Advertisement

“ಕ್ಷೇತ್ರ ಕೊಟ್ಟು ಟಿಕೆಟ್‌ ಖಾತ್ರಿ ಮಾಡಿ’

07:24 AM Jun 23, 2020 | Lakshmi GovindaRaj |

ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ ಚುನಾವಣೆಯಲ್ಲಿ ಹಿರಿತಲೆಗಳಿಗೆ ಅವಕಾಶ ಕಲ್ಪಿಸಿ ಹೊಸಬರನ್ನು ಕಡೆಗಣಿಸಿರುವುದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್‌ ಯುವ ಟಿಕೆಟ್‌ ಆಕಾಂಕ್ಷಿಗಳು ಹೊಸಬರಿಗೆ  ವಿಧಾನಸಭೆ ಅಥವಾ ಲೋಕಸಭೆ ಟಿಕೆಟ್‌ ಕೊಡುವ ಭರವಸೆ ನೀಡಿ ಕ್ಷೇತ್ರ ಸೂಚಿಸಿದರೆ ಕೆಲಸ ಮಾಡಲು ಸಿದ್ಧ ಎಂದು ಅನೇಕರು ಪಕ್ಷದ ನಾಯಕರಿಗೆ ಆಗ್ರಹ ಪೂರ್ವಕ ಮನವಿ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ. ಮೇಲ್ಮನೆ  ಚುನಾವಣೆಗೆ ಬಿಜೆಪಿ ಹೊಸಬರಿಗೆ ಅವಕಾಶ ಕಲ್ಪಿಸಿ ಹೊಸತನಕ್ಕೆ ನಾಂದಿ ಹಾಡಿದ್ದು ಕಾಂಗ್ರೆಸ್‌ ನಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಹೀಗಾಗಿ ಹೊಸಬರು ತಮಗೆ ಮೇಲ್ಮನೆಗೆ ಅವಕಾಶ ನೀಡದಿದ್ದರೆ ಚುನಾವಣಾ ರಾಜಕೀಯದಲ್ಲಿಯಾದರೂ ಟಿಕೆಟ್‌ ನೀಡುವ ಭರವಸೆ ನೀಡಿದರೆ, ಮುಂದಿನ 3 ವರ್ಷ ಕ್ಷೇತ್ರದಲ್ಲಿ ಕೆಲಸ ಮಾಡಿ ಆಯ್ಕೆಯಾಗಿ ಬರಲು ಅನುಕೂಲವಾಗುತ್ತದೆ ಎಂಬ ‌ ವಾದ ಮಂಡಿಸುತ್ತಿದ್ದಾರೆ.

