Advertisement

2019ರ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌ ನಿವೃತ್ತಿ

12:23 AM Jun 29, 2022 | Team Udayavani |

ಲಂಡನ್‌: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಇಯಾನ್‌ ಮಾರ್ಗನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿರುವುದನ್ನು ದೃಢಪಡಿಸಿದ್ದಾರೆ.

Advertisement

2019ರಲ್ಲಿ ಇಂಗ್ಲೆಂಡ್‌ ವಿಶ್ವಕಪ್‌ ಗೆದ್ದ ವೇಳೆ ತಂಡದ ನಾಯಕರಾಗಿದ್ದ ಮಾರ್ಗನ್‌ ಇಂಗ್ಲೆಂಡಿನ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ. ಅವರು ಸುಮಾರು ಏಳು ವರ್ಷ ಏಕದಿನ ತಂಡದ ನಾಯಕರಾಗಿದ್ದರು.
2015ರ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡದ ನಿರಾಶಾದಾಯಕ ನಿರ್ವಹಣೆಯ ಬಳಿಕ ಮಾರ್ಗನ್‌ ಏಕದಿನ ತಂಡದ ನೇತೃತ್ವ ವಹಿಸಿದ್ದರು.

ತನ್ನ ದೃಢ ವಿಶ್ವಾಸ, ಆಕ್ರಮಣಕಾರಿ ವಿಧಾನ ಮತ್ತು ಶ್ರೇಷ್ಠ ನಿರ್ವಹಣೆಯಿಂದ ತಂಡವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯಲು ಯಶಸ್ವಿಯಾಗಿದ್ದರು. ಒಟ್ಟಾರೆ ತಮ್ಮ ಬಾಳ್ವೆ ವೇಳೆ ಅವರು 248 ಏಕದಿನ ಪಂದ್ಯಗಳನ್ನು ಆಡಿದ್ದು 7,701 ರನ್‌ ಗಳಿಸಿದ್ದಾರೆ. 115 ಟಿ20 ಪಂದ್ಯಗಳನ್ನಾಡಿರುವ ಅವರು 2,458 ರನ್‌ ಬಾರಿಸಿದ್ದಾರೆ.

ಮಾರ್ಗನ್‌ ನಾಯಕತ್ವದಲ್ಲಿ ಇಂಗ್ಲೆಂಡ್‌ ತಂಡವು 2019ರ ಏಕದಿನ ವಿಶ್ವಕಪ್‌ ಜಯಿಸಿತ್ತು. ಮಾತ್ರವಲ್ಲದೇ ತಂಡವು ಏಕದಿನ ಮತ್ತು ಟಿ20ಯಲ್ಲಿ ವಿಶ್ವದ ನಂಬರ್‌ ವನ್‌ ಸ್ಥಾನವನ್ನು ಅಲಂಕರಿಸಿತ್ತು. ಬಹುತೇಕ ಹೆಚ್ಚಿನ ತಂಡಗಳೆದುರು ಸರಣಿ ಗೆಲುವು ಸಾಧಿಸಿದ್ದ ಇಂಗ್ಲೆಂಡ್‌ ಪ್ರತಿಯೊಂದು ಪಂದ್ಯದಲ್ಲೂ ಶೇಕಡಾ 60ರಷ್ಟು ಸಾಧನೆ ಮಾಡಿದೆ.

ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಅವರ ಫಾರ್ಮ್ ಮತ್ತು ಫಿಟ್‌ನೆಸ್‌ ಉತ್ತಮ ಮಟ್ಟದಲ್ಲಿರಲಿಲ್ಲ. 35ರ ಹರೆಯದ ಮಾರ್ಗನ್‌ ಈ ಅವಧಿಯಲ್ಲಿ ಆಡಿದ 48 ಇನ್ನಿಂಗ್ಸ್‌ ಗಳಲ್ಲಿ ಕೇವಲ ಒಂದು ಅರ್ಧಶತಕ ಹೊಡೆದಿದ್ದರು. ಮಾರ್ಗನ್‌ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವು ನೆದರ್ಲೆಂಡ್‌ ವಿರುದ್ಧ ನಡೆದಿತ್ತು. ಕಳೆದ ತಿಂಗಳು ನಡೆದ ಈ ಸರಣಿಯಲ್ಲಿ ಅವರು ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಅವರು ಗಾಯದ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ.

Advertisement

ಆಸ್ಟ್ರೇಲಿಯದಲ್ಲಿ ನಡೆಯಲಿರುವ 2022ರ ಟಿ20 ವಿಶ್ವಕಪ್‌ನಲ್ಲಿ ಆಡುವ ಮತ್ತು ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುವ ಇರಾದೆ ನನಗಿದೆ ಎಂದು ಮಾರ್ಗನ್‌ ಕಳೆದ ವರ್ಷ ಹೇಳಿದ್ದರು. ಆದರೆ ಇತ್ತೀಚೆಗಿನ ಅವರ ಫಾರ್ಮ್ನಿಂದಾಗಿ ಬೇಗನೇ ನಿವೃತ್ತಿಯನ್ನು ಪ್ರಕಟಿಸಿದ್ದಾರೆ.

ವಿಶ್ವದಾಖಲೆಯ ಮೊತ್ತ
ಮಾರ್ಗನ್‌ ಅವರ ನಾಯಕತ್ವದ ವೇಳೆ ಇಂಗ್ಲೆಂಡ್‌ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಎರಡು ಬಾರಿ ವಿಶ್ವದಾಖಲೆಯ ಮೊತ್ತವನ್ನು ಪೇರಿಸಿದ ಸಾಧನೆ ಮಾಡಿದೆ. ಮೊದಲ ಬಾರಿ ಆಸ್ಟ್ರೇಲಿಯ ವಿರುದ್ಧವೇ ಇಂಗ್ಲೆಂಡ್‌ ಈ ಸಾಧನೆ ಮಾಡಿತ್ತು. 2018ರಲ್ಲಿ ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡ್‌ 6 ವಿಕೆಟಿಗೆ 481 ರನ್ನುಗಳ ಬೃಹತ್‌ ಮೊತ್ತ ಪೇರಿಸಿತ್ತು. ಎರಡನೇ ಬಾರಿ ನದೆರ್ಲೆಂಡ್‌ ವಿರುದ್ಧ ಇತ್ತೀಚೆಗೆ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ 4 ವಿಕೆಟಿಗೆ 498 ರನ್‌ ಪೇರಿಸಿ ಸುದ್ದಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next