ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾದ ಬುಧವಾರ ಬಿಜೆಪಿ ಪೂರ್ವಯೋಜಿತವೆಂಬಂತೆ ಪ್ರತಿರೋಧ ತೋರಿದ ಹಿನ್ನೆಲೆಯಲ್ಲಿ ರಾಜ್ಯಪಾಲರ ಭಾಷಣ ಮೊಟಕುಗೊಂಡಿದ್ದು, ಕಮಲ ಪಾಳಯದ ಕಾರ್ಯತಂತ್ರಕ್ಕೆ ಆರಂಭಿಕ ಯಶಸ್ಸು ಸಿಕ್ಕಂತಾಗಿದೆ.
ಇದರಿಂದ ಉತ್ತೇಜಿತರಾಗಿರುವ ಬಿಜೆಪಿ ನಾಯಕರು ಗುರುವಾರ ನಡೆಯಲಿರುವ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲೂ ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲ ಎಂಬ ಅಂಶವನ್ನೇ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿ ಕಲಾಪ ನಡೆಯದಂತೆ ತಡೆಯುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಗುರುವಾರ ಕಲಾಪ ಆರಂಭಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶಾಸಕರ ಸಭೆ ನಡೆಸಿ ಪಕ್ಷದ ಮುಂದಿನ ನಿಲುವಿನ ಬಗ್ಗೆ ಸ್ಪಷ್ಟ ಸೂಚನೆ ನೀಡಲಿದ್ದಾರೆ.
ಬುಧವಾರದ ವಿಧಾನಮಂಡಲ ಕಲಾಪ ಮುಗಿದ ಬಳಿಕ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿರುವ ಕೊಠಡಿಯಲ್ಲಿ ಹಿರಿಯ ನಾಯಕರು, ಶಾಸಕರೊಂದಿಗೆ ಅರ್ಧ ಗಂಟೆ ಚರ್ಚೆ ನಡೆಸಿದರು. ಈ ವೇಳೆ, ಸದನಕ್ಕೆ ಹಲವು ಕಾಂಗ್ರೆಸ್ ಶಾಸಕರು ಗೈರಾಗಿರುವುದು ನಮ್ಮ ವಾದಕ್ಕೆ ಹೆಚ್ಚಿನ ಬಲ ತಂದಿದೆ. ಹಾಗಾಗಿ ಗುರುವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯನ್ನೂ ಬಹಿಷ್ಕರಿಸುವುದು ಸೂಕ್ತ ಎಂದು ಹಲವು ಶಾಸಕರು ಸಭೆಯಲ್ಲಿ ಸಲಹೆ ನೀಡಿದರು ಎಂದು ಮೂಲಗಳು ಹೇಳಿವೆ.
ರಾಜ್ಯಪಾಲರ ಮೂಲಕ ಸರ್ಕಾರ ಯಾವುದೆಲ್ಲಾ ಸುಳ್ಳುಗಳನ್ನು ಹೇಳಿಸಿದೆ ಎಂಬುದನ್ನು ಬಯಲು ಮಾಡಲು ಒಳ್ಳೆಯ ಅವಕಾಶವಿದೆ. ಅಂಕಿ-ಅಂಶ ಸಹಿತವಾಗಿ ವಾಗ್ಧಾಳಿ ನಡೆಸಿ ಸರ್ಕಾರವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಬಹುದು ಎಂದು ಇನ್ನೂ ಕೆಲ ಶಾಸಕರು ಸಲಹೆ ನೀಡಿದರು. ಆದರೆ, ಯಾವ ಹಂತದಲ್ಲೂ ನಮ್ಮ ಶಾಸಕರನ್ನು ಅಮಾನತುಪಡಿಸುವ ಇಲ್ಲವೇ ಸದನದಿಂದ ಹೊರಗಿಡಲು ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದು ಕೆಲ ಹಿರಿಯರು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ವಿಚಾರಗಳನ್ನು ಅವಲೋಕಿಸಿ ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಜೆಟ್ ದಿನದಂದು ಅಂತಿಮ ನಿರ್ಧಾರ: ಸಭೆ ಬಳಿಕ ಪ್ರತಿಕ್ರಿಯಿಸಿದ ಯಡಿಯೂರಪ್ಪ, ರಾಜ್ಯಪಾಲರ ಭಾಷಣವನ್ನು ಬಹಿಷ್ಕರಿಸಿದಂತೆ ಬಜೆಟ್‌ಗೂ ಪ್ರತಿರೋಧ ತೋರಬೇಕೆ ಎಂಬ ಬಗ್ಗೆ ಶುಕ್ರವಾರ ಬೆಳಗ್ಗೆ ನಿರ್ಧರಿಸಲಾಗುವುದು. ಸರ್ಕಾರ ಅಸ್ತಿತ್ವದಲ್ಲಿ ಇಲ್ಲ ಎಂಬ ವಾತಾವರಣವಿದೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಂಬಂಧಪಟ್ಟಂತೆ ಯಾವ ನಿಲುವು ಕೈಗೊಳ್ಳಬೇಕು ಎಂಬುದನ್ನು ಗುರುವಾರ ಬೆಳಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.