ದಾವಣಗೆರೆ: ಅಂಬೇಡ್ಕರ್‌ರ ಆಶಯದಂತೆ ಸಮಾಜದ ಎಲ್ಲಾ ವರ್ಗದವರು ಶಿಕ್ಷಣ ಪಡೆಯುವವರೆಗೆ ಸಮಾಜದಲ್ಲಿ ಸಮಾನತೆ ಕಾಣುವುದು ಸಾಧ್ಯವಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಹೇಳಿದ್ದಾರೆ. ಭಾನುವಾರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಸಾಯಿರಾಂ ಸಭಾಂಗಣದಲ್ಲಿ ರಾಜ್ಯಮಟ್ಟದ ಉಪ್ಪಾರ ಸಮಾಜದ ಶೈಕ್ಷಣಿಕ ಕ್ಷೇತ್ರದ ಬಂಧುಗಳು ಸೌಹಾರ್ದ ಭೇìಟಿ, ವಿಚಾರಗೋಷ್ಠಿ ಉದ್ಘಾಟಿಸಿ, ಮಾತನಾಡಿದರು.
ಅಂಬೇಡ್ಕರ್ ರು ಸಮಾಜಕ್ಕೆ ಶಿಕ್ಷಣ, ಸಂಘಟನೆ, ಹೋರಾಟ ತತ್ವ ಅವಶ್ಯಕ ಎಂದು ಹೇಳಿದ್ದರು. ಇದೇ ತತ್ವಗಳು ನಮ್ಮ ಸಮಾಜದ ಏಳಿಗೆಗೆ ಭದ್ರ ಬುನಾದಿ ಹಾಕಬಲ್ಲ ತತ್ವಗಳಾಗಿವೆ ಎಂಧರು. ಸಮಾಜದ ವೃದ್ಧಿಗೆ ಮೌಡ್ಯತೆ, ಅನಕ್ಷರತೆ, ಬಡತನ ದೊಡ್ಡ ಸಮಸ್ಯೆಗಳಾಗಿ ಕಾಡುತ್ತಿವೆ. ಇವುಗಳಿಂದ ಮುಕ್ತಿ ಪಡೆಯಬೇಕಿದೆ.
ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು, ಎಲ್ಲರೂ ಶಿಕ್ಷಣ ಪಡೆಯುವಂತೆ ಮಾಡಬೇಕು. ಸಂವಿಧಾನದ ಆಶಯಗಳ ಸಾಕಾರಕ್ಕೆ ಶಿಕ್ಷಣ ಅನಿವಾರ್ಯ ಎಂದು ತಿಳಿಸಿದರು. ಉಪ್ಪಾರ ಸಮಾಜ ಸಹ ಹಿಂದುಳಿದ ಸಮಾಜಗಳ ಪೈಕಿ ಒಂದಾಗಿದೆ. ಸಮಾಜದಲ್ಲಿನ ಬಡ ವರ್ಗದ ಜನರ ಏಳಿಗೆಗೆ ಶಿಕ್ಷಣ, ಸಂಘಟನೆ, ಹೋರಾಟ ಬೇಕಿದೆ.
ಸಮಾಜದ ಮುಖಂಡರು ಈ ನಿಟ್ಟಿನಲ್ಲಿ ಯತ್ನಿಸಬೇಕು. ನಮ್ಮ ಸಮಾಜದ ಬಡ ಜನರಿಗೆ ಅನುಕೂಲ ಕಲ್ಪಿಸಲು ಎಲ್ಲಾ ರೀತಿಯ ಸಹಕಾರ ನೀಡಬೇಕು. ಸರ್ಕಾರದ ಸವಲತ್ತು ಪಡೆಯಲು ಹೋರಾಟ ನಡೆಸಬೇಕು ಎಂದು ತಿಳಿಸಿದರು. ಸಮಾಜ ಬಾಂಧವರು ಎಷ್ಟೇ ಕಷ್ಟ ನಷ್ಟಕ್ಕೆ ತುತ್ತಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದನ್ನು ಮರೆಯಬೇಡಿ.
ಮಕ್ಕಳ ಶಿಕ್ಷಣವೇ ಮುಂದೆ ಸಮಾಜದ ಉದ್ಧಾರಕ್ಕೆ ಕಾರಣವಾಗುತ್ತದೆ. ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ಸಮಾಜ, ಸರ್ಕಾರದಿಂದ ಸೂಕ್ತ ಸವಲತ್ತು ಕೊಡಲು ಕ್ರಮ ವಹಿಸಿ ಎಂದು ಕರೆನೀಡಿದರು. ಸಮಾಜದ ಮುಖಂಡ ಅಂಜಿನಪ್ಪ ಮಾತನಾಡಿ, ಶಿಕ್ಷಣಕ್ಕೆ ಸರಿ ಸಮಾನವಾದ ಸಂಪತ್ತು ಇನ್ನೊಂದು ಇಲ್ಲ. ಜ್ಞಾನಾರ್ಜನೆ ಮೂಲಕ ಸಮಾಜವನ್ನು ಸರಿದಾರಿಗೆ ಕರೆದೊಯ್ಯಬೇಕು.
ಉಪ್ಪಾರ ಸಮಾಜ ಬಾಂಧವರು ಶಿಕ್ಷಣಕ್ಕೆ ಒತ್ತುಕೊಡಬೇಕು. ಉತ್ತಮ ಸ್ಥಿತಿಯಲ್ಲಿರುವ ಸಮಾಜದ ಬಾಂಧವರು ಕೇವಲ ಕುಟುಂಬಕ್ಕೆ ತಮ್ಮ ಜೀವನ ಮೀಸಲಿಡದೆ ಸಮಾಜದ ದುರ್ಬಲ ವರ್ಗದವರ ಏಳಿಗೆಗೂ ಸಹ ಶ್ರಮಿಸಬೇಕು ಎಂದರು. ರಾಜಕೀಯವಾಗಿ ನಮ್ಮ ಸಮಾಜ ಇನ್ನೂ ಎತ್ತರಕ್ಕೆ ಬೆಳೆಯಬೇಕಿದೆ. ರಾಜಕೀಯವಾಗಿ ಮುಂದುವರಿಯಲು ಸಂಘಟನೆ ಅತ್ಯಗತ್ಯವಾಗಿದೆ.
ಸಮಾಜದ ಬಾಂಧವರು ಸಂಘಟಿತರಾಗುವತ್ತ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು. ಭಗೀರಥ ಪೀಠದ ಪುರುಷೋತ್ತಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಪ ಮೇಯರ್ ಮಂಜಮ್ಮ, ಎಪಿಎಂಸಿ ಮಾಜಿ ಅಧ್ಯಕ್ಷ ತುರ್ಚಘಟ್ಟ ಬಸವರಾಜಪ್ಪ, ಶರಣ್ ಡಿ. ಬಂಡಿ, ಎಸ್. ಬಸವರಾಜಪ್ಪ, ಬಸವಗೌಡ, ಎಚ್. ತಿಪ್ಪಣ್ಣ, ಎನ್.ಎಸ್. ಚಂದ್ರಪ್ಪ ವೇದಿಕೆಯಲ್ಲಿದ್ದರು.