ಬೆಂಗಳೂರು: ಶತಮಾನಗಳಿಂದ ಮಹಾಪುರುಷರು ಹಾಗೂ ಸಾಹಿತಿಗಳು ಎಷ್ಟೇ ಕ್ರಾಂತಿ ಮಾಡಿದರೂ ಸಮಾನತೆ ಸಾಧ್ಯವಾಗಿಲ್ಲ ಎಂದು ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾ ನಾಯಕ್ ಬೇಸರ ವ್ಯಕ್ತಪಡಿಸಿದರು.
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶುಕ್ರವಾರ ಆಯೋಜಿಸಿದ್ದ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 12 ನೇ ಶತಮಾನದ ಬಸವಣ್ಣ ಅವರಿಂದ ಪ್ರಾರಂಭವಾಗಿ ಹಲವಾರು ಮಹಾಪುರುಷರು ಸಾಕಷ್ಟು ಕ್ರಾಂತಿ ಮಾಡಿದರೂ ಸಮಾಜದಲ್ಲಿ ಯಾವ ಬದಲಾವಣೆಯೂ ಆಗಿಲ್ಲ ಎಂದು ಹೇಳಿದರು.
ಜಾತಿ ಸಮಾನತೆಗೆ ಅಂತರ್ಜಾತಿ ವಿವಾಹ ಒಂದು ಪರಿಣಾಮಕಾರಿ ಮಾರ್ಗ ಎಂದು ಮಹಾಪುರುಷರು ಹೇಳಿದ್ದರು ಆದರೆ, ಇಂದು ಸಮಾಜದಲ್ಲಿ ಅಂತರ್ಜಾತಿ ವಿವಾಹ ನಡೆದರೆ ಅದನ್ನು ವಿರೋಧಿಸಿ ಮರ್ಯಾದೆ ಹತ್ಯೆಯಂತಹ ಘೋರ ಘಟನೆಗಳು ನಡೆಯುತ್ತವೆ ಎಂದರು.
ಸಾಹಿತಿ ಕುಲಶೇಖರಿ ಮಾತನಾಡಿ, ಪ್ರಶಸ್ತಿಗಳನ್ನು ಅನುಮಾನದಿಂದ ನೋಡುವ ಸ್ಥಿತಿ ಇದೆ. ಸಮಾಜದಲ್ಲಿ ವ್ಯಕ್ತಿಗಿಂತ ವ್ಯಕ್ತಿಯ ಸಾಧನೆಗೆ ಮನ್ನಣೆ ಸಿಗವಂತಾಗಬೇಕು. ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದು ತುಂಬಾ ಖುಷಿಯಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಕುಲಸಚಿವ ಡಾ.ಬಸವರಾಜ ಡೋಣೂರ ಅವರಿಗೆ
ಮನೋಹರಿ ಪಾರ್ಥಸಾರಥಿ ಮನುಶ್ರೀ ದತ್ತಿ ಪ್ರಶಸ್ತಿ ಹಾಗೂ ಸಾಹಿತಿ ಕುಲಶೇಖರಿ ಅವರಿಗೆ ಟಿ.ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್, ದತ್ತಿ ದಾನಿಗಳಾದ ಟಿ.ಎಸ್.ಶೈಲಜಾ, ಗೌರವ ಕಾರ್ಯದರ್ಶಿ ಡಾ.ರಾಜಶೇಖರ ಹತಗುಂದಿ ಉಪಸ್ಥಿತರಿದ್ದರು.