ಕಲಬುರಗಿ: ಬಹುಸಂಸ್ಕೃತಿಯ ಭಾರತ ದೇಶವು ಬ್ರಿಟಿಷರ ಆಳ್ವಿಕೆಯಿಂದ ಬಳಲಿದರೂ ಡಾ| ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನದಿಂದ ಎಲ್ಲರಿಗೂ ಸಮಾನತೆ ದೊರೆತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹೇಳಿದರು.
ಡಾ| ಬಿ.ಆರ್.ಅಂಬೇಡ್ಕರ್‌ರ 62ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಗುರುವಾರ ನಗರದ ಜಗತ್ ವೃತ್ತದಲ್ಲಿರುವ ಡಾ| ಬಾಬಾಸಾಹೇಬ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ವಿಶ್ವದಲ್ಲಿ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಇಂದಿಗೂ ಸಮಾನತೆ ಇಲ್ಲ. ಡಾ| ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಾಗಿ ನಮ್ಮ ದೇಶದ ಎಲ್ಲ ಪ್ರಜೆಗಳಿಗೆ ಸಮಾನ ಮತದಾನದ ಹಕ್ಕು, ವೇತನ ಹಕ್ಕು ದೊರೆಯುವುದರ ಮೂಲಕ ಎಲ್ಲರೂ ಸಮಾನರಾಗಿ ಬಾಳಲು ಸಾಧ್ಯವಾಗಿದೆ ಎಂದರು.
ಪ್ರತಿಯೊಬ್ಬರು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಸಮಾನರಾಗಿ ಬಾಳಲು ಸಾಧ್ಯವೆಂಬುವುದು ಅಂಬೇಡ್ಕರ್‌ರ ಆಶಯವಾಗಿತ್ತು. ಇದರಂತೆ ಎಲ್ಲರೂ ಬಾಳಬೇಕು. ಅಂಬೇಡ್ಕರ್ ಅಂತಾರಾಷ್ಟ್ರೀಯ ನಾಯಕರಾಗಿದ್ದು, ಅವರನ್ನು ಒಂದೇ ಜಾತಿ ಅಥವಾ ಸಮಾಜಕ್ಕೆ ಸೀಮಿತಗೊಳಿಸಬಾರದು. ಈ ದೇಶದ ಮಹಾನ್ ವ್ಯಕ್ತಿಗಳು ನೀಡಿರುವ ಮಾರ್ಗದರ್ಶನ ಎಲ್ಲ ಜಾತಿ, ಜನಾಂಗಕ್ಕೆ ಅನ್ವಯವಾಗುತ್ತವೆ. ಶಾಲಾ ಮಟ್ಟದಲ್ಲಿ ಮಕ್ಕಳ ಸಂಸತ್ ರಚಿಸುವುದನ್ನು ರೂಢಿಗೊಳಿಸಬೇಕು. ಇದರಿಂದ ಮಕ್ಕಳಲ್ಲಿ ಸಂವಿಧಾನ, ರಾಜಕೀಯದ ಜಾಗೃತಿ ಮೂಡುತ್ತದೆ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ಡಾ| ಅಂಬೇಡ್ಕರ್ ದೇಶದ ಭವಿಷ್ಯದ ಬಗ್ಗೆ ಮುಂದಾಲೋಚನೆ ಕೈಗೊಂಡು ಆರ್ಥಿಕ, ಶಿಕ್ಷಣ, ರಾಜಕೀಯ ಅಲ್ಲದೇ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ದೊರೆಯುವಂತೆ ಸಂವಿಧಾನ ರಚಿಸಿದ್ದಾರೆ. ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಅದರಲ್ಲಿ ಅಂಬೇಡ್ಕರ್ ವಾದ ಇದ್ದೆ ಇರುತ್ತದೆ ಎಂದರು.
ಚಿತ್ತಾಪುರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಪ್ರಾಚಾರ್ಯ ಡಾ| ವಿಜಯಕುಮಾರ ಸಾಲಿಮನಿ ಉಪನ್ಯಾಸ ನೀಡಿ, ಭಾರತ ದೇಶವು ಸಾಂಸ್ಕೃತಿಕವಾಗಿ ಒಗ್ಗಟ್ಟಾಗಿ ಉಳಿದಿದ್ದರೆ ಅದಕ್ಕೆ ಅಂಬೇಡ್ಕರ್ ಸಂವಿಧಾನವೇ ಕಾರಣವಾಗಿದೆ. ಇದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಸಂಘಾನಂದ ಬಂತೆ ಸಾನಿಧ್ಯ ವಹಿಸಿದ್ದರು. ಮಹಾನಗರ ಪಾಲಿಕೆ ಮೇಯರ್ ಮಲ್ಲಮ್ಮ ಎಸ್. ವಳಕೇರಿ, ಮಹಾನಗರ ಪಾಲಿಕೆ ಆಯುಕ್ತ ಪೆದ್ದಪ್ಪಯ್ಯ ಆರ್.ಎಸ್., ಜಿಪಂ ಸಿಇಒ ಡಾ| ರಾಜಾ ಪಿ., ತಹಶೀಲ್ದಾರ್ ಅಶೋಕ ಹಿರೋಳೆ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಸತೀಶ, ಜಿಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಎಸ್.ಮದನಕರ, ಪದಾಧಿಕಾರಿಗಳಾದ ಬಾಬು ಮೌರ್ಯ, ವಿಠ್ಠಲಗೋಳಾ, ಮುಖಂಡರಾದ ಚಂದ್ರಾಮ ಹುಬ್ಬಳ್ಳಿ, ಚಂದ್ರಕಾಂತ ಅಷ್ಠಗಿ ಹಾಗೂ ಸರ್ಕಾರಿ, ಅರೆ ಸರ್ಕಾರಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘ, ಮಹಾನಗರ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆ ನೌಕರರು ಇದ್ದರು.