Advertisement

ಕುಟುಂಬದ ಹಿಡಿತ: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.60 ಕ್ಷೇತ್ರಗಳು ಕಾಂಗ್ರೆಸ್‌ ನಾಯಕರ ಕುಟುಂಬ ರಾಜಕಾರಣಕ್ಕೆ ಒಳಪಟ್ಟಿವೆ. ಸ್ವಾತಂತ್ರ್ಯ ಬಂದಾಗಿನಿಂದ ಕುಟುಂಬ ರಾಜಕಾರಣ ಬಂದಿದ್ದರೂ 1970ರ ದಶಕದಿಂ¨ಕೆಲವು ಕ್ಷೇತ್ರ ಒಂದೇ ಕುಟುಂಬ ಕೈಯಲ್ಲಿದ್ದು, ಅಲ್ಲಿ ಬೇರೆ ಯಾವುದೇ ಕಾರ್ಯಕರ್ತರು ಬೆಳೆಯಲು ಅವಕಾಶ ಇಲ್ಲದ ಸ್ಥಿತಿ ಇದೆ. ಹೀಗಾಗಿ ಹೊಸಬರಿಗೆ ಪಕ್ಷದ ಅಧ್ಯಕ್ಷರು ಅಧಿಕೃತ ಆದೇಶ ನೀಡದೆ ಯಾವುದೇ ಕ್ಷೇತ್ರದಲ್ಲಿಯೂ ಕೆಲಸ ಮಾಡಲು  ಸೋತ ಅಭ್ಯರ್ಥಿಗಳು ಅಥವಾ ಕುಟುಂಬ ರಾಜಕಾರಣ ವ್ಯವಸ್ಥೆಯಲ್ಲಿ ಅವಕಾಶ ದೊರೆಯುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ರಾಜೀವ್‌ ಗಾಂಧಿ ಸೂತ್ರಕ್ಕೆ ಆಗ್ರಹ: ಪಕ್ಷದಲ್ಲಿ ಹೊಸಬರಿಗೆ ಅವಕಾಶ ಸಿಗಬೇಕಾದರೆ ಮಾಜಿ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ ಜಾರಿಗೆ ತಂದಿದ್ದ ನಿಯಮವನ್ನು ರಾಜ್ಯದಲ್ಲಿ ಜಾರಿಗೆ ತರಬೇಕು. 1984ರಲ್ಲಿ ರಾಜೀವ್‌ ಗಾಂಧಿ ಲೋಕಸಭೆ  ಚುನಾವಣೆ ವೇಳೆ ಸತತ 5 ಬಾರಿ ಸ್ಪರ್ಧಿಸಿದವರು ಅಥವಾ ಸತತ 3 ಬಾರಿ ಸೋಲು ಕಂಡವರಿಗೆ ಟಿಕೆಟ್‌ ನೀಡದಂತೆ ನಿಯಮ ಜಾರಿಗೆ ತಂದಿದ್ದರು. ಅದರಿಂದ ಶೇ. 40 ಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ದೊರೆತಿದ್ದವು. ಈಗ ರಾಜ್ಯ-ರಾಷ್ಟ್ರ  ಮಟ್ಟದಲ್ಲಿ ಪಕ್ಷ ಅದೇ ಮಾದರಿ ನಿಯಮ ಜಾರಿಗೊಳಿಸಿದರೆ, ಪಕ್ಷದಲ್ಲಿ ಹೊಸ ಮುಖಗಳಿಗೆ ಅವಕಾಶ ದೊರೆಯುತ್ತದೆ. ಈಗ ಕೆಪಿಸಿಸಿ ಅಧ್ಯಕ್ಷರು ವಿಧಾನ ಪರಿಷತ್‌ ಟಿಕೆಟ್‌ ವಂಚಿತ ಹೊಸಬರು ಕ್ಷೇತ್ರದಲ್ಲಿ ಕೆಲಸ ಮಾಡಲಿ ಟಿಕೆಟ್‌  ನೀಡುತ್ತೇವೆ ಎಂದು ಹೇಳಿರುವುದನ್ನು ಅಧಿಕೃತ ನಿಯಮ ಜಾರಿಗೊಳಿಸಿ, ಆಕಾಂಕ್ಷಿಗಳಿಗೆ ಕ್ಷೇತ್ರದ ಜವಾಬ್ದಾರಿ ವಹಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ರಾಜ್ಯದಲ್ಲಿ 3 ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿ ಸೋತಿರುವ ಅಭ್ಯರ್ಥಿಗಳು ಸುಮಾರು 82 ಕ್ಷೇತ್ರಗಳಲ್ಲಿದ್ದಾರೆ. ಅವರ ಬದಲು ಕ್ಷೇತ್ರದಲ್ಲಿ ಸಕ್ರೀಯರಾಗಿರುವ ಹೊಸ ಕಾರ್ಯಕರ್ತನಿಗೆ ಟಿಕೆಟ್‌ ನೀಡುವ ಭರವಸೆ ನೀಡಿ ಕ್ಷೇತ್ರದಲ್ಲಿ  ಕೆಲಸ ಮಾಡಲು ಸೂಚಿಸಿದರೆ, ಅವರಿಗೆ ಚುನಾವಣೆಯಲ್ಲಿ ಗೆದ್ದು ಬರಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಅಲ್ಲದೆ, ಯಾವುದೇ ನಾಯಕರಿದ್ದರೂ ಒಂದು ಚುನಾವಣೆಯಲ್ಲಿ ಕುಟುಂಬದಲ್ಲಿ ಒಬ್ಬರಿಗೆ ಟಿಕೆಟ್‌  ನೀಡುವ ನಿಯಮ ಕಡ್ಡಾಯಗೊಳಿಸಬೇಕು ಹಾಗೂ ಕಳೆದ 2019 ರ ಲೋಕಸಭೆ ಚುನಾವಣೆಯಲ್ಲಿ ಅನೇಕ ಹಿರಿಯ ನಾಯಕರು ಸೋತಿದ್ದಾರೆ. ಅವರ ಬದಲು ಈಗಲೇ ಹೊಸಬರನ್ನು ಗುರುತಿಸಿ ಕ್ಷೇತ್ರದಲ್ಲಿ ಕೆಲಸ ಮಾಡಲು ಸೂಚಿಸಿದರೆ,  ಚುನಾವಣೆಯಲ್ಲಿ ಗೆಲುವಿಗೆ ಅನುಕೂಲವಾಗುತ್ತದೆ ಎಂಬ ವಾದ ಕೇಳಿ ಬರುತ್ತಿದೆ.

ಕೇಡರ್‌ಗೆ ಅವಕಾಶ ನೀಡಬೇಕು: ಪಕ್ಷವನ್ನು ಕೇಡರ್‌ ಬೇಸ್‌ನಲ್ಲಿ ಸಂಘಟಿಸಲು ಮುಂದಾಗಿರುವ ನಾಯಕರು ಕೇಡರ್‌ನಲ್ಲಿ ಕೆಲಸ ಮಾಡುವ ಕಾರ್ಯಕರ್ತನಿಗೆ ಅವಕಾಶ ನೀಡದಿದ್ದರೆ, ಕಾರ್ಯಕರ್ತರು ಕೆಲಸ ಮಾಡಲು ಉತ್ಸಾಹ  ಕಡಿಮೆಯಾಗುತ್ತದೆ. ಹೀಗಾಗಿ ಪಕ್ಷ ಸಂಘಟನೆಗೆ ಕೇಡರ್‌ ವ್ಯವಸ್ಥೆ ಜಾರಿಗೆ ತರುವುದಾದರೆ, ಅದೇ ಮಾದರಿಯಲ್ಲಿ ಅಧಿಕಾರದ ಹಂಚಿಕೆಯಲ್ಲೂ ಕೇಡರ್‌ ನಲ್ಲಿ ಕೆಲಸ ಮಾಡುವವರಿಗೆ ಅವಕಾಶ ದೊರೆಯವಂತೆ ನೋಡಿಕೊಳ್ಳಬೇಕು ಎಂಬ  ಮಾತು ಕೇಳಿ ಬರುತ್ತಿವೆ.

Advertisement

ನಾಯಕರ ಹೊಂದಾಣಿಕೆ ರಾಜಕಾರಣ?: ರಾಜ್ಯ ಕಾಂಗ್ರೆಸ್‌ನಲ್ಲಿ ಕೆಲವು ನಾಯಕರು ಬೇರೆ ಪಕ್ಷಗಳ ನಾಯಕರ ಜೊತೆ ಹೊಂದಾಣಿಕೆ ರಾಜಕಾರಣ ಮಾಡುವುದರಿಂದ ಕಾಂಗ್ರೆಸ್‌ ನಿರೀಕ್ಷಿಸಿದಷ್ಟು ಸ್ಥಾನ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂಬ  ಮಾತುಗಳೂ ಕೇಳಿಬರುತ್ತಿವೆ. ರಾಜ್ಯದಲ್ಲಿ 2018 ರ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 22 ಕ್ಷೇತ್ರಗಳಲ್ಲಿ ರಾಜ್ಯ ನಾಯಕರ  ಹೊಂದಾಣಿಕೆ ರಾಜಕಾರಣದಿಂದ ಕಾಂಗ್ರೆಸ್‌ ಅಭ್ಯರ್ಥಿಗಳು ಸೋಲುಂಡಿದ್ದಾರೆ ಎಂಬ ಮಾಹಿತಿ  ಲಭ್ಯವಾಗಿದೆ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next