2026 ರಲ್ಲಿ ತಮಿಳುನಾಡು ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು ಆಡಳಿತಾರೂಢ ಡಿಎಂಕೆ ಮೈತ್ರಿಕೂಟವನ್ನು ಎದುರಿಸಲು ವಿಪಕ್ಷಗಳು ಈಗಾಗಲೇ ಸಿದ್ಧತೆಗಳನ್ನು ನಡೆಸುತ್ತಿವೆ. ಪ್ರಮುಖ ವಿಪಕ್ಷ ಎಐಎಡಿಎಂಕೆ ಕೂಡ ನಾಯಕತ್ವದ ಸವಾಲುಗಳ ನಡುವೆಯೂ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿ ಲೆಕ್ಕಾಚಾರಗಳನ್ನು ಮಾಡಿಕೊಳ್ಳುತ್ತಿದೆ.
ತಮಿಳುನಾಡು ಮಾಜಿ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ (EPS)ಅವರು ಎಐಎಡಿಎಂಕೆ ಯು ಬಿಜೆಪಿಯೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.ಬುಧವಾರ(ಸೆ13) ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪಳನಿಸ್ವಾಮಿ, ಎಐಎಡಿಎಂಕೆ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಲೋಕಸಭೆ ಚುನಾವಣೆಯ ವೇಳೆಯಲ್ಲೇ ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ ಎಂದರು.
ನವೆಂಬರ್ 10 ರಂದು, ಆಡಳಿತಾರೂಢ ಡಿಎಂಕೆಯನ್ನು ಸೋಲಿಸಲು ನಮ್ಮ ಪಕ್ಷವು ಸಮಾನ ಮನಸ್ಕ ಪಕ್ಷಗಳೊಂದಿಗೆ ಸಹಕರಿಸಲು ಮುಕ್ತವಾಗಿದೆ ಎಂದು ಪಳನಿಸ್ವಾಮಿ ಹೇಳಿಕೆ ನೀಡಿದ್ದರು. ಹೇಳಿಕೆ ಆಧರಿಸಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಊಹಾಪೋಹಗಳ ಕುರಿತು ಪಳನಿಸ್ವಾಮಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಎಐಎಡಿಎಂಕೆಯ ಹಿರಿಯ ನಾಯಕ ಡಿ. ಜಯಕುಮಾರ್ ಕೂಡ ಊಹಾಪೋಹಗಳನ್ನು ತಳ್ಳಿಹಾಕಿದ್ದು, ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಪಳನಿ ಸ್ವಾಮಿ ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಬಿಜೆಪಿಯಿಂದ ಪ್ರತ್ಯೇಕವಾಗಿ ಉಳಿಯುವ ಎಐಎಡಿಎಂಕೆ ನಿರ್ಧಾರ ದೃಢವಾಗಿ ಉಳಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷೆ ತಮಿಳಿಸೈ ಸೌಂದರರಾಜನ್ ‘ 2026 ರ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದೆ. ಸಹೋದರ ಪಳನಿಸ್ವಾಮಿ ಒಳ್ಳೆಯ ಮಾತು ಹೇಳಿದ್ದಾರೆ. ಸಮಾನ ಮನಸ್ಕ ಪಕ್ಷಗಳು ಒಂದಾಗಬೇಕು ಎಂಬುದರ ಅರ್ಥವೇನು? ಜನವಿರೋಧಿ ಡಿಎಂಕೆ ಸರ್ಕಾರವನ್ನು ಕಿತ್ತೊಗೆಯಲು ಇಂದು ತಮಿಳುನಾಡಿನ ವಿರೋಧ ಪಕ್ಷಗಳು ಇದೇ ಅಭಿಪ್ರಾಯವನ್ನು ಹೊಂದಿವೆ. ಸಮಾನ ಮನಸ್ಕ ಪಕ್ಷಗಳು ಒಗ್ಗೂಡಿ ಬಲಿಷ್ಠ ಮೈತ್ರಿ ಮಾಡಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಯಾವುದೇ ಮೈತ್ರಿ ನಿರ್ಧಾರಗಳನ್ನು ಬಿಜೆಪಿಯ ರಾಷ್ಟ್ರೀಯ ನಾಯಕತ್ವ ನಿರ್ಧರಿಸುತ್ತದೆ ಎಂದಿದ್ದಾರೆ.
2021 ರಲ್ಲಿ ಏನಾಗಿತ್ತು?
