ಮಾನವನ ಹುಟ್ಟು ಮತ್ತು ಸಾವು ಸ್ವಾಭಾವಿಕವಾದದ್ದು. ಈ ಅಂತರದಲ್ಲಿ ಪರಿಸರದೊಂದಿಗೆ ಹೊಂದಿಕೊಳ್ಳದೆ ಬದುಕು ನಿರ್ವಹಣೆ ಅಸಾಧ್ಯ. ಭೂಮಿಯ ಮೇಲಿನ ಪ್ರತಿಯೊಂದು ಜೀವ ಸಂಕುಲಕ್ಕೆ ಪರಿಸರವನ್ನು ಸ್ವತಂತ್ರವಾಗಿ ಉಪಯೋಗಿಸಿಕೊಳ್ಳಲು ಅವಕಾಶವಿದೆ. ಪರಿಸರವು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಇದನ್ನು ಕಾಪಾಡಿಕೊಳ್ಳುವಲ್ಲಿ ಎಷ್ಟು ಕಾರ್ಯಪ್ರವೃತ್ತರಾಗಿದ್ದೇವೆ ಎಂಬುದು ಮುಖ್ಯವಲ್ಲ. ನಮ್ಮದೊಂದು ಸಣ್ಣ ಕಾರ್ಯ ಪರಿಸರ ನಾಶವನ್ನು ತಡೆ ಯು ತ್ತದೆ. ಈ ಕಾರ್ಯ ಕೇವಲ “ವಿಶ್ವ ಪರಿಸರ ದಿನ’ಕ್ಕೆ ಮಾತ್ರ ಸೀಮಿತವಾಗಿರದೆ ನಮ್ಮ ಬದುಕಿನುದ್ದಕ್ಕೂ ಮೈಗೂಡಿಸಿಕೊಳ್ಳಬೇಕಿದೆ. ನಮಗೆ ಆಹಾರಕ್ಕಿಂತ ಗಾಳಿ, ನೀರು ತುಂಬಾ ಮುಖ್ಯ. ಭೂಮಿಯ ಮೇಲಿರುವ ಪ್ರತಿಯೊಬ್ಬರೂ ಪ್ರಾಣಿ, ಪಕ್ಷಿ, ಗಿಡ, ಮರ..ಇವು ಯಾವುವೂ ನೀರಿಲ್ಲದೆ ಬದುಕಲು ಸಾಧ್ಯವೇ ಇಲ್ಲ.
ನಿಸರ್ಗದ ಅತ್ಯಮೂಲ್ಯ ಕೊಡುಗೆ ಅರಣ್ಯ. ಮಾನವ, ಪ್ರಾಣಿ ಮತ್ತು ಪಕ್ಷಿಗಳ ಅಳಿವು-ಉಳಿವು ಇದರ ಮೇಲೆ ಅವಲಂಬಿತವಾಗಿದೆ. ಅರಣ್ಯ ನಾಶದಿಂದಾಗಿ ಮಾನವ ಕುಲಕ್ಕೆ ವಿಪತ್ತು ಬರುವುದರಲ್ಲಿ ಯಾವ ಸಂದೇಹವೂ ಇಲ್ಲ. ಮಾನವನ ಹಸ್ತಕ್ಷೇಪದಿಂದಾಗಿ ಇಂದು ಅರಣ್ಯ ನಾಶವಾಗುತ್ತಿದೆ. ವಿಶ್ವಾದ್ಯಂತ ಪ್ರತೀ ವರ್ಷವೂ ಕೂಡ ಪ್ರಾಣಿ ಪಕ್ಷಿಗಳು ಕಣ್ಮರೆಯಾಗುತ್ತಿವೆ. ಕಳೆದ ವರ್ಷ ಅರಣ್ಯ ನಾಶಕ್ಕೆ ತುತ್ತಾದ ಅಮೆಜಾನ್ ಕಾಡು ಇದಕ್ಕೆ ಮತ್ತೂಂದು ಉದಾಹರಣೆಯಾಗಿದೆ. ವಿಶ್ವದ ಅತೀ ಹೆಚ್ಚು ಮಳೆ ಸುರಿಯುವ ಕಾಡು, ವಿಶ್ವದ ಶ್ವಾಸಕೋಶ ಎಂಬೆಲ್ಲ ಖ್ಯಾತಿ ಪಡೆದಿರುವ ಅಮೆಜಾನ್ ಬೆಂಕಿಯ ಕೆನ್ನಾಲಿಗೆಗೆ ಗುರಿಯಾಗಿತ್ತು. ಇದು ಇನ್ನೂ ಮುಂದುವರಿದ ರೆ ಇಡೀ ವಿಶ್ವವೇ ನಾಶವಾಗುವ ಸ್ಥಿತಿ ಬರುತ್ತದೆ.
ಪರಿಸರ ಸಂರಕ್ಷಣೆಗೆ ಮತ್ತೂಂದು ತೊಡಕಾಗಿರುವುದು ಪ್ಲಾಸ್ಟಿಕ್ ಬಳಕೆ. ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದರೂ ನಾವು ಇಂದಿಗೂ ಅದನ್ನೇ ಅವಲಂಬಿಸಿದ್ದೇವೆ. ನಮ್ಮನ್ನು ಕಾಪಾಡುವ ಪರಿಸರವು ನಮ್ಮಿಂದಲೇ ಹಾಳಾಗುತ್ತಿದೆ ಎಂದರೆ ಮನುಕುಲ ಬದುಕಿದ್ದೂ ಸತ್ತ ಹಾಗೆ. ಆದ್ದರಿಂದ ನಮ್ಮ ಸುತ್ತಲಿನ ವಾತಾವರಣವನ್ನು ಕಾಪಾಡುವುದು, ಅದನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ.
– ಪೂರ್ಣಿಮಾ ಹಿರೇಮಠ,
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ.