ಕಲಬುರಗಿ: ಜಿಲ್ಲೆಯ 1.28 ಲಕ್ಷ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವಂತೆ ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಕೆ.ಎನ್. ವಿಜಯ ಅಧಿಕಾರಿಗಳಿಗೆ ಸೂಚಿಸಿದರು.
ಬೀದರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಯಾ ಜಿಲ್ಲೆಗೆ ನೀಡಲಾದ ಗುರಿಯನ್ವಯ ಬೀದರ ಜಿಲ್ಲೆಯ 78 ಸಾವಿರ, ಯಾದಗಿರಿ ಜಿಲ್ಲೆಯ 65 ಸಾವಿರ ಅನಕ್ಷರಸ್ಥರನ್ನು ಸಾಕ್ಷರನ್ನಾಗಿ ಮಾಡಲು ಆಯಾ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.
ಮಾ. 25ರಂದು ಅನಕ್ಷರಸ್ಥರಿಗೆ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಹಾಗೂ ಸಾಕ್ಷರ ಭಾರತ ಕಾರ್ಯಕ್ರಮದ ಅಂಗವಾಗಿ ಜ. 29ರಿಂದ 31ರ ವರೆಗೆ ಜಿಲ್ಲೆಯ ಏಳು ತಾಲೂಕಿನ 21 ಗ್ರಾಪಂನ ಕಲಿಕಾ ಕೇಂದ್ರಗಳಿಗೆ ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಹಾಗೂ ಜಿಲ್ಲಾ ಲೋಕ ಶಿಕ್ಷಣ ಸಮಿತಿಯಿಂದ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡವು ಭೇಟಿ ನೀಡಿ ಕಲಿಕಾ ವಾತಾವರಣ ಪ್ರಚಾರಾಂದೋಲನದ ಪೋಸ್ಟರ್, ಕ್ಯಾಲೆಂಡರ್, ಫೋಲ್ಡರ್, ಸ್ಟೀಕರ್‌ಗಳನ್ನು ಕಲಿಕಾ ಕೇಂದ್ರಗಳಿಗೆ ನೀಡುವ ಮೂಲಕ ಅನಕ್ಷರಸ್ಥರನ್ನು ಪ್ರೋತ್ಸಾಹಿಸಲಾಗಿದೆ. ಇನ್ನುಳಿದ ಕಲಿಕಾ ಕೇಂದ್ರಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳು ಪ್ರತಿ ದಿನ 10 ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷೆಗೆ ಮುನ್ನವೇ ನೀಡಲಾದ ಗುರಿ ಸಾಧಿಸಬೇಕೆಂದು ಹೇಳಿದರು.
ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಎಸ್. ತುಕಾರಾಂ, ಆರ್. ವೆಂಕಟೇಶ, ನೋಡಲ್ ಅಧಿಕಾರಿ ಎಸ್.ಎಂ. ಮಾರುತಿ, ಲೋಕ ಶಿಕ್ಷಣ ನಿರ್ದೇಶನಾಲಯದ ಉಪನಿರ್ದೇಶಕಿ ಗೀತಾ, ಲೆಕ್ಕಾಧಿಕಾರಿ ಮಂಜುಳಾ, ಜಿಲ್ಲೆಯ ನೋಡಲ್ ಅಧಿಕಾರಿ ಅಶ್ವಥರಾಮು, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಎನ್.ವಿ. ಶಿವಪ್ಪ, ಯಾದಗಿರಿ ಜಿಲ್ಲೆಯ ಲೋಹಿತ, ಬೀದರ ಜಿಲ್ಲೆಯ ಶಿವಪುರ, ಕಾರ್ಯಕ್ರಮ ಸಹಾಯಕಿ ಅರ್ಚನಾ ಎಸ್. ಎಂ. ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.