳಿಸುವ ಕಾರ್ಯಕ್ರಮ ರಾಜ್ಯಾದ್ಯಂತ ನಡೆಸಲಾಗುತ್ತದೆ ಎಂದು ತಿಳಿಸಿದರು.
ಶಾಸಕ ಪರಣ್ಣ ಮುನವಳ್ಳಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಗುರುಲಿಂಗನಗೌಡ,ಚನ್ನವೀರನಗೌಡ,ದುರುಗಪ್ಪ ಆಗೋಲಿ,ಜಿ.ಶ್ರೀಧರ ಸೇರಿ ಅನೇಕರಿದ್ದರು