Advertisement

ದೇವರಕಾನ ಸರಕಾರಿ ಶಾಲೆಯಲ್ಲಿ ಹಸಿರ ಕಾನನ..!

02:40 AM Jun 05, 2018 | Team Udayavani |

ವಿಶೇಷ ವರದಿ – ಸುಳ್ಯ: ಕಣ್ಮನ ಸೆಳೆಯುವ ಉದ್ಯಾನವನ. ಸುತ್ತಲೂ ಹಸಿರಿನ ಹೊದಿಕೆ. ಬಿಸಿಯೂಟಕ್ಕೆ ಬೇಕಾದ ಬಗೆ-ಬಗೆಯ ತರಕಾರಿ ತೋಟ, ಆರೋಗ್ಯಕ್ಕೆ ಔಷಧ ಗಿಡಗಳ ಸಾಲು. ಇದು ದೇವರಕಾನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಸಿರು ಪರಿಸರದ ಸೊಗಡು ಸೊಂಪಾಗಿ ಹರಡಿದ ಬಗೆಯಿದು. ಐವರ್ನಾಡು ಗ್ರಾಮದಲ್ಲಿರುವ ಈ ವಿದ್ಯಾಸಂಸ್ಥೆಯಲ್ಲಿ 1ರಿಂದ 7ನೇ ತರಗತಿ ತನಕ ಕಲಿಕಾ ತರಗತಿಗಳಿವೆ. ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಒಟ್ಟು 50 ಮಿಕ್ಕಿದೆ. ಮೂವರು ಪೂರ್ಣಕಾಲಿಕ, ಓರ್ವ ಗೌರವ ಶಿಕ್ಷಕಿಯಿದ್ದಾರೆ. 1959ರಲ್ಲಿ ಸ್ಥಾಪನೆಗೊಂಡ ಈ ಶಾಲೆ 59ನೇ ವರ್ಷದ ಹೊಸ್ತಿಲಿನಲ್ಲಿದೆ. ಎಡಮಲೆ, ಆಲಿಕಲ್ಲು, ಬಿರ್ಮುಕಜೆ, ಮಿತ್ತಮೂಲೆ, ಸಾರಕರೆ ಮೊದಲಾದ ಭಾಗಗಳಿಂದ ಇಲ್ಲಿಗೆ ಮಕ್ಕಳು ಆಗಮಿಸುತ್ತಾರೆ.

Advertisement

ವಠಾರದೊಳಗೆ ಏನಿದೆ?
ಊರವರ ಸಹಕಾರದಿಂದ 75ರಿಂದ 1 ಲಕ್ಷ ರೂ. ವೆಚ್ಚದಲ್ಲಿ ಸುಂದರವಾದ ಉದ್ಯಾನವನ ನಿರ್ಮಿಸಲಾಗಿದೆ. ವಿದ್ಯಾ ದೇವತೆಯ ಮೂರ್ತಿ, ವೃತ್ತಾಕಾರದ ನೀರಿನ ಕೊಳ, ಸುತ್ತಲೂ ಬಗೆ-ಬಗೆಯ ಕಲ್ಲಿನ ಜೋಡಣೆ, ಕೊಳದಲ್ಲಿ ಬಿಳಿ-ಕೆಂಪು ಬಣ್ಣದ ತಾವರೆಗಳು, ಹೂವಿನ ಗಿಡಗಳು ಗಮನ ಸೆಳೆಯುತ್ತಿವೆೆ. ಇದು ಶಾಲಾ ಮುಂಭಾಗದ ಸೌಂದರ್ಯಕ್ಕೂ ಮುಕುಟದಂತಿದೆ.


ಅಕ್ಷರ ಕೈ ತೋಟ ಪ್ರಶಸ್ತಿ

ಸಮೃದ್ಧಭರಿತ ತರಕಾರಿ ತೋಟ ಇಲ್ಲಿನ ವಿಶೇಷ. ಈ ಬಾರಿ ಶಾಲಾ ಆರಂಭದ ಲ್ಲಿಯೇ ತರಕಾರಿ ಸಿಗುತ್ತಿದೆ. ಹಾಗಾಗಿ ವರ್ಷವಿಡಿ ಇಲ್ಲಿ ಬಿಸಿಯೂಟಕ್ಕೆ ಸಾವಯವ ತರಕಾರಿ ರುಚಿ ತಪ್ಪುವುದಿಲ್ಲ. ಪ್ರತಿ ವರ್ಷ ಊರವರ, ಶಿಕ್ಷಕರ, ಮಕ್ಕಳ, SDMC ಸಮಿತಿಯ ಸಹಭಾಗಿತ್ವದಲ್ಲಿ ತರಕಾರಿ ತೋಟ ನಿರ್ಮಿಸಲಾಗುತ್ತದೆ. ಕಳೆದೆರಡು ವರ್ಷ ತಾಲೂಕು ಮಟ್ಟದ ಅಕ್ಷರ ಕೈ ತೋಟ ಪ್ರಶಸ್ತಿ ದೊರೆತಿದೆ.

ಈ ವರ್ಷವೂ ತರಕಾರಿ ತೋಟ ರಚನೆಗೆ ಯೋಜನೆ ರೂಪಿಸಿದ್ದು, ಮೂರನೇ ವರ್ಷವೂ ಮಾದರಿ ತೋಟ ನಿರ್ಮಿಸುವ ಯೋಚನೆ ಇಲ್ಲಿನದು. ಅದಕ್ಕಾಗಿ ಶ್ರಮದಾನ ಪೂರ್ಣಗೊಂಡಿದೆ. ಇನ್ನೊಂದು ಭಾಗದಲ್ಲಿ ಹತ್ತಾರು ಬಗೆಯ ಔಷಧ ಸಸಿಗಳಿವೆ. ಪ್ರಕೃತ್ತಿ ಮಡಿಲಿನಲ್ಲಿ ಬೆಳೆದು ಆರೋಗ್ಯಕ್ಕೆ ಸಹಕಾರಿ ಆಗುವ ತಿಮರೆ, ಕಿರತಾಕಡ್ಡಿ, ಕಹಿಬೇವು, ಅಮೃತಬಳ್ಳಿ ಸಹಿತ ಹತ್ತಾರು ಔಷಧ ಬಳ್ಳಿಗಳು ಇಲ್ಲಿವೆ. ಕಹಿ ಹುಳಿ ಮೊದಲಾದ ಗಿಡಗಳು ಫಸಲು ನೀಡುತ್ತಿದೆ.

ಅನುಕೂಲ
ಊರವರ ಸಹಕಾರದಿಂದ ಇಲ್ಲಿ ತರಕಾರಿ ತೋಟ ನಿರ್ಮಾಣ ಮಾಡಲಾಗುತ್ತದೆ. ಎರಡು ಬಾರಿ ತಾಲೂಕು ಮಟ್ಟದ ಪ್ರಶಸ್ತಿ ಸಿಕ್ಕಿದೆ. ಈ ಬಾರಿಯು ತೋಟ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಶ್ರಮದಾನ ನಡೆದಿದೆ. ಹಸಿರು ಸಂರಕ್ಷಣೆಯೊಂದಿಗೆ ಆರೋಗ್ಯಪೂರ್ಣ ಪರಿಸರ ನಿರ್ಮಾಣಕ್ಕೆ ಇದು ಸಹಕಾರಿ. 
-ಎ. ಲೀಲಾವತಿ ಮುಖ್ಯ ಶಿಕ್ಷಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next