ಬೆಂಗಳೂರು: ಸಮಾನ ಮನಸ್ಕರ ಸಭೆ ಕರೆಯಲು ಮುಂದಾಗಿರುವ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಬೈರತಿ ಬಸವರಾಜ್, ಬುಧವಾರ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಸಭೆ ನಂತರ ಮಾತನಾಡಿದ ಶಾಸಕ, “ಬಿಡಿಎ ಅಧ್ಯಕ್ಷ ಎಸ್.ಟಿ.ಸೋಮಶೇಖರ್, ಬಿಬಿಎಂಪಿ ಬಜೆಟ್ ಕುರಿತು ಚರ್ಚಿಸಲು ಉಪ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದೇವೆ. ರಾಜ್ಯದಲ್ಲಿ ಕುಂದಗೋಳ ಹಾಗೂ ಚಿಂಚೋಳಿ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಹೀಗಾಗಿ ಎಲ್ಲ ಶಾಸಕರು ಚುನಾವಣೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣೆ ಬಳಿಕ ಶಾಸಕರೊಂದಿಗೆ ಚರ್ಚಿಸಿ ಸಮಾನ ಮನಸ್ಕರ ಸಭೆ ಕರೆಯುತ್ತೇನೆ,’ ಎಂದು ಹೇಳಿದರು.
ಇದೇ ವೇಳೆ, ಬಿಡಿಎ ಆಯುಕ್ತ ರಾಕೇಶ್ ಸಿಂಗ್ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಬಿಡಿಎ ಆಯುಕ್ತರಿಗೆ ಸಾರ್ವಜನಿಕರ ಬಗ್ಗೆ ಕಾಳಜಿಯಿಲ್ಲ. ಕೆಂಪೇಗೌಡ, ಅರ್ಕಾವತಿ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ ಪೂರ್ಣಗೊಂಡಿಲ್ಲ. ನಿವೇಶನಕ್ಕಾಗಿ ಹಣ ಕಟ್ಟಿರುವ ಜನ ನರಳಾಡುತ್ತಿದ್ದಾರೆ.
ಆದರೆ, ಉಪ ಕಾರ್ಯದರ್ಶಿ 35 ನಿವೇಶನ ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಅವರ ವಿರುದ್ಧ ಆಯುಕ್ತರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅವರನ್ನು ನಿಯಂತ್ರಿಸುವವರು ಯಾರು? ಜನರ ಸಮಸ್ಯೆ ಬಗೆಹರಿಸುವವರು ಯಾರು? ಬಿಡಿಎ ಅಧ್ಯಕ್ಷ ಸ್ಥಾನ ಲೆಕ್ಕಕ್ಕೆ ಇಲ್ಲದಂತಾಗಿದೆ. ಇದೆಲ್ಲವನ್ನೂ ಉಪ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಡಾ.ಅಜಯ್ ಸಿಂಗ್ ಅವರ ನಿವಾಸಕ್ಕೆ ತೆರಳಿ ಶಾಸಕರು ಮಾತುಕತೆ ನಡೆಸಿದರು. ಆದರೆ, ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಕೇವಲ ಉಪಹಾರ ಸೇವಿಸಿ, ಲೋಕಾಭಿರಾಮವಾಗಿ ಮಾತನಾಡಿದ್ದೇವೆ ಎಂದು ಹೇಳಿದರು.
ಡಾ.ಅಜಯ್ ಸಿಂಗ್ ಮಾತನಾಡಿ, ನಮ್ಮ ಮನೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಚಿಂಚೋಳಿ, ಕುಂದಗೋಳ ವಿಧಾನಸಭೆ ಚುನಾವಣೆ ಕುರಿತು ಚರ್ಚೆ ನಡೆಸಿದ್ದೇವೆ. ಎಸ್.ಟಿ.ಸೋಮಶೇಖರ್ ಯಾವುದೇ ಸಭೆಗೆ ಆಹ್ವಾನ ನೀಡಿಲ್ಲ. ಆಹ್ವಾನ ಬಂದರೆ ಹೋಗುತ್ತೇನೆ ಎಂದು ಹೇಳಿದರು.
ಎಲ್ಲ ಶಾಸಕರು ಉಪ ಚುನಾವಣೆ ಕೆಲಸದಲ್ಲಿ ನಿರತರಾಗಿದ್ದಾರೆ. ಚುನಾವಣೆ ಬಳಿಕ ಸಮಾನ ಮನಸ್ಕ ಶಾಸಕರ ಜತೆ ಚರ್ಚಿಸಿ ಸಭೆ ಕರೆಯುತ್ತೇನೆ.
-ಎಸ್.ಟಿ.ಸೋಮಶೇಖರ್