Advertisement
ಪ್ರಸ್ತುತ ಬೆಂಗಳೂರಿನಲ್ಲಿ ವಿಜಯ ಬ್ಯಾಂಕ್ ಉದ್ಯೋಗಿಯಾಗಿರುವ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಗ್ರಾಮೀಣ ಪ್ರದೇಶವಾದ ಕಡ್ತಲದ ಕಬಡ್ಡಿ ಪ್ರತಿಭೆ ಸುಕೇಶ್ ಹೆಗ್ಡೆ ರಾಜ್ಯ ಸರಕಾರದ 2016ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಂದರ್ಭದಲ್ಲಿ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಸುಕೇಶ್, ಪ್ರತಿಭೆಯನ್ನು ಗುರುತಿಸಿದ್ದಕ್ಕೆ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.
Related Articles
ಕಡ್ತಲ ಆಲದಪಾಡಿಯ ಕರುಣಾಕರ ಹೆಗ್ಡೆ-ರತ್ನಾವತಿ ದಂಪತಿಯ ಮೂವರು ಮಕ್ಕಳಲ್ಲಿ ಕೊನೆಯವರಾದ ಸುಕೇಶ್ ಕೃಷಿ ಕುಟುಂಬದಿಂದ ಬಂದ ಪ್ರತಿಭಾನ್ವಿತ ಕ್ರೀಡಾ ಪ್ರತಿಭೆ. ಕುಕ್ಕುಜೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವಾಗಲೇ ಕ್ರೀಡಾ ಚಟುವಟಿಕೆಯಲ್ಲಿ ಗಮನಾರ್ಹ ಸಾಧನೆಗೈದು, ಕುಕ್ಕುಜೆ ಪ್ರೌಢ ಶಾಲೆಯಲ್ಲಿ ಆ್ಯತ್ಲೆಟಿಕ್ಸ್ ಹಾಗೂ ಕಬಡ್ಡಿಯಲ್ಲಿ ಗುರುತಿಸಿಕೊಂಡಿದ್ದರು. ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಶಂಕರ್ ಹಾಗೂ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಕಬಡ್ಡಿ ಕೋಚ್ ರವಿ ಸುವರ್ಣರ ಸಲಹೆ, ಸಹಕಾರ ಸುಕೇಶ್ ಹೆಗ್ಡೆಗೆ ಕಬಡ್ಡಿಯಲ್ಲಿ ಮಿಂಚಲು ನೆರವಾಯಿತು.
Advertisement
ಕ್ರೀಡಾ ಕೋಟಾದಲ್ಲಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ ಪಡೆದಿರುವ ಸುಕೇಶ್ ಹೆಗ್ಡೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಶೆಟ್ಟಿಯವರ ಸೂಕ್ತ ತರಬೇತಿಯೊಂದಿಗೆ ರಾಜ್ಯ, ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ಭರವಸೆಯ ಆಟಗಾರನಾಗಿ ಬೆಳೆದರು.
2013ರಲ್ಲಿ ಪ್ರಾರಂಭಗೊಂಡ ಪೊ› ಕಬಡ್ಡಿ ಪಂದ್ಯಾಟದಲ್ಲಿ ಪಾಲ್ಗೊಳ್ಳುವ ಮೂಲಕ ಸುಕೇಶ್ ಹೆಗ್ಡೆಯವರ ಪ್ರತಿಭೆ ರಾಷ್ಟ್ರ ಮಟ್ಟದಲ್ಲಿ ಅನಾವರಣಗೊಂಡಿತು. ಪೊ› ಕಬಡ್ಡಿಯ 5 ಆವೃತ್ತಿಗಳಲ್ಲಿಯೂ ಆಡಿರುವ ಇವರು ಮೊದಲ 4 ಆವೃತ್ತಿಗಳಲ್ಲಿ ತೆಲುಗು ಟೈಟಾನ್ಸ್ ತಂಡವನ್ನು ಪ್ರತಿನಿಧಿಸಿದ್ದರು. 5ನೇ ಆವೃತ್ತಿಯಲ್ಲಿ ಗುಜರಾತ್ ಪೋರ್ಚುನ್ ಜೈಂಟ್ಸ್ ತಂಡದ ನಾಯಕನಾಗಿ ಕಳೆದ ಸಾಲಿನಲ್ಲಿ ತಂಡ ದ್ವಿತೀಯ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2014ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಬೀಚ್ ಏಶ್ಯನ್ ಗೇಮ್ಸ್‌ನಲ್ಲಿ ಭಾರತ ಕಬಡ್ಡಿ ತಂಡದ ಸದಸ್ಯನಾಗಿ ಭಾಗವಹಿಸಿದ್ದ ಇವರು 2016ರಲ್ಲಿ ಗುಹಾಟಿಯಲ್ಲಿ ನಡೆದ ಸೌತ್ ಏಶ್ಯನ್ ಗೇಮ್ಸ್‌ನಲ್ಲಿ ಭಾರತ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದರು.