Advertisement

ಸೀಜನ್‌ ಜ್ವರ ಕಾಟದ ಮಧ್ಯೆ ಸಾಂಕ್ರಾಮಿಕ ರೋಗಗಳ ಹಾವಳಿ ­

09:20 AM Dec 13, 2022 | Team Udayavani |

ಧಾರವಾಡ: ಹವಾಮಾನ ವೈಪರೀತ್ಯದಿಂದ ಉಂಟಾಗಿರುವ ಶೀತ ಹಾಗೂ ಮಳೆಯ ವಾತಾವರಣದ ಮಧ್ಯೆ ಸೀಜನ್‌ ಜ್ವರದ ಕಾಟ ಜಿಲ್ಲೆಯಲ್ಲಿ ಮತ್ತೆ ಶುರುವಾಗಿದ್ದು, ಜ್ವರದ ಜತೆಗೆ ನೆಗಡಿ, ಮೈಕೈ ನೋವು, ಸುಸ್ತಿನಿಂದ ಜನತೆ ನರಳುವಂತಾಗಿದೆ. ಇದರ ಮಧ್ಯೆ ಕೀಟಜನ್ಯದಿಂದ ಬರುವ ಡೆಂಘೀ, ಚಿಕೂನ್‌ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಹಾವಳಿಯೂ ಹೆಚ್ಚಾಗಿದೆ.

Advertisement

ಕಳೆದ 2019ರಲ್ಲಿ 250 ಜನರಲ್ಲಿ ಡೆಂಘೀ, 121 ಜನರಲ್ಲಿ ಚಿಕೂನ್‌ ಗುನ್ಯಾ, 2020ರಲ್ಲಿ 36 ಜನರಲ್ಲಿ ಡೆಂಘೀ, 17 ಜನರಲ್ಲಿ ಚಿಕೂನ್‌ ಗುನ್ಯಾ, 8 ಜನರಲ್ಲಿ ಮಲೇರಿಯಾ ಪತ್ತೆಯಾಗಿತ್ತು. ಇದೀಗ 2022ರ ಪ್ರಸಕ್ತ ಸಾಲಿನ 11 ತಿಂಗಳಲ್ಲಿ ಅಂದರೆ ಆರೋಗ್ಯ ಇಲಾಖೆಯೇ ನ.30 ಅಂತ್ಯದವರೆಗೆ ನೀಡಿರುವ ಮಾಹಿತಿ ಅನ್ವಯ ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಜನರಲ್ಲಿ ಡೆಂಘೀ ಲಕ್ಷಣಗಳು ಪತ್ತೆಯಾಗಿದ್ದು, ಈ ಪೈಕಿ ತಪಾಸಣೆಗೊಳಪಡಿಸಿದಾಗ 247 ಜನರಲ್ಲಿ ಡೆಂಘೀ ದೃಢಪಟ್ಟಿದೆ.

ಅದರಲ್ಲೂ ನವೆಂಬರ್‌ ತಿಂಗಳಲ್ಲಿಯೇ 12 ಜನರಲ್ಲಿ ಡೆಂಘೀ ಪತ್ತೆಯಾಗಿದೆ. ಚಿಕೂನ್‌ ಗುನ್ಯಾ ಗುಣಲಕ್ಷಣ ಕಂಡು ಬಂದ 1051 ಜನರನ್ನು ತಪಾಸಣೆಗೆ ಒಳಪಡಿಸಿದ್ದು, ಈ ಪೈಕಿ 33 ಜನರಲ್ಲಿ ರೋಗ ದೃಢಪಟ್ಟಿದೆ.

ಇನ್ನು ಧಾರವಾಡ ಗ್ರಾಮೀಣದಲ್ಲಿ 2, ಕುಂದಗೋಳ, ಧಾರವಾಡ ಶಹರ ವ್ಯಾಪ್ತಿಯಲ್ಲಿ ತಲಾ 1, ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿ ನಾಲ್ವರಲ್ಲಿ ಮಲೇರಿಯಾ ಪತ್ತೆಯಾಗಿದ್ದು, ಇವರೆಲ್ಲರೂ ಜಿಲ್ಲೆಯ ಹೊರಗಿನವರು. ಹೀಗಾಗಿ ಜಿಲ್ಲೆಯಲ್ಲಿ ಮಲೇರಿಯಾ ಶೂನ್ಯ ಸ್ಥಿತಿಯಲ್ಲಿದೆ. ಇನ್ನು ಮೆದುಳು ಜ್ವರ ಲಕ್ಷಣ ಕಂಡು ಬಂದ 15 ಜನರಲ್ಲಿ ತಪಾಸಣೆಗೆ ಒಳಪಡಿಸಿದ್ದು, ಈ ಪೈಕಿ ಯಾರಲ್ಲೂ ರೋಗ ದೃಢಪಟ್ಟಿಲ್ಲ.

