Advertisement

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿ

07:20 AM Jan 29, 2019 | Team Udayavani |

ಕಲಬುರಗಿ: ಮುಂದಿನ ಶೈಕ್ಷಣಿಕ ವರ್ಷದಿಂದ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಜಾರಿಗೊಳಿಸುವ ರಾಜ್ಯ ಸರ್ಕಾರ ನಿರ್ಧಾರ ಉತ್ತಮವಾಗಿದ್ದು, ಇದರಿಂದ ಬಡವರು, ಹಿಂದುಳಿದ ಭಾಗಗಳ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ ಹೇಳಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತೀಕರಣಕ್ಕೆ ಎಲ್ಲರೂ ಒಗ್ಗಿಕೊಂಡಿದ್ದು, ಎಲ್ಲ ಕ್ಷೇತ್ರಗಳಲ್ಲಿ ಇಂಗ್ಲಿಷ್‌ ಕೌಶಲ್ಯದ ಬೇಡಿಕೆ ಇದೆ. ಈಗಾಗಲೇ ರಾಜ್ಯದ ಅರ್ಧ ಭಾಗಕ್ಕಿಂತ ಹೆಚ್ಚು ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದವರು ಮಕ್ಕಳು ಹಾಗೂ ಪ್ರಾದೇಶಿಕವಾಗಿ ಹಿಂದುಳಿದ ಹೈದ್ರಾಬಾದ ಕರ್ನಾಟಕ, ಹಳೆ ಮೈಸೂರು ಭಾಗದ ಮಕ್ಕಳು ಕನ್ನಡ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಇದು ಶೈಕ್ಷಣಿಕ ಅಸಮತೋಲನಕ್ಕೆ ಕಾರಣವಾಗಿದೆ ಎಂದರು.

ಶೈಕ್ಷಣಿಕ ಅಸಮತೋಲನೆ ನಿವಾರಿಸಲು ಸರ್ಕಾರಿ ಶಾಲೆಗಳಲ್ಲಿ ಕನ್ನಡ ಉಳಿಸಿಕೊಂಡು ಇಂಗ್ಲಿಷ್‌ ಕಲಿಸುವುದು ಅನಿರ್ವಾಯ ಮತ್ತು ಅಗತ್ಯವಾಗಿದೆ. ಆದರೆ, ಸರ್ಕಾರದ ನಿರ್ಧಾರದ ವಿರುದ್ಧ ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು ನಿರ್ಣಯ ತೆಗೆದುಕೊಂಡಿರುವುದು ಸೂಕ್ತವಲ್ಲ. ಈ ಬಗ್ಗೆ ಸಾಹಿತಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕುಸಿದಿದೆ ಎಂದು ಶಾಲೆಗಳ ವಿಲೀನ ಹಾಗೂ ಮುಚ್ಚುವಿಕೆ ನಡೆಯುತ್ತಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕುತ್ತು ಬಂದಿದೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವುದರಿಂದ ಮಕ್ಕಳನ್ನು ಸೆಳೆಯಬಹುದಾಗಿದೆ. ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಓಡಿಶಾ ಹಾಗೂ ಮಹಾರಾಷ್ಟ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಜಾರಿಯಲ್ಲಿದೆ. ನೆರೆ-ಹೊರೆ ರಾಜ್ಯಗಳಲ್ಲಿ ಅಧ್ಯಯನ ಮಾಡಿ ರಾಜ್ಯದಲ್ಲೂ ಇಂಗ್ಲಿಷ್‌ ಮಾಧ್ಯಮ ಆರಂಭಿಸಬೇಕು. ಮೊದಲ ಹಂತವಾಗಿ ಹೋಬಳಿಗೊಂದು ಶಾಲೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಈಗ ಕಲಿಸುತ್ತಿರುವ ಇಂಗ್ಲಿಷ್‌ ಭಾಷಾ ಕಲಿಕಾ ಮಟ್ಟವನ್ನು ಇನ್ನಷ್ಟು ಕ್ರಮಬದ್ಧಗೊಳಿಸಿ ಉತ್ತಮ ಮಾಡಬೇಕು. ಕನ್ನಡ ಹಾಗೂ ಇಂಗ್ಲಿಷ್‌ ಸಮರ್ಥವಾಗಿ ಬೋಧಿಸಬಲ್ಲ ಶಿಕ್ಷಕರಿಗೆ ತರಬೇತಿಗೆ ಪ್ರತಿ ವರ್ಷ ಹೆಚ್ಚಿನ ಅವಧಿ ಮೀಸಲಿಡಬೇಕು. ಆರ್‌ಟಿಇ ಕಾಯ್ದೆದಡಿ 1.5 ಲಕ್ಷ ಮಕ್ಕಳು ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೆ ವಾರ್ಷಿಕ 11 ಸಾವಿರಕ್ಕೂ ಅಧಿಕ ಅನುದಾನ ನೀಡಲಾಗುತ್ತಿದೆ. ಇದಕ್ಕೆ ಸಮನಾದ ಅನುದಾನವನ್ನು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಕೆ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಭಾಷಾ ಮಾಧ್ಯಮ ಕುರಿತಂತೆ ಫೆಬ್ರವರಿಯಲ್ಲಿ ರಾಜ್ಯ ಮಟ್ಟದ ವಿಚಾರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕಾರಳ್ಳಿ ಶ್ರೀನಿವಾಸ, ಅರ್ಜುನ ಗೊಬ್ಬೂರು, ಜೇತೇಂದ್ರ ಕಾಂಬಳೆ, ಶ್ರೀನಿವಾಸ ಖೇಳಗಿ, ವಿಜಯಕುಮಾರ ಅಂಕಲಗಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next