ಸಿಂಧನೂರು: ಮಾರುಕಟ್ಟೆಯಲ್ಲಿ ಜೋಳದ ಬೆಲೆ ಪಾತಾಳಕ್ಕೆ ಕುಸಿದ ಹಿನ್ನೆಲೆಯಲ್ಲಿ ಚಿಂತಾಕ್ರಾಂತರಾಗಿದ್ದ ರೈತರಿಗೆ ಕೊನೆಗೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಖಾತ್ರಿಯಾಗಿದೆ. 2020-21ನೇ ಸಾಲಿನ ಮುಂಗಾರು ಋತುವಿನ ಯೋಜನೆಯಡಿ ಜೋಳವನ್ನು ಸಹ ಖರೀದಿಸಲು ಜ.2ರಂದು ಮಾರ್ಪಾಡು ಆದೇಶ ಹೊರಡಿಸಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.
ಕಳೆದ ಹದಿನೈದು ದಿನಗಳಿಂದ ತಾಲೂಕಿನಲ್ಲಿ ಹೈಬ್ರಿಡ್ ಜೋಳದ ಕೊಯ್ಲು ಆರಂಭವಾಗಿತ್ತು. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಜೋಳ ಆವಕವಾಗತೊಡಗಿತ್ತು. ಕ್ವಿಂಟಲ್‌ಗೆ 1900 ರೂ. ವರೆಗೆ ಇದ್ದ ಬೆಲೆ 100 ರೂ.ನಷ್ಟು ಕುಸಿತವಾಗಿತ್ತು. ಬೆಲೆ ಕುಸಿದ ಹಿನ್ನೆಲೆಯಲ್ಲಿ ರೈತರಲ್ಲಿ ನಷ್ಟದ ಭೀತಿ ಮೂಡಿತ್ತು. ಮಾರುಕಟ್ಟೆಗೆ ಜೋಳ ತಂದರೂ ಸ್ಪರ್ಧಾತ್ಮಕ ಬೆಲೆ ದೊರೆಯದ್ದರಿಂದ ಖರೀದಿ ಕೇಂದ್ರ ಆರಂಭಿಸುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದುಂಬಾಲು ಬಿದ್ದಿದ್ದರು. ಕೊನೆಗೆ ಸರ್ಕಾರದಿಂದ ಸ್ಪಂದನೆ ವ್ಯಕ್ತವಾಗಿದ್ದು, ಅಧಿಕೃತ ಆದೇಶ ಹೊರಬಿದ್ದ ನಂತರ ಕೇಂದ್ರಗಳನ್ನು ತೆರೆಯಲಾಗಿದೆ.
ಜೋಳಕ್ಕೆ ಹೆಚ್ಚಿನ ಒಲವು: ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭತ್ತ ಬಿಟ್ಟರೆ ಹೈಬ್ರಿಡ್ ಜೋಳವನ್ನೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಪ್ರಸಕ ವರ್ಷ ಕೃಷಿ ಇಲಾಖೆ ಮಾಹಿತಿ ಪ್ರಕಾರ, ತಾಲೂಕಿನಲ್ಲಿ 17,547 ಹೆಕ್ಟೇರ್‌ನಲ್ಲಿ ಜೋಳ ಬೆಳೆಯಲಾಗಿದೆ. ತಾಲೂಕಿನಲ್ಲಿ 7 ಸಾವಿರ ಹೆಕ್ಟೇರ್ ಗುರಿಯಿದ್ದರೆ, ಅದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿತ್ತು. ಸದ್ಯ ಕೊಯ್ಲು ಆರಂಭವಾಗಿರುವುದರಿಂದ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದರು. ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 700 ರೂ.ನಿಂದ 900 ರೂ.ನಷ್ಟು ಕಡಿಮೆ ಬೆಲೆ ಕೇಳುತ್ತಿದ್ದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿತ್ತು. ರೈತರಲ್ಲಿ ಉತ್ಪನ್ನ ಖಾಲಿಯಾದ ಮೇಲೆ ಕೇಂದ್ರ ಆರಂಭಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂಬ ದೂರು ಕೇಳಿಬಂದಿದ್ದವು.