ಅವಳಿನಗರದಲ್ಲಿಯೇ ಹಾವಳಿ ಹೆಚ್ಚು: 2015ರಲ್ಲಿ 46, 2016 ರಲ್ಲಿ 97, 2017ರಲ್ಲಿ 172, 2018ರಲ್ಲಿ 112, 2019 ರಲ್ಲಿ 250, 2020ರಲ್ಲಿ 36 ಜನರಲ್ಲಿ ಡೆಂಘೀ ರೋಗ ದೃಢಪಟ್ಟಿತ್ತು. ಈ ಪೈಕಿ ಕೊರೋನಾ ಲಾಕ್‌ಡೌನ್‌ ಸಮಯದಲ್ಲಿಯೇ 2020ರಲ್ಲಿ ಡೆಂಘೀ ಗೆ ಹುಬ್ಬಳ್ಳಿಯಲ್ಲಿ ಒಬ್ಬರು ಮೃತಪಟ್ಟಿದ್ದರು.

Advertisement

ಸದ್ಯ ಧಾರವಾಡ, ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿಯೇ ಅಂದರೆ ಅವಳಿನಗರದಲ್ಲಿಯೇ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಿದೆ. ಈ ವರ್ಷದ 11 ತಿಂಗಳಲ್ಲಿ ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿಯೇ 74 ಡೆಂಘೀ ಪ್ರಕರಣ ಪತ್ತೆಯಾಗಿದ್ದರೆ ನವೆಂಬರ್‌ ತಿಂಗಳಲ್ಲಿಯೇ 13 ಡೆಂಘೀ ಪ್ರಕರಣ ದೃಢಪಟ್ಟಿವೆ.

ಇನ್ನು ಧಾರವಾಡ ಶಹರ ವ್ಯಾಪ್ತಿಯಲ್ಲಿ 65 ಜನರಲ್ಲಿ ಡೆಂಘೀ ದೃಢಪಟ್ಟಿದ್ದರೆ ಧಾರವಾಡ ಗ್ರಾಮೀಣ ವ್ಯಾಪ್ತಿಯಲ್ಲಿ 40, ಕುಂದಗೋಳ ತಾಲೂಕಿನ ವ್ಯಾಪ್ತಿಯಲ್ಲಿ 20, ನವಲಗುಂದ ತಾಲೂಕಿನ ವ್ಯಾಪ್ತಿಯಲ್ಲಿ 19, ಹುಬ್ಬಳ್ಳಿ ಗ್ರಾಮೀಣ ವ್ಯಾಪ್ತಿಯಲ್ಲಿ 14, ಕಲಘಟಗಿ ತಾಲೂಕಿನ ವ್ಯಾಪ್ತಿಯಲ್ಲಿ 8 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಇನ್ನು 2015 ರಲ್ಲಿ 17, 2016 ರಲ್ಲಿ 6, 2017 ರಲ್ಲಿ 11, 2018 ರಲ್ಲಿ 85, 2019ರಲ್ಲಿ 121, 2020ರಲ್ಲಿ 17 ಜನರಲ್ಲಿ ಚಿಕೂನ್‌ಗುನ್ಯಾ ಕಾಣಿಸಿಕೊಂಡು ತೊಂದರೆ ಉಂಟು ಮಾಡಿತ್ತು.

ಈ ವರ್ಷ ಚಿಕೂನ್‌ಗುನ್ಯಾ ಶಹರ ಭಾಗಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಹೊಡೆತ ನೀಡಿದೆ. ಹೀಗಾಗಿ ಧಾರವಾಡ ಗ್ರಾಮೀಣದಲ್ಲಿ 13, ಶಹರ ವ್ಯಾಪ್ತಿಯಲ್ಲಿ 10, ಹುಬ್ಬಳ್ಳಿ ಗ್ರಾಮೀಣದಲ್ಲಿ 5, ಕುಂದಗೋಳ, ನವಲಗುಂದದಲ್ಲಿ ತಲಾ 2, ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿ ಒಬ್ಬರಲ್ಲಿ ಚಿಕೂನ್‌ಗುನ್ಯಾ ಪತ್ತೆಯಾಗಿದೆ.

ತಪ್ಪಿದ ಸೊಳ್ಳೆ ನಿಯಂತ್ರಣ: ಸಾಂಕ್ರಾಮಿಕ ರೋಗಗಳ ನಿಯಂತ್ರಿಸಲು ಆರೋಗ್ಯ ಇಲಾಖೆಯ ಶಿಫಾರಸು ಗಳಿಗೆ ಮಣೆ ಹಾಕದ ಹು-ಧಾ ಮಹಾನಗರ ಪಾಲಿಕೆ ಅವಳಿನಗರದಲ್ಲಿ ಸೊಳ್ಳೆಯ ಸಂತಾನೋತ್ಪತ್ತಿಗೆ ನಿಯಂತ್ರಣ ಹಾಕಲು ಫಾಗಿಂಗ್‌ ಕಾರ್ಯಕ್ಕೆ ಆದ್ಯತೆ ನೀಡಿಲ್ಲ. ಹೀಗಾಗಿ ಸೊಳ್ಳೆಗಳ ನಿಯಂತ್ರಣ ತಪ್ಪಿದ್ದು, ಸೊಳ್ಳೆಯ ಕಾಟ ಅವಳಿನಗರದಲ್ಲಿ ಜೋರಾಗಿದೆ. ಇದಲ್ಲದೇ ಗ್ರಾಮೀಣ ಭಾಗದಲ್ಲೂ ಗ್ರಾಪಂಗಳ ನಿರ್ಲಕ್ಷ್ಯದಿಂದ ಸೊಳ್ಳೆಯ ನಿಯಂತ್ರಣ ದಾರಿ ತಪ್ಪಿದ್ದು, ಹೀಗಾಗಿ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ಸದ್ದಿಲ್ಲದೇ ಹೊಡೆತ ನೀಡಿರುವ ಕೀಟಜನ್ಯ ಸಾಂಕ್ರಾಮಿಕ ರೋಗಗಳು ಇದೀಗ ಹವಾಮಾನ ವೈಪರೀತ್ಯದ ಈ ವಾತಾವರಣದಲ್ಲಿ ಹೊಡೆತ ನೀಡಲು ಶುರು ಮಾಡಿವೆ.