2021 ರಲ್ಲಿ ಎಐಎಡಿಎಂಕೆಯು ಪಿಎಂಕೆ, ಬಿಜೆಪಿ ಮತ್ತು ತಮಿಳು ಮಾನಿಲ ಕಾಂಗ್ರೆಸ್ (ಮೂಪನಾರ್) ಸೇರಿ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಡಿಎಂಕೆ-ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವನ್ನು ಎದುರಿಸಿತ್ತು. ಚುನಾವಣೆಯಲ್ಲಿ ವೈಫಲ್ಯ ಅನುಭವಿಸಿತ್ತು. ಬಿಜೆಪಿ ಪ್ರಬಲ ಭವಿಷ್ಯದ ನಾಯಕ ಎಂದು ಬಿಂಬಿತವಾಗಿದ್ದ ಅಣ್ಣಾಮಲೈ ಕೂಡ ಸೋಲು ಅನುಭವಿಸಿದ್ದರು. 234 ಸದಸ್ಯ ಬಲದ ವಿಧಾನ ಸಭೆಯಲ್ಲಿ ಡಿಎಂಕೆ 133 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೇರಿತ್ತು.ಮಿತ್ರ ಪಕ್ಷಗಳು ಸೇರಿ 159 ಸ್ಥಾನಗಳನ್ನು ಗೆದ್ದು ಬೀಗಿದ್ದವು. ಎಐಎಡಿಎಂಕೆ 66 ಸ್ಥಾನ, ಬಿಜೆಪಿ ಕೇವಲ 4 ಸ್ಥಾನ ಗೆದ್ದಿತ್ತು. ಮಿತ್ರ ಪಕ್ಷ ಪಿಎಂಕೆ 5 ಸ್ಥಾನ ಗೆಲ್ಲಲಷ್ಟೇ ಶಕ್ತವಾಗಿದ್ದವು.
ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ಮತ್ತು ಎಐಎಡಿಎಂಕೆ ದೂರವಾಗಿದ್ದವು. ಪರಿಸ್ಥಿತಿಯ ಲಾಭ ಪಡೆದಿದ್ದ ಡಿಎಂಕೆ ಭಾರಿ ಜಯ ಸಾಧಿಸಿತ್ತು. ಎಲ್ಲಾ 39 ಸ್ಥಾನಗಳಲ್ಲಿಯೂ ಇಂಡಿಯಾ ಮೈತ್ರಿಕೂಟ ಜಯ ತನ್ನದಾಗಿಸಿಕೊಂಡಿತ್ತು. ಬಿಜೆಪಿ ಮತ್ತು ಎಐಎಡಿಎಂಕೆ ಶೂನ್ಯ ಫಲಿತಾಂಶ ಪಡೆದು ಶಾಕ್ ಅನುಭವಿಸಿದ್ದವು. ಎಐಎಡಿಎಂಕೆ ಮೈತ್ರಿಕೂಟ 23.05 % ಮತ ಪಡೆದಿದ್ದರೆ, ಬಿಜೆಪಿ ನೇತೃತ್ವದ ಎನ್ ಡಿಎ 18.28 % ಮತ ಪಡೆದಿತ್ತು, ಆದರೆ ಮತ ವಿಭಜನೆಯ ಕಾರಣದಿಂದಾಗಿ ಎರಡೂ ಪಕ್ಷಗಳೂ ಭಾರೀ ನಷ್ಟ ಅನುಭವಿಸಿದ್ದವು. ಡಿಎಂಕೆ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟ 46.97% ಮತ ಪಡೆದಿತ್ತು.
ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎನ್ನುವ ಮಾತು ಹಲವು ಬರಿ ರುಜುವಾತಾಗಿದೆ. ಎಐಎಡಿಎಂಕೆ ಮತ್ತು ಬಿಜೆಪಿ ಪಕ್ಷದ ಅಸ್ಥಿತ್ವಕ್ಕಾಗಿ ಮತ್ತೆ ಒಂದಾಗಲಿವೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಬಾರಿ ವಿಜಯ್ ಪ್ರಭಾವ ಬೀರುವರೇ?
ಈ ಬಾರಿ ಖ್ಯಾತ ನಟ ವಿಜಯ್ ಅವರು ‘ತಮಿಳಗ ವೆಟ್ರಿ ಕಳಗಂ’ ಪಕ್ಷ ಕಟ್ಟಿ ಸಂಘಟನೆ ಮಾಡುತ್ತಿದ್ದಾರೆ. ಅವರು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತಾರೆ? ಯಾರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.