ರಾಮನಗರ: ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ವೃದ್ಧಿಸಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅಗತ್ಯವಿರುವ ರೈತರ ಮಾಹಿತಿಯನ್ನು ಜಿಲ್ಲೆಯಿಂದ ತ್ವರಿತವಾಗಿ ಪಿಎಂ-ಕಿಸಾನ್ ತಂತ್ರಾಂಶದಲ್ಲಿ ದಾಖಲಿಸಬೇಕು ಎಂದು ಇ-ಗವರ್ನೆನ್ಸ್ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಪಿಎಂ ಕಿಸಾನ್ ಯೋಜನೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಯ ಅನುಷ್ಠಾನಕ್ಕೆ ಅಟಲ್‌ಜಿ ಜನ ಸ್ನೇಹಿ ಕೇಂದ್ರಗಳು, ಬಾಪೂಜಿ ಸೇವಾ ಕೇಂದ್ರಗಳು ಹಾಗೂ ಸಿ.ಎಸ್.ಸಿ ಕೇಂದ್ರಗಳನ್ನು ಬಳಕೆ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ತ್ವರಿತವಾಗಿ ತಂತ್ರಾಂಶದಲ್ಲಿ ದಾಖಲಿಸುವ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಯೋಜನೆಗೆ ರೈತರನ್ನು ನೋಂದಾಯಿಸಿ: ರೈತರ ಘೋಷಣಾ ಪತ್ರ ಪಡೆಯಲು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಿ. ಈಗಾಗಲೇ ತಂತ್ರಾಂಶದಲ್ಲಿ ಲಭ್ಯವಿರುವ ರೈತರ ಪಟ್ಟಿಯನ್ನು ಕ್ರೋಢಿಕರಿಸಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಕಳುಹಿಸಲಾಗಿದೆ. ಅವರು ರೈತರ ಪಟ್ಟಿಗಳನ್ನು ತಾಲೂಕು, ಹೋಬಳಿ, ಗ್ರಾಮ ಪಂಚಾಯ್ತಿವಾರು ವಿಂಗಡಿಸಿ, ಅರ್ಹ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯ್ತಿಗಳಲ್ಲಿ ಪ್ರಕಟಿಸಬೇಕು. ಅಟಲ್‌ಜಿ ಜನಸ್ನೇಹಿ ಕೇಂದ್ರಗಳಿಗೆ ನೀಡಿ ರೈತರನ್ನು ಯೋಜನೆಯಡಿ ನೋಂದಾಯಿಸುವಂತೆ ಸೂಚನೆ ನೀಡಿದರು.
ಮಾಹಿತಿ ದಾಖಲಿಸಲು ಕ್ರಮ: ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ, ನಿಗದಿತ ಸಮಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ರೈತರ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಕೃಷಿ ಇಲಾಖೆ ಉಪನಿರ್ದೇಶಕ ಅಶೋಕ್ ಮಾತನಾಡಿ, ಕೇಂದ್ರ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯವನ್ನು ಹೆಚ್ಚಿಸಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಘೋಷಿಸಿದೆ.
2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ ಒಂದು ವರ್ಷಕ್ಕೆ 6 ಸಾವಿರ ರೂ. ನೀಡಲಾಗುವುದು. ಮೊದಲ ಕಂತಿನ ಹಣ ಪಡೆಯಲು ರೈತರ ಸ್ವಯಂ ಘೋಷಣೆಯನ್ನು ಅನುಬಂಧ-ಸಿ ಅಥವಾ ಅನುಬಂಧ -ಡಿ ಅನ್ನು ಪಿಎಂ-ಕಿಸಾನ್ ತಂತ್ರಾಂಶದಲ್ಲಿ ಅಳವಡಿಸಬೇಕು. ಇದಕ್ಕಾಗಿ ಬಾಪೂಜಿ ಸೇವಾ ಕೇಂದ್ರಗಳು, ಅಟಲ್ ಜಿ ಜನಸ್ನೇಹಿ ಕೇಂದ್ರಗಳು,
ರೈತ ಸಂಪರ್ಕ ಕೇಂದ್ರಗಳ ರೈತರು ಭೌತಿಕ ಅಥವಾ ವಿದ್ಯುನ್ಮಾನ ಘೋಷಣೆ ಸಲ್ಲಿಸಬಹುದು. ಈ ಬಗ್ಗೆ ಕೃಷಿ ಇಲಾಖೆ ವತಿಯಿಂದ ವ್ಯಾಪಕ ಪ್ರಚಾರ ನೀಡಲಾಗಿದ್ದು, ರೈತರ ಘೋಷಣಾ ನಮೂನೆ ಸಿ ಮತ್ತು ಡಿ ಅನ್ನು ಮುದ್ರಿಸಿ ಸರಬರಾಜು ಮಾಡಲಾಗಿರುತ್ತದೆ ಎಂದರು. ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್, ಕೃಷಿ ಇಲಾಖೆ ಉಪನಿರ್ದೇಶಕ ಅಶೋಕ್, ರಾಮನಗರ ತಹಶೀಲ್ದಾರ್ ರಾಜು, ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.