ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾನವಾದ ಸಹಕಾರ, ಬೆಂಬಲ ಸಿಗುತ್ತಿದೆ. ಆದರೆ, ಲೈಂಗಿಕ ದೌರ್ಜನ್ಯ, ಕಿರುಕುಳ, ಬಲತ್ಕಾರದ ಪ್ರಕರಣಗಳಿಂದ ಮಹಿಳೆ ಅಬಲೆಯಾಗುತ್ತಿದ್ದಾಳೆ. ಇಂತಹ ಸ್ಥಿತಿ ನಿರ್ಮಾಣವಾಗುವುದು ಬೇಡ. ಮಹಿಳೆಯರಿಗೆ ಸಮಾನ ಸ್ಥಾನದ ಜೊತೆ ಗೌರವ ಕೊಡಬೇಕಾಗಿರುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವೊಬ್ಬ ಹೆಣ್ಣು ಮಗುವು ಕೂಡ ಶಿಕ್ಷಣದಿಂದ ಹಿಂದೆ ಸರಿಯಬಾರದು. ಕಡ್ಡಾಯವಾಗಿ ಶಿಕ್ಷಣ ಪಡೆದಾಗ ಮಾತ್ರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವೆಂದರು.
3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಸಿ.ಭಾನುಮತಿ ಮಾತನಾಡಿ, ಯಾರ ಹೊಗಳಿಕೆಗೆ ಒಳಗಾಗದೇ ನಾಲ್ಕು ಗೋಡೆಗಳ ಮಧ್ಯೆ ಇದ್ದುಕೊಂಡೇ ದಿನ ಪೂರ್ತಿ ಮನೆ ಕೆಲಸ ಮಾಡುವ ಗೃಹಿಣಿಯರು ಕೂಡ ಸಾಧನೆ ಮಾಡಿದ ಮಹಿಳೆಯರ ಗುಂಪಿಗೆ ಸೇರುತ್ತಾರೆ ಎಂದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಸಿ.ಜೆ.ಎಂ ರೂಪಾ ಕೆ.ಎನ್. ಮಾತನಾಡಿ, ಇಂದಿನ ಮಹಿಳೆಯರು ವಿವಿಧ ವೃತ್ತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿದ್ದಾರೆ. ಜೊತೆಗೆ ಮನೆಯ ನಿರ್ವಹಣೆಯನ್ನು ಶಾಂತಿಯುತವಾಗಿ ನಿಭಾಯಿಸಬಲ್ಲರು ಎಂದರು.
ಕೀಳರಿಮೆ ಇರಬಾರದು: ಅಪರ ಜಿಲ್ಲಾಧಿಕಾರಿ ಆರತಿ ಮಾತನಾಡಿ, ಬಲಿಷ್ಠ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯ ಹಾಗೂ ಮಹಿಳೆ ತನ್ನ ಕುಟುಂಬದಲ್ಲಿ ತಾಯಿ, ಮಗಳು, ಸೊಸೆ ಸೇರಿದಂತೆ ಪ್ರಮುಖ ಪಾತ್ರ ನಿರ್ವಹಿಸುತ್ತಾಳೆ. ಉತ್ತಮ ಸಮಾಜ ನಿರ್ಮಾಣಕ್ಕೆ ಗಂಡು ಹೆಣ್ಣು ಎಂಬ ಕೀಳರಿಮೆ ಇರಬಾರದು ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹೆಚ್.ದೇವರಾಜ್, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮಾಲ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಹೆಚ್.ತಮ್ಮೇಗೌಡ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವಿ. ವಿನೋದ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಲಕ್ಷಿದೇವಮ್ಮ ಉಪಸ್ಥಿತರಿದ್ದರು.
8 ಮಂದಿಗೆ ಅಸಾಧಾರಣ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ 2019-20 ಸಾಲಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಸಾಧಾರಣ ಮಕ್ಕಳಾದ ಸುಚಲ್ ಪಿ.ಜಿ., ಕೆ.ವಿ.ಶ್ರೀತಾ, ನಿಶ್ಚಲ್‌ರಾಮ್, ಭೂಮಿಕಾ ಹೆಚ್.ಆರ್., ಯಶ್ವಂತ್ ಎಸ್., ಗಣೇಶ್ವರ ಬಿ.ಎಂ., ಸಿರಿ ಎಂ.ಭಟ್, ಶ್ರಾವ್ಯ ಪಿ.ವಿ.ಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ತಲಾ 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಮಹಿಳೆಯರ ಪೌಷ್ಟಿಕತೆಯ ದೃಷ್ಟಿಯಿಂದ ಜಿಲ್ಲೆಯಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನವು ಉತ್ತಮವಾದ ಕಾರ್ಯವನ್ನು ನಿರ್ವಹಿಸಿದೆ. ಇದರಿಂದ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಹಿಳೆಯರು ಪೌಷ್ಟಿಕರಾಗಿ ಹೊರಹೊಮ್ಮಿದ್ದಾರೆ. ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರಿಗೆ ಆಗುತ್ತಿರುವ ಮಾನಸಿಕ ಹಾಗೂ ದೈಹಿಕ ಕಿರುಕುಳಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಅಗತ್ಯ ಇದೆ.
-ಬಿ.ಫೌಝೀಯಾ ತರುನ್ನುಮ್, ಜಿಪಂ ಸಿಇಒ