ಲಂಡನ್: ಇಂಗ್ಲೆಂಡ್ ನ ಎಡಗೈ ಆಟಗಾರ ಇಯಾನ್ ಮಾರ್ಗನ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಾಗಿರುವ ಮಾರ್ಗನ್ ಟಿ20 ಲೀಗ್ ಗಳಲ್ಲಿ ಆಡುತ್ತಿದ್ದರು.
ತಕ್ಷಣಕ್ಕೆ ಜಾರಿಗೆ ಬರುವಂತೆ ವಿದಾಯ ಘೋಷಿಸಿದ್ದು, ಇನ್ನು ಮುಂದೆ ವೀಕ್ಷಕ ವಿವರಣೆಗಾರನಾಗಿ ಇರುತ್ತೇನೆ ಎಂದಿದ್ದಾರೆ.
ಕ್ರಿಕೆಟ್ ವಿಶ್ವಕಪ್ ನಲ್ಲಿ ಎರಡು ವಿಭಿನ್ನ ರಾಷ್ಟ್ರಗಳನ್ನು ಪ್ರತಿನಿಧಿಸಿದ ಕೆಲವೇ ಕ್ರಿಕೆಟಿಗರಲ್ಲಿ ಮಾರ್ಗನ್ ಒಬ್ಬರು. ಎಡಗೈ ಬ್ಯಾಟರ್ ಇಂಗ್ಲೆಂಡ್ ಗಾಗಿ ಆಡುವಮೊದಲು 2007 ರ ವಿಶ್ವಕಪ್ ನಲ್ಲಿ ಐರ್ಲೆಂಡ್ ಗಾಗಿ ಆಡಿದ್ದರು. 2019 ರಲ್ಲಿ, ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಮಾರ್ಗನ್ ಮೊದಲ ಬಾರಿಗೆ ವಿಶ್ವಕಪ್ ಚಾಂಪಿಯನ್‌ಶಿಪ್ ಗೆಲುವಿಗೆ ಕಾರಣರಾದರು.
“ಅತ್ಯಂತ ಹೆಮ್ಮೆಯಿಂದ ನಾನು ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ, ನಾನು ನನ್ನ ಪ್ರೀತಿಪಾತ್ರರ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದೇನೆ. ಭವಿಷ್ಯದಲ್ಲಿ ಇದನ್ನು ಹೆಚ್ಚು ಹೆಚ್ಚು ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.
ಇದನ್ನೂ ಓದಿ:ಹಿಂದೂ ರಾಷ್ಟ್ರ ಸ್ಥಾಪನೆಗೆ ಶ್ರೀಧರ ಸ್ವಾಮೀಜಿ ಪ್ರೇರಕ; ಧರ್ಮಜಾಗೃತಿ-ದೇವಾಲಯ ನಿರ್ಮಾಣ
ಇತ್ತೀಚಿಗೆ ಮುಕ್ತಾಯಗೊಂಡ ಎಸ್.ಎ20 ಪಂದ್ಯಾವಳಿಯಲ್ಲಿ ಪಾರ್ಲ್ ರಾಯಲ್ಸ್ ಗಾಗಿ ಮಾರ್ಗನ್ ತಮ್ಮ ಟಿ20 ವೃತ್ತಿಜೀವನದ ಕೊನೆಯ ಪಂದ್ಯವನ್ನು ಆಡಿದರು. ಪಂದ್ಯಾವಳಿಯ ಸೆಮಿಫೈನಲ್ ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ವಿರುದ್ಧ ಫೆಬ್ರವರಿ 8 ರಂದು ಅವರ ಕೊನೆಯ ಪಂದ್ಯವಾಡಿದ ಎಡಗೈ ಬ್ಯಾಟರ್ 13 ಎಸೆತಗಳಲ್ಲಿ 17 ರನ್ ಗಳಿಸಿದರು.