Advertisement

ಆರ್‌ಟಿಪಿಎಸ್‌-ವೈಟಿಪಿಎಸ್‌ನಿಂದ ಪರಿಸರ ಹಾನಿ

01:06 PM Jul 23, 2018 | |

ರಾಯಚೂರು: ಜಿಲ್ಲೆಯಲ್ಲಿ ಆರ್‌ಟಿಪಿಎಸ್‌, ವೈಟಿಪಿಎಸ್‌ನಂಥ ಬೃಹತ್‌ ಕೇಂದ್ರಗಳ ಸ್ಥಾಪನೆಯಿಂದ ಪರಿಸರ ಹಾಳಾಗುತ್ತಿದ್ದು, ಸೂಕ್ತ ಹಸಿರೀಕರಣಕ್ಕೆ ಒತ್ತು ನೀಡಿದ್ದರೆ ಇಂದು ಜಿಲ್ಲೆಯಲ್ಲಿ ಹಸಿರಿನ ಪ್ರಮಾಣ ಇನ್ನೂ ಹೆಚ್ಚುತ್ತಿತ್ತು ಎಂದು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್‌ ವಿಷಾದಿಸಿದರು.

Advertisement

ಗ್ರೀನ್‌ ರಾಯಚೂರು ಸಂಸ್ಥೆ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗದ ಸಹಯೋಗದಲ್ಲಿ ರವಿವಾರ ನಗರದ ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರಕೃತಿಗಾಗಿ ಒಂದು ದಿನ ಬೀಜದುಂಡೆ ಮಹಾಅಭಿಯಾನ ಹಾಗೂ ಸಾರ್ಥಕ ನೂರುವಾರ ತಲುಪಿದ ನಿರಂತರ ಶ್ರಮದಾನ ಸಂಭ್ರಮ ಹಾಗೂ ಪರಿಸರ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಈ ಎರಡು ಕೇಂದ್ರಗಳಿಂದ ಜಿಲ್ಲೆಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚುತ್ತಿದೆ ಎಂಬ ಅಭಿಪ್ರಾಯಗಳಿವೆ. ಇದರಿಂದ ಜನಜೀವನದ ಮೇಲೂ ಪರಿಣಾಮ ಬೀರಿದೆ. 1985ರಲ್ಲಿ ಆರ್‌ಟಿಪಿಎಸ್‌ ಸ್ಥಾಪಿಸಿದ್ದು, ಆಗ ಸರಿಯಾಗಿ ಮರಗಿಡಗಳನ್ನು ಬೆಳೆಸಬೇಕಿತ್ತು. ಆದರೆ, ಅಂಥ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ಹಾಗೂ ಆರ್‌ಟಿಪಿಎಸ್‌ ಆಡಳಿತ ಮಂಡಳಿ ನಿರ್ಲಕ್ಷé ತೋರಿವೆ. ಅದರ ನೇರ ಪರಿಣಾಮ ಇಂದು ನಮ್ಮ ಮೇಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯನ್ನು ಹಸಿರಾಗಿಸಲು ಒತ್ತು ನೀಡಲಾಗುವುದು. ಹಸಿರೀಕರಣಕ್ಕೆ ಮುಂದಾದ ಗ್ರೀನ್‌ ರಾಯಚೂರು ಸಂಸ್ಥೆಗೆ ಅಗತ್ಯ ನೆರವು ನೀಡುವ ಮೂಲಕ ಗಿಡ ಮರಗಳನ್ನು ಬೆಳೆಸಲು ಎಲ್ಲರೂ ಶ್ರಮಿಸಬೇಕು ಎಂದರು.
 
ಸಮಾರಂಭ ಉದ್ಘಾಟಿಸಿದ ನಗರ ಶಾಸಕ ಡಾ| ಶಿವರಾಜ ಪಾಟೀಲ ಮಾತನಾಡಿ, ಅರಣ್ಯ ಇಲಾಖೆ ಮಾಡಬೇಕಾದ ಕೆಲಸವನ್ನು ಗ್ರೀನ್‌ ರಾಯಚೂರು ಸಂಸ್ಥೆ ಮಾಡುತ್ತಿದೆ. ನಗರದ ವಿವಿಧೆಡೆ 40 ಸಾವಿರ ಸಸಿಗಳನ್ನು ನೆಟ್ಟು ಪೋಷಣೆ ಮಾಡುವುದು ಸಣ್ಣ ಕೆಲಸವಲ್ಲ. ಕಾಡು ಬೆಳೆಸಲೆಂದೇ ಸರ್ಕಾರ ಅರಣ್ಯ ಇಲಾಖೆಗೆ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ, ಇಲಾಖೆ ಮಾತ್ರ ಗಿಡಗಳನ್ನು ಹಾಕಿ ರಕ್ಷಿಸುತ್ತಿದೆ ಎಂದು ದಾಖಲೆಗಳಲ್ಲಿ ತೋರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿಲ್ಪಾ ಮೆಡಿಕೇರ್‌ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಕಾಂತ ಸಿ. ಬುತಡ ಮಾತನಾಡಿ, ಇಂದು ಮರ ನೆಡುವುದು ಭವಿಷ್ಯಕ್ಕೆ ಉಪಯೋಗವಾಗಲಿದೆ. ಮಕ್ಕಳಿಗೆ ಆಸ್ತಿ ಮಾಡುವ ಉದ್ದೇಶವಿದ್ದರೆ ಪರಿಸರ ಬೆಳೆಸಿ ಎಂದರು.