ಸೊಳ್ಳೆಗಳಿಂದ ಮಲೇರಿಯಾ, ಡೆಂಘೀ ಜ್ವರ, ಫೈಲೇರಿಯಾ, ಮೆದುಳು ಜ್ವರ, ಚಿಕೂನ್‌ಗುನ್ಯಾ ರೋಗಗಳು ಹರಡುತ್ತವೆ. ಈ ರೋಗಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮ ಅನುಸರಿಸಬೇಕು. ನೀರನ್ನು ಇಟ್ಟಿರುವ ಪಾತ್ರೆ, ಟ್ಯಾಂಕುಗಳನ್ನು ಸರಿಯಾಗಿ ಮುಚ್ಚಿಡುವುದು. ಸಿಮೆಂಟ್‌ ಟ್ಯಾಂಕ್‌, ಹೂವಿನ ದಾನಿಗಳಲ್ಲಿರುವ ನೀರನ್ನು ವಾರಕ್ಕೊಂದು ಸಾರಿ ಖಾಲಿ ಮಾಡಿ ಒಣಗಿಸಿ ನಂತರ ನೀರು ತುಂಬುವುದು. ಯಾವುದೇ ಜ್ವರಕ್ಕಾಗಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.

ಬಾವಿಗಳಲ್ಲಿ, ಕಾರಂಜಿಗಳಲ್ಲಿ ಹಾಗೂ ಸಿಮೆಂಟ್‌ ಟ್ಯಾಂಕ್‌ಗಳಲ್ಲಿ ಲಾರ್ವಾಹಾರಿ ಮೀನುಗಳನ್ನು ಬಿಡುವುದು. ಮಲಗುವಾಗ ಸೊಳ್ಳೆ ಪರದೆ ಕಟ್ಟಿಕೊಳ್ಳುವುದು. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳುವುದರ ಜತೆಗೆ ಈ ಹವಾಮಾನ ವೈಪರೀತ್ಯದ ವಾತಾವರಣದಲ್ಲಿ ಆರೋಗ್ಯ ಕಾಳಜಿಗೆ ಆದ್ಯತೆ ನೀಡಲು ಆರೋಗ್ಯ ಇಲಾಖೆ ಹಾಗೂ ವೈದ್ಯರು ಸಲಹೆ ನೀಡಿದ್ದಾರೆ.

ರೋಗಿಗಳ ಸಂಖ್ಯೆ ಹೆಚ್ಚಳ

ಈಗಾಗಲೇ ಗ್ರಾಮೀಣ ಭಾಗದಲ್ಲಿ ಸೀಜನ್‌ ಜ್ವರ ದಾಳಿಯಿಟ್ಟಿದ್ದು, ಮೈ-ಕೈ ನೋವಿನಿಂದ ಬಾಧೆಯಿಂದ ಬಳಲುತ್ತಿರುವ ಹಳ್ಳಿಗರನ್ನು ಸಾಂಕ್ರಾಮಿಕ ರೋಗಗಳು ಸದ್ದಿಲ್ಲದೇ ಪೀಡಿಸುತ್ತಿವೆ. ಇದಲ್ಲದೇ ಹವಾಮಾನ ವೈಪರೀತ್ಯದಿಂದ ಉಂಟಾಗಿರುವ ಶೀತಮಯ ವಾತಾವರಣದಿಂದ ಡಿಸೆಂಬರ್‌ ತಿಂಗಳ 10 ದಿನಗಳಲ್ಲಿಯೇ ಡೆಂಘೀ, ಚಿಕೂನ್‌ಗುನ್ಯಾ ಬಾಧಿತ ಸಂಖ್ಯೆ ಏರುಮುಖ ಮಾಡಿದ್ದು, ಸೋಂಕಿನ ಲಕ್ಷಣವುಳ್ಳ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಹೀಗಾಗಿ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ದುಪ್ಪಟ್ಟು ಆಗಿದ್ದು, ಮಕ್ಕಳಲ್ಲೂ ಜ್ವರ, ವಾಂತಿ-ಬೇಧಿ ಕಂಡು ಬಂದಿವೆ.

-ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next