ಪುತ್ತೂರು: ಕಾಯ ಬಿಟ್ಟು ಮಾಯ ಸೇರಿದ ಮೇಲೆ ಗಡಿ, ಜಾತಿ, ಪಂಥ ಬಂಧನವಿರದ ಕೋಟಿ ಚೆನ್ನೆಯರು ತನ್ನ ಹಾಗೂ ತಾಯಿಯ ಜನಸ್ಥಳಕ್ಕೆ ಪಾದಸ್ಪರ್ಶಗೆಯ್ಯುವಂತೆ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಮಾ.27 ರಂದು ಎಣ್ಮೂರು ಆದಿಬೈದೇರು ನೇಮ ಸಂದರ್ಭದಲ್ಲಿ ಬೈದೇರುಗಳ ಮುಂದೆ ಅರಿಕೆ ಮಾಡಿಕೊಂಡರು. ಆಗ ಕೋಟಿ-ಚೆನ್ನಯ ಬೈದೇರುಗಳು ಕೊಡಿ ಎಲೆಯನ್ನು ಕೊಟ್ಟು ಅದಕ್ಕೆ ಒಂದು ಮುಷ್ಟಿ ಹಿಂಗಾರವನ್ನು ಹಾಕುವಂತೆ ತಿಳಿಸಿದರು. ಹಿಂಗಾರದ ಎಣಿಕೆ ವೇಳೆ ಮುಗುಳಿ ಬತ್ಂಡಾ ಬರ್ಪೆ, ಕಟ್ತ್ ಬತ್ಂಡಾ ಪನ್ಪೆ (ಸಮ ಸಂಖ್ಯೆ ಬಂದರೆ ಇಲ್ಲ, ಬೆಸ ಸಂಖ್ಯೆ ಬಂದರೆ ಬರುವೆವು) ಎಂದು ಬೈದೇರುಗಳು ನುಡಿ ನೀಡಿತು.
ಎಣಿಕೆ ಮಾಡಿದ ವೇಳೆ ಮುಗುಳಿ (ಬೆಸ ಸಂಖ್ಯೆ) ಬಂತು. ಆಗ ಬೈದೇರುಗಳು ಕ್ಷೇತ್ರದ ಅನುವಂಶಿಕ ಮೊಕ್ತೇಸರರಿಗೆ, ಎಣ್ಮೂರು ಗರಡಿ ನೆಲದಿಂದ ಮೂರು ಎಲೆ ಗಂಧ, ಒಂದು ಬಿಂದಿಗೆ ನೀರು ಹಾಗೂ ಗರಡಿ ಕಟ್ಟುವ ಸಂದರ್ಭದಲ್ಲಿ ಒಂದು ಹಿಡಿ ಮಣ್ಣು ಅರ್ಪಿಸಬೇಕು. ನಾವು ಬರುತ್ತೇವೆ ಎಂದು ನುಡಿ ನೀಡಿತು. ಆ ಅಭಯದ ಪ್ರಕಾರ ರವಿವಾರ ಆದಿ ಗರಡಿಯಿಂದ ತಂದ ಪವಿತ್ರ ವಸ್ತುಗಳನ್ನು ಪಡುಮಲೆಗೆ ತಂದು ಅರ್ಪಿಸಲಾಯಿತು.
ತುಳುನಾಡಿನ ಕಾರಣಿಕ ಶಕ್ತಿಗಳಾದ ಕೋಟಿ-ಚೆನ್ನಯರ ಜನ್ಮಸ್ಥಾನ ಪಡುಮಲೆಯಲ್ಲಿ ಐನೂರೈವತ್ತು ವರ್ಷಗಳ ಬಳಿಕ ಸಾನಿಧ್ಯಗಳು ಜೀರ್ಣೋದ್ಧಾರಗೊಂಡು ಪ್ರತಿಷ್ಠೆ ಹಾಗೂ ಬ್ರಹ್ಮಕಲಶಕ್ಕೆ ಅಣಿಯಾಗಿದ್ದು ಎಣ್ಮೂರು ಆದಿ ಗರಡಿಯಲ್ಲಿ ಬೈದೇರುಗಳು ನೀಡಿದ ನುಡಿಯಂತೆ ಆದಿ ಗರಡಿ ನೆಲದಿಂದ ಮೂರು ಎಲೆ ಗಂಧ, ಒಂದು ಬಿಂದಿಗೆ ನೀರು ಹಾಗೂ ತೀರ್ಥವನ್ನು ಪಡುಮಲೆ ಜನ್ಮಸ್ಥಳದ ಮಣ್ಣಿಗೆ ಅರ್ಪಿಸುವ ವಿಶಿಷ್ಟ ಕಾರ್ಯ ನಡೆಯಿತು.
ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ-ಚೆನ್ನಯ ಆದಿ ಗರಡಿಯ ಅನುವಂಶಿಕ ಆಡಳಿತದಾರ ಕೆ.ರಾಮಕೃಷ್ಣ ಶೆಟ್ಟಿ ಹಾಗೂ ಪದ್ಮಾ ಆರ್ ಶೆಟ್ಟಿ ಅವರು ಬೈದೇರುಗಳ ನುಡಿಯಂತೆ ಪಡುಮಲೆಗೆ ಆಗಮಿಸಿ ಗಂಧ ಪ್ರಸಾದ, ಬಿಂದಿಗೆ ನೀರು, ತೀರ್ಥವನ್ನು ಕೋಟಿ-ಚೆನ್ನಯ, ದೇಯಿ ಬೈದೇತಿಯ ಪಡುಮಲೆ ಜನ್ಮ ನೆಲಕ್ಕೆ ತಂದೊಪ್ಪಿಸಿ ಅರ್ಪಿಸಿದರು. ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಪದಾಕಾರಿಗಳು ಸ್ವಾಗತಿಸಿ ಗೌರವಿಸಿದರು.