ಸುರತ್ಕಲ್: ಮಹಾನಗರ ಪಾಲಿಕೆಯ ಕೋಡಿಕಲ್ 17ನೇ ವಾರ್ಡ್‌ನಲ್ಲಿ ರಸ್ತೆ ವಿಸ್ತರಣೆ, ಕಾಂಕ್ರೀಟ್ ಕಾಮಗಾರಿ, ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಇಲ್ಲಿ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ನಾಗರಿಕರ ಮೇಲಿದೆ ಎಂದು ಪಾಲಿಕೆ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ ಹೇಳಿದರು. ವಾರ್ಡ್‌ನ ಸ್ಥಳೀಯ ನಿವಾಸಿಗಳಿಗೆ ಸೊಳ್ಳೆ ಪರದೆ ವಿತರಿಸಿ ಅವರು ಮಾತನಾಡಿದರು.
ಪರಿಸರ ಸ್ವಚ್ಛತೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕಿದೆ. ನಮ್ಮ ಮನೆ ಹಾಗೂ ಸುತ್ತಲಿನ ಪರಿಸರವನ್ನು ವಾಸಯೋಗ್ಯವಾಗಿ ಮಾಡಿದಾಗ ಸೊಳ್ಳೆಯಂತಹ ರೋಗ ತರುವ ಕ್ರಿಮಿ, ಜಂತುಗಳ ತಾಣವೂ ನಾಶವಾಗುತ್ತದೆ. ಇದರಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಿದೆ ಎಂದರು.
‘ಕೋಡಿಕಲ್ 17ನೇ ವಾರ್ಡ್‌ನಲ್ಲಿ ಸಾರ್ವಜನಿಕರ ಬಹುತೇಕ ಬೇಡಿಕೆ ಈಡೇರಿಕೆಗೆ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಈಗ ಮುಖ್ಯ ರಸ್ತೆಯ ಒಂದು ಹಂತದ ಕಾಂಕ್ರೀಟ್ ಕಾಮಗಾರಿ ಮುಗಿದಿದ್ದು, ಉಳಿದ ಕೆಲಸವನ್ನು ಶೀಘ್ರ ಪೂರ್ತಿಗೊಳಿಸಲಾಗುವುದು’ ಎಂದರು.
ಸುರತ್ಕಲ್ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಶಕುಂತಳಾ ಕಾಮತ್ ಮಾತನಾಡಿ, ಹೆಚ್ಚಿನ ಅನುದಾನ ತರುವ ಮೂಲಕ 17ನೇ ವಾರ್ಡ್‌ನಲ್ಲಿ ಉತ್ತಮ ಕೆಲಸವಾಗಿದೆ. ಜನವಸತಿ ಪ್ರದೇಶವೇ ಇಲ್ಲಿ ಹೆಚ್ಚಿದ್ದು, ಏರು ತಗ್ಗು ಪ್ರದೇಶದಲ್ಲಿ ರಸ್ತೆ, ವಿದ್ಯುತ್, ಒಳಚರಂಡಿಯಂತಹ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವುದು ಸವಾಲಿನ ಕೆಲಸ. ಇದನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂದರು.
ಮುಖಂಡರಾದ ವಾರ್ಡ್ ಅಧ್ಯಕ್ಷ ಲ್ಯಾನ್ಸಿ ಮೊಂತೆರೋ, ಮಲ್ಲಿಕಾರ್ಜುನ, ಲೋಕನಾಥ್, ಪ್ರವೀಣ್ ಕಲ್ಬಾವಿ, ಗಂಗಾಧರ್, ಆಶಾ ಶೆಟ್ಟಿ, ದಿನೇಶ್ ಕೋಡಿಕಲ್ ಪಾಲಿಕೆ ಆರೋಗ್ಯಾಧಿಕಾರಿ ನಿತಿನ್ ಮತ್ತಿತರರು ಉಪಸ್ಥಿತರಿದ್ದರು.