Advertisement

ಇದೇ ವೇಳೆ ಪರಿಸರಕ್ಕಾಗಿ ಶ್ರಮಿಸುವ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೊಂಡಾ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಪಿ ಡಿ.ಕಿಶೋರಬಾಬು, ಪ್ರಜಾಪಿತ ಈಶ್ವರಿ ವಿವಿ ಸಂಚಾಲಕಿ ಸ್ಮಿತಾ, ರೋಟರಿ ಕ್ಲಬ್‌ ಅಧ್ಯಕ್ಷ ಎನ್‌.ಶಿವಶಂಕರ ವಕೀಲ, ಇಫಾ ಫೌಂಡೇಷನ್‌ ಅಧ್ಯಕ್ಷ ಮಹ್ಮದ್‌ ಶಬ್ಬೀರ್‌, ನಿವೃತ್ತ ಶಿಕ್ಷಣ ನಿರ್ದೇಶಕ ಡಾ| ಸಿ.ವಿ.ಪಾಟೀಲ, ಸಂಸ್ಥೆ ಅಧ್ಯಕ್ಷೆ ಸರಸ್ವತಿ ಕಿಲಕಿಲೆ, ಉದ್ಯಮಿ ಇಲ್ಲೂರು ಗೋಪಾಲಯ್ಯ ಸೇರಿ ಇತರರು ಇದ್ದರು.

ಬೀಜದುಂಡೆ ಮಾಡಿ ಸಂಭ್ರಮಿಸಿದ ಮಕ್ಕಳು ಬೀಜದುಂಡೆ ಮಹಾಅಭಿಯಾನದ ನಿಮಿತ್ತ ಸಂಸ್ಥೆ ಪ್ರತಿನಿಧಿಗಳು, ವಿವಿಧ ಸಂಘಟನೆಗಳ ಸದಸ್ಯರು, ವಿದ್ಯಾರ್ಥಿಗಳು ಸೇರಿ ಸಹಸ್ರಾರು ಬೀಜದುಂಡೆ ತಯಾರಿಸಿದರು. ರಂಗಮಂದಿರ ಮುಂಭಾಗ ಹಾಗೂ ಪತ್ರಿಕಾ ಭವನದ ಆವರಣದಲ್ಲಿ ಬೆಳಗ್ಗೆ ಎಂಟು ಗಂಟೆಯಿಂದಲೇ ಉಂಡೆ ತಯಾರಿಕೆಯಲ್ಲಿ ತೊಡಗಿದರು. ಕೆಂಪುಮಣ್ಣು, ಜೇಡಿ ಮಣ್ಣು, ಕಪ್ಪು ಮಣ್ಣು, ಗೋಮೂತ್ರ, ಸಗಣಿ ಗೊಬ್ಬರ ಹದ ಮಾಡಿ, ಹೊಂಗೆ, ಬೇವು, ಮಾವು, ಹೆಬ್ಬೇವು ಸೇರಿ ವಿವಿಧ ಬಗೆಯ ಬೀಜಗಳನ್ನು ಸೇರಿಸಿ ಉಂಡೆ ತಯಾರಿಸಲಾಯಿತು. ಜತೆಗೆ ವಿವಿಧ ಬಗೆಯ ಗಿಡಗಳನ್ನು ವಿತರಿಸಲಾಯಿತು. ಸಾರ್ವಜನಿಕರು ಇರುವಲ್ಲಿಗೆ ಬಂದು ಗಿಡಗಳನ್ನು ತೆಗೆದುಕೊಂಡು ಹೋದರೆ, ವಿವಿಧ ಶಾಲೆ ವಿದ್ಯಾರ್ಥಿಗಳು ಕೂಡ ಬೀಜದುಂಡೆ ಹಾಗೂ ಗಿಡಗಳನ್ನು ಮನೆಗೆ ತೆಗೆದುಕೊಂಡು ಹೋದರು.

ನಗರದ ಹಸಿರೀಕರಣಕ್ಕೆ ಗ್ರೀನ್‌ ರಾಯಚೂರು ಕಳೆದ ಒಂದೂವರೆ ವರ್ಷಗಳಿಂದಲೂ ಕೈಗೊಂಡಿರುವ ಕಾರ್ಯವನ್ನು ಪ್ರತಿಯೊಬ್ಬರು ಗಮನಿಸಿದ್ದಾರೆ. ನಗರದ ಪ್ರತಿ ನಾಗರಿಕರು ಇಂಥ ಮಹತ್ಕಾರ್ಯಕ್ಕೆ ಸಹಕರಿಸಬೇಕು. ಇಂಥ ಕಾರ್ಯಕ್ಕೆ ಜಿಲ್ಲಾಡಳಿತ ಸಹಕಾರ ಇರುತ್ತದೆ. ಮುಂದಿನ ದಿನಗಳಲ್ಲಿ ಸಂಸ್ಥೆ ಹೆಚ್ಚಿನ ಕಾರ್ಯ ಕೈಗೊಳ್ಳಲು ಮುಂದಾಗಬೇಕು.
 ಡಾ| ಬಗಾದಿ ಗೌತಮ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next