ಪಣಜಿ: ಗೋವಾದ ಪರಿಸರವನ್ನು ಉಳಿಸಬೇಕಾದ ಅಗತ್ಯವಿದೆ. ಆದರೆ ಯಾವುದೇ ಕಾರಣಕ್ಕೂ ಕರಾವಳಿ ರಾಜ್ಯವಾದ ಗೋವಾವನ್ನು ಕಲ್ಲಿದ್ದಲು ಕೇಂದ್ರವನ್ನಾಗಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ(ಅಕ್ಟೋಬರ್ 30) ತಿಳಿಸಿದ್ದಾರೆ.
ಇದನ್ನೂ ಓದಿ:ಮಂಡಿಯೂರಿದ ಡಿಕಾಕ್: ಕೊನೆಗೂ ತಂಡದಲ್ಲಿ ಸ್ಥಾನ ಪಡೆದ ಕ್ವಿಂಟನ್
ಮುಂದಿನ ವರ್ಷ ಗೋವಾ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ವೆಲ್ಸಾವೊ ಪ್ರದೇಶದಲ್ಲಿ ರಾಹುಲ್ ಗಾಂಧಿ ಮೀನುಗಾರರ ಜತೆ ಸಂವಹನ ನಡೆಸಿದ ಸಂದರ್ಭದಲ್ಲಿ ಮಾತನಾಡುತ್ತ, ನಾವು ಗೋವಾವನ್ನು ಕಲುಷಿತ ಸ್ಥಳವನ್ನಾಗಿ ಮಾಡಲು ಅವಕಾಶ ನೀಡುವುದಿಲ್ಲ. ಅಷ್ಟೇ ಅಲ್ಲ ಗೋವಾವನ್ನು ಕಲ್ಲಿದ್ದಲು ಗಣಿಗಾರಿಕೆಯ ಕೇಂದ್ರವನ್ನಾಗಿ ಮಾಡಲು ಬಿಡುವುದಿಲ್ಲ. ಪರಿಸರವನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಕಾಂಗ್ರೆಸ್ ಪ್ರಣಾಳಿಕೆ ಖಚಿತತೆಯಿಂದ ಕೂಡಿದೆ ವಿನಃ ಯಾವುದೇ ಪೊಳ್ಳು ಭರವಸೆಯನ್ನು ನೀಡುವುದಿಲ್ಲ. ನಮ್ಮ ಪ್ರಣಾಳಿಕೆ ಪಾರದರ್ಶಕವಾಗಿದೆ. ಚತ್ತೀಸ್ ಗಢದ ಚುನಾವಣೆ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ಕೊಟ್ಟಿದ್ದೇವು, ಅದರಂತೆ ನಾವು ನಡೆದುಕೊಂಡಿದ್ದೇವೆ. ನೀವು ಪಂಜಾಬ್ ಮತ್ತು ಕರ್ನಾಟಕದಲ್ಲಿಯೂ ಪರಿಶೀಲಿಸಬಹುದಾಗಿದೆ. ನಮ್ಮ ಪ್ರಣಾಳಿಕೆಯಲ್ಲಿ ಕೇವಲ ಭರವಸೆ ಮಾತ್ರ ಕೊಡುವುದಿಲ್ಲ ಅದನ್ನು ಈಡೇರಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ತೈಲ ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಯುಪಿಎ ಸರ್ಕಾರವಿದ್ದಾಗ ಪ್ರತಿ ಬ್ಯಾರೆಲ್ ಬೆಲೆ 140 ಅಮೆರಿಕನ್ ಡಾಲರ್ ನಷ್ಟಿತ್ತು. ಆದರೆ ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆಯಲ್ಲಿ ಇಳಿಕೆಯಾಗಿದ್ದರೂ ಕೂಡಾ ನೀವು ಅಧಿಕ ಮೊತ್ತ ಕೊಟ್ಟು ಪೆಟ್ರೋಲ್, ಡೀಸೆಲ್ ಖರೀದಿಸಬೇಕಾಗಿದೆ. ಇಡೀ ಜಗತ್ತಿನಲ್ಲಿಯೇ ಭಾರತದಲ್ಲಿ ತೈಲಕ್ಕೆ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ ಎಂದು
ದೂರಿದರು.
40 ವಿಧಾನಸಭಾ ಸದಸ್ಯಬಲದ ಗೋವಾ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಪ್ರಸ್ತುತ ಗೋವಾದಲ್ಲಿ ಬಿಜೆಪಿ 17 ಸ್ಥಾನ ಪಡೆದಿದ್ದು, ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಬೆಂಬಲವನ್ನು ನೀಡುವ ಮೂಲಕ ಸರ್ಕಾರ ರಚಿಸಿದೆ. ಕಾಂಗ್ರೆಸ್ 15 ಶಾಸಕರನ್ನು ಹೊಂದಿರುವುದಾಗಿ ವರದಿ ತಿಳಿಸಿದೆ.