ರೈತರು ನಿರಾಳ: ಕಳೆದ ವರ್ಷ ತಾಲೂಕಿನಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2,550 ರೂ. ದರಕ್ಕೆ 80 ಸಾವಿರ ಕ್ವಿಂಟಲ್ ಹೈಬ್ರಿಡ್ ಜೋಳ ಖರೀದಿಯಾಗಿತ್ತು. ಶೇ.95ರಷ್ಟು ಜೋಳವನ್ನು ಸರ್ಕಾರವೇ ಖರೀದಿ ಮಾಡಿದ್ದು, ದಾಖಲೆಯಾಗಿತ್ತು. ಈ ವರ್ಷ ಕೇಂದ್ರ ಸರ್ಕಾರ ಬೆಂಬಲೆಯನ್ನು ಹೆಚ್ಚಿಸಿದ್ದರಿಂದ ಪ್ರತಿ ಕ್ವಿಂಟಲ್‌ಗೆ 2,640 ರೂ.ನಂತೆ ಖರೀದಿಸಲು ಸಿದ್ಧತೆ ನಡೆಸಲಾಗಿದೆ. ಈ ಮೊದಲು ಖರೀದಿ ಏಜೆನ್ಸಿಯನ್ನು ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಒಪ್ಪಿಸಲಾಗಿತ್ತು. ಇದೀಗ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಯಮಿತವನ್ನು ಸಂಗ್ರಹಣಾ ಏಜೆನ್ಸಿಯನ್ನಾಗಿ ಮಾರ್ಪಡಿಸಿ ಆದೇಶಿಸಿದ್ದು, ಖರೀದಿ ಪ್ರಕ್ರಿಯೆ ಆರಂಭಿಸಲು ತಿಳಿಸಲಾಗಿದೆ. ಜ.2ರಂದೇ ಸೂಚನೆ ಬಂದಿದ್ದರೂ ಅಗತ್ಯ ಸಿದ್ಧತೆ ಕೈಗೊಳ್ಳಲು ಮುಂದಾಗಿದ್ದ ಅ ಧಿಕಾರಿಗಳು ಈಗ ಖರೀದಿ ಕೇಂದ್ರಗಳ ಬಾಗಿಲು ತೆರೆದಿದ್ದಾರೆ. ಕೃಷಿ ಇಲಾಖೆಯಿಂದ ರೈತರಿಗೆ ನೀಡಲಾದ ಪೂÅಟ್ಸ್ ಐಡಿ ನಂಬರ್‌ನೊಂದಿಗೆ ರೈತರು ಶುಕ್ರವಾರದಿಂದಲೇ ತಮ್ಮ ಹೆಸರನ್ನು ನೋಂದಾಯಿಸಬಹುದು.
ಇದನ್ನೂ ಓದಿ:ಸಲಾರ್ ಚಿತ್ರಕ್ಕೆ ಮುಹೂರ್ತ; ಹೈದರಾಬಾದ್‌ನಲ್ಲಿ ಕನ್ನಡ-ತೆಲುಗು ಚಿತ್ರರಂಗಗಳ ಮಹಾ ಸಮ್ಮಿಲನ
ಮಾರುಕಟ್ಟೆಯಲ್ಲಿ ಜೋಳಕ್ಕೆ ಉತ್ತಮ ಬೆಲೆಯಿಲ್ಲವೆಂಬುದು ಗೊತ್ತಾಗುತ್ತಿದ್ದಂತೆ ಆಹಾರ ಇಲಾಖೆ ಸಚಿವರನ್ನು ಸಂಪರ್ಕಿಸಿ ಬೇಗ ಕೇಂದ್ರ ತೆರೆಯಲು ಮಾತನಾಡಲಾಗಿತ್ತು. ಸರ್ಕಾರ ಸ್ಪಂದಿಸಿ ಕೇಂದ್ರಗಳನ್ನು ಆರಂಭಿಸಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು.
ವೆಂಕಟರಾವ್ ನಾಡಗೌಡ, ಶಾಸಕರು, ಸಿಂಧನೂರು
ಯಮನಪ್ಪ ಪವಾರ