ದೋಟಿಹಾಳ: ಮಾನವ ತನಗೆ ತಿಳಿಯದೇ ಪರಿಸರ ಹಾಳು ಮಾಡುತ್ತಿದ್ದಾನೆ. ಇದರಿಂದ ನಮ್ಮ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗುತ್ತಿದ್ದು, ಮುಂದೊಂದು ದಿನ ಶುದ್ಧ ಗಾಳಿಯನ್ನೂ ಹಣ ನೀಡಿ ಪಡೆಯುವ ಕಾಲ ಬಂದರೂ ಅಚ್ಚರ ಇಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಸಂಘದ ಮೇಲ್ವಿಚಾರಕ ಮಂಜುನಾಥ ಅವರು ಹೇಳಿದರು.
ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಷ್ಟಗಿ ಅವರು ಹಮ್ಮಿಕೊಂಡಿದ್ದ ಪರಿಸರ ಮಾಹಿತಿ ಹಾಗೂ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಸಸಿಗಳನ್ನು ನೆಡುವ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ಜಗತ್ತಿನಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡಲು ಪ್ರತಿಯೊಬ್ಬರು ಮನೆಗಳ ಮುಂದೆ ಒಂದು ಮರ ಬೆಳಸಬೇಕು. ಹಾಗದರೆ ಮಾತ್ರ ಕಾಲಕಾಲಕ್ಕೆ ಮಳೆ ಬರುವುದರ ಜೊತೆಗೆ ಶುದ್ಧ ಗಾಳಿ ಸಿಗುತ್ತದೆ. ಇಲ್ಲದಿದ್ದರೆ ಈಗ ಶುದ್ಧಿ ನೀರಿಗೆ ಹಣ ನೀಡುತ್ತಿದೇವೆ. ಇದೇ ರೀತಿ ಮುಂದೊಂದು ದಿನ ಶುದ್ಧ ಗಾಳಿಯನ್ನೂ ಹಣಕೊಟ್ಟು ಕೊಂಡುಕೊಳ್ಳುವ ಕಾಲ ಬಂದೇ ಬರುತ್ತದೆ ಎಂದರು.
ಶಿಕ್ಷಕಿ ಹನುಮವ್ವ ಕೊಡಕಲ್ಲ ಅವರು ಮಾತನಾಡಿ, ಸರಕಾರಿ ಶಾಲೆ ಹಾಗೂ ಕಚೇರಿಗಳ ಆವರಣದಲ್ಲಿ ಸಸಿ ನೆಡುವುದರಿಂದ ಪರಿಸರ ಪರಿಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಸಾರ್ವಜನಿಕರು ನಿಮ್ಮ ಸುತ್ತಲಿನ ಖಾಲಿ ಜಾಗಗಳಲ್ಲಿ ಗಿಡಗಳನ್ನು ಬೆಳೆಸಬೇಕು. ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಶಾಲಾ ಮುಖ್ಯಶಿಕ್ಷಕ ಸಿದ್ರಾಮಪ್ಪ ಅಮರಾವತಿ ಅವರು ಮಾತನಾಡಿ, ಪರಿಸರ ನಾಶದಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಮಾನವ ಸೇರಿದಂತೆ ಎಲ್ಲ ಜೀವಿಗಳು ವಿನಾಶದ ಅಂಚಿಗೆ ತಲುಪುವ ಸ್ಥಿತಿ ಎದುರಾಗಿದೆ. ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಈ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕಾಗಿದೆ. ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಗಿಡ-ಮರ ಬೆಳೆಸುವುದರಿಂದ ಸಕಾಲಕ್ಕೆ ಮಳೆ, ಶುದ್ಧ ಗಾಳಿ ಸಿಗುವ ಜತೆಗೆ ಭೂಮಿಯ ಉಷ್ಣತೆ ಸಮತೋಲನವಾಗುತ್ತದೆ. ಆದ್ದರಿಂದ ಪರಿಸರ ರಕ್ಷಣೆ ಎಲ್ಲರ ಕರ್ತವ್ಯವಾಗಲಿ ಎಂದರು.
ಶಿಕ್ಷಕ ಅಲ್ಲಾಸಾಬ್ ಗೋತಗಿ ಅವರು ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷೆ ವಿರುಪಮ್ಮ ಶೇಖಪ್ಪ ದೊಡ್ಡಮನಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಸೇವಾ ಪ್ರತಿನಿಧಿ ಗ್ಯಾನಪ್ಪ ಮನ್ನಾಪುರ, ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರು, ಗ್ರಾಮದ ಮಹಿಳೆಯರು, ಶಾಲಾ ಶಿಕ್ಷಕರು ಮತ್ತು ಶಾಲಾ ಮಕ್ಕಳು ಭಾಗವಹಿಸಿದರು.