Advertisement

ಪರಿಸರ  ಮಂಗಳೂರು ಯುವಕರಿಂದ ‘ಹಸಿರು ಕ್ರಾಂತಿ’ಸಂಕಲ್ಪ

04:42 PM Sep 24, 2017 | |

ಮಹಾನಗರ : ಮರಗಿಡಗಳ ಮಾರಣಹೋಮದಿಂದಾಗಿ ಪ್ರಾಕೃತಿಕ ವೈಪರೀತ್ಯ ಪದೇಪದೇ ಘಟಿಸುತ್ತಿರುವುದಕ್ಕೆ ಪರಿಹಾರ ರೂಪದಲ್ಲಿ ಹಸಿರಿನ ಅಭಿವೃದ್ಧಿಗೆ ಮಂಗಳೂರಿನ ಯುವಕರ ತಂಡವೊಂದು ಮುಂದಾಗಿದೆ. ಸುರತ್ಕಲ್‌ನಿಂದ ಬಿ.ಸಿ.ರೋಡ್‌ ತನಕ ಮೂರು ವರ್ಷಗಳಲ್ಲಿ ಸುಮಾರು 10,000 ಗಿಡಗಳನ್ನು ನೆಡುವ ಮೂಲಕ ಸುಂದರ ಮತ್ತು ಸ್ವಚ್ಛ  ಪರಿಸರದೊಂದಿಗೆ ‘ಹಸಿರು ಕ್ರಾಂತಿ’ಯ ಸಂಕಲ್ಪ ತೊಟ್ಟಿದ್ದಾರೆ.

Advertisement

ಮೂರು ತಿಂಗಳ ಹಿಂದಷ್ಟೇ ಆರಂಭವಾದ ಗ್ರೀನ್‌ ಓಝೋನ್‌ ಚಾರಿಟೆಬಲ್‌ ಟ್ರಸ್ಟ್‌ ಎಂಬ ಯುವಕರ ಸಂಘಟನೆ ಇಂತಹ ಸತ್ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಹೆಚ್ಚುತ್ತಿರುವ ಸೂರ್ಯನ ಶಾಖ, ಕಡಿಮೆಯಾಗುತ್ತಿರುವ ಮಳೆ, ಹವಾ ಮಾನದಲ್ಲಿನ ಏರುಪೇರು ಮುಂತಾದ ಕಾರಣಗಳಿಂದಾಗಿ ಮನುಷ್ಯ ಸಹಿತ ಸಮಸ್ತ ಜೀವಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತಿದೆ. ಮರಗಳ ಮಾರಣಹೋಮ, ಮರ ಕಡಿದರೂ ಬದಲಿಯಾಗಿ ಬೇರೆ ಸಸಿ ನೆಟ್ಟು ಪೋಷಣೆ ಮಾಡದಿರುವುದು ಪ್ರಾಕೃತಿಕ ವೈಪರೀತ್ಯಗಳಿಗೆ ಕಾರಣವಾಗುತ್ತಿವೆ. ಹಸಿರು ಮರೆಯಾಗುತ್ತಿರುವ ಈ ಸಂದರ್ಭ ಭೂಮಿ ಮತ್ತೆ ಹಸಿರಿನಿಂದ ಕಂಗೊಳಿಸುವಂತೆ ಮಾಡುವಲ್ಲಿ ಅಳಿಲು ಸೇವೆ ನೀಡುವುದು ಟ್ರಸ್ಟ್‌ನ ಉದ್ದೇಶ.

ಕರಾವಳಿಗೆ ಹೊಂದಿಕೆಯಾಗುವ ಗಿಡ
ಸುರತ್ಕಲ್‌ನಿಂದ ಬಿ.ಸಿ. ರೋಡ್‌ ತನಕ ಮಾರ್ಗದ ಬದಿಯಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತೊಂದರೆ ಯಾಗದ ರೀತಿಯಲ್ಲಿ ಬೃಹತ್‌ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಪಡೆದಿದ್ದು, ಅರಣ್ಯ ಇಲಾಖೆಯವರೂ ವಿವಿಧ ರೀತಿಯ ಗಿಡಗಳನ್ನು ನೀಡಿ ಸೂಕ್ತ ಸ್ಪಂದನೆ ನೀಡಿದ್ದಾರೆ. ಕದಂಬ, ಕಕ್ಕೆ, ಹೊಳೆ ದಾಸವಾಳ ಮುಂತಾದ ಕರಾವಳಿ ಪ್ರದೇಶಕ್ಕೆ ಹೊಂದಿಕೆಯಾಗುವ ಮತ್ತು ಶುದ್ಧ ಆಮ್ಲಜನಕ ಉತ್ಪತ್ತಿಮಾಡುವ ಗಿಡಗಳನ್ನು ನೀಡಿದ್ದಾರೆ ಎಂದು ಟ್ರಸ್ಟ್‌ ಅಧ್ಯಕ್ಷ ರಂಜಿತ್‌ ಮರೋಳಿ ‘ಉದಯವಾಣಿ-ಸುದಿನ’ಕ್ಕೆ ತಿಳಿಸಿದ್ದಾರೆ. 

ದಾನಿಗಳಿಂದ ನೀರು ಸೌಲಭ್ಯ
ಬೇಸಿಗೆ ಕಾಲದಲ್ಲಿ ಪ್ರತಿ ಗಿಡಕ್ಕೆ ಪ್ರತಿದಿನ ಕನಿಷ್ಠ ಒಂದು ಲೀಟರ್‌ ನೀರು ಬೇಕಾಗಬಹುದು. ಇದಕ್ಕಾಗಿ ದಾನಿಗಳೂ ಮುಂದೆ ಬಂದಿದ್ದು, ಗಿಡಗಳಿಗೆ ನೀರುಣಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ಇತರೆಡೆಗಳಲ್ಲಿ ಟ್ರಸ್ಟ್‌ ಸದಸ್ಯರೇ ಗಿಡಗಳಿಗೆ ಪ್ರತಿ ದಿನ ನೀರುಣಿಸಲಿದ್ದಾರೆ.

Advertisement

50 ಯುವಕರ ಉತ್ಸಾಹ
‘ಮೂರು ವರ್ಷಗಳಲ್ಲಿ ಒಟ್ಟು 3,000 ಗಿಡಗಳನ್ನು ನೆಡುವುದಾಗಿ ಯೋಜಿಸಲಾಗಿತ್ತು. ಆದರೆ ಯುವಕರ ತಂಡ ಹೆಚ್ಚು ಉತ್ಸುಕವಾಗಿರುವ ಹಿನ್ನೆಲೆಯಲ್ಲಿ ಗುರಿಯನ್ನು 10,000ಕ್ಕೇರಿಸಲಾಗಿದೆ. ಟ್ರಸ್ಟ್‌ 3 ತಿಂಗಳ ಹಿಂದಷ್ಟೇ ರಚನೆಯಾಗಿದ್ದು, ಸುಮಾರು 50 ಯುವಕರು ಸದಸ್ಯರಾಗಿದ್ದಾರೆ. ಸದ್ಯಕ್ಕೆ ಟ್ರಸ್ಟ್‌ ಸದಸ್ಯರೇ ಗಿಡಗಳನ್ನು ನೆಡಲಿದ್ದೇವೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿಯೂ ಹಸಿರು ಮತ್ತು ಸ್ವಚ್ಛ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ, ಈ ಕಾರ್ಯಕ್ಕೆ ಅವರನ್ನೂ ಬಳಸಿಕೊಳ್ಳುವ ಬಗ್ಗೆ ಚಿಂತಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವುದರೊಂದಿಗೆ ಸ್ವಚ್ಛತಾ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗುವುದು’ ಎನ್ನುತ್ತಾರೆ ರಂಜಿತ್‌ ಮರೋಳಿ.

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next