ಬೆಂಗಳೂರು: ಪ್ರಾಥಮಿಕ ಹಂತದಲ್ಲೆ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯಲು ಹೊರಟಿರುವ ಸರ್ಕಾರದ ನಿರ್ಧಾರ ಇದೀಗ ನಾಡಿನ ಹಿರಿಯ ಸಾಹಿತಿಗಳ ಮತ್ತು ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.ಆಂಗ್ಲ ಮಾಧ್ಯಮ ಶಾಲೆ ಆರಂಭದ ಕುರಿಂತೆ ಈಗಾಗಲೇ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಘೋಷಣೆ ಮಾಡಿದ್ದು, ಈ ನಿರ್ಧಾರದಿಂದ ಸರ್ಕಾರ ಕೂಡಲೆ ಹಿಂದೆ ಸರಿಯದಿದ್ದರೆ ಮುಂದಿನ ದಿನಗಳಲ್ಲಿ ಗೋಕಾಕ್ ಮಾದರಿಯ ಹೋರಾಟಕ್ಕೆ ಕರೆ ನೀಡಬೇಕಾದಿತು ಎಂದು ಎಚ್ಚರಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ನಡೆದ ಈ ಕುರಿತ ಸಭೆಯಲ್ಲಿ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಡಾ.ಎಸ್ ಎಲ್.ಭೈರಪ್ಪ, ಡಾ.ಚಂದ್ರಶೇಖರ ಪಾಟೀಲ, ಕವಿ ಸಿದ್ಧಲಿಂಗಯ್ಯ, ಡಾ.ಕಮಲಾ ಹಂಪನ, ಡಾ.ದೊಡ್ಡರಂಗೇಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕಾಳೇಗೌಡ ನಾಗವಾರ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆದ ಈ ಸಭೆಯಲ್ಲಿ ಸರ್ಕಾರ ನಿಲುವನ್ನು ವಿರೋಧಿಸುವ ಬಗ್ಗೆ ಮತ್ತು ಕನ್ನಡ ಶಾಲೆಗಳ ಸಬಲೀಕರಣದ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಬಳಿಕ ಹಿರಿಯ ಸಾಹಿತಿಗಳೊಡಗೂಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್, ಸಭೆಯಲ್ಲಿ ಚರ್ಚೆಯಾದ ಮತ್ತು ತೆಗೆದು ಕೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು. ಸರ್ಕಾರ ಪ್ರಾಥಮಿಕ ಹಂತದಲ್ಲೆ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವ ನಿರ್ಧಾರದಿಂದ ಕೂಡಲೆ ಹಿಂದೆ ಸರಿಯಬೇಕು. ಕನ್ನಡ ಶಾಲೆಗಳಲ್ಲೆ ಇಂಗ್ಲಿಷ್ ಒಂದು ವಿಷಯವನ್ನಾಗಿ ಸರ್ಕಾರ ಬೋಧಿಸಲು ಮುಂದಾಗಲಿ ಅದಕ್ಕೆ ಸಹಮತ ಇದೆ.ಆದರೆ ಇಂಗ್ಲಿಷ್ ಶಾಲೆಗಳ ಆರಂಭದ ಬಗ್ಗೆ ಈಗಾಗಲೇ ಮಾಡಿರುವ ಘೋಷಣೆಯನ್ನು ಮುಖ್ಯ ಮಂತ್ರಿಗಳು ಕೂಡಲೆ ಹಿಂದೆ ಪಡೆಯಬೇಕು ಎಂಬ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು ಎಂದರು.
ಕನ್ನಡವನ್ನು ಉಳಿಸಿ ಬೆಳಸಬೇಕಾಗಿರುವ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿರುವುದು ಸರಿಯಿಲ್ಲ. ಈ ಹಿಂದೆ ಸರ್ಕಾರ ಘೋಷಣೆ ಮಾಡಿದ ರೀತಿಯಲ್ಲೆ ಪ್ರಾಥಮಿಕ ಹಂತದಲ್ಲೆ ಮಕ್ಕಳಿಗೆ ಇಂಗ್ಲಿಷ್ ಅನ್ನು ಒಂದು ಭಾಷೆಯನ್ನಾಗಿ ಕಲಿಸಲಿ.ಅಲ್ಲದೆ ಈ ಸಂಬಂಧ ಶಿಕ್ಷರಿಗೆ ಸೂಕ್ತ ತರಬೇತಿಯನ್ನು ನೀಡಲಿ ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳಿದರು. ಈ ಸಂಬಂಧ ಹತ್ತು ಮಂದಿ ಹಿರಿಯ ಸಾಹಿತಿಗಳನ್ನೊಳಗೊಂಡ ನಿಯೋಗ ಬೆಳಗಾವಿ ಅಧಿವೇಶನದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಭೆ ತೆಗೆದು ಕೊಂಡ ನಿರ್ಧಾರಗಳ ಬಗ್ಗೆ ಮನವರಿಕೆ ಮಾಡಿಕೊಡಲಿದೆ ಎಂದರು.
ಕವಿ ಸಿದ್ಧಲಿಂಗಯ್ಯ ಮಾತನಾಡಿ, ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಖಂಡನೀಯ. ಇದರಲ್ಲಿ ಯಾವುದೋ ಹುನ್ನಾರ ಅಡಗಿದ್ದು ಯಾವುದೆ ಕಾರಣಕ್ಕೂ ಪ್ರಾಥಮಿಕ ಹಂತದಲ್ಲೆ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಸರ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ವರದಿಯನ್ನು ನೀಡಿದೆ. ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು.ದಡ್ಡತನವನ್ನು ಪ್ರದರ್ಶಿಸಿದರೆ ಹೋರಾಟದ ಅಖಾಡ ಅನಿವಾರ್ಯ ಎಂದರು.
ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ , ಕನ್ನಡವನ್ನು ಕೊಲ್ಲುವ ಕೆಲಸಕ್ಕೆ ಸರ್ಕಾರ ಕೈ ಹಾಕಿದ್ದು, ಈ ನಿರ್ಧಾರದಿಂದ ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರ ಹಿಂದೆ ಸರಿಯದಿದ್ದರೆ ಗೋಕಾಕ್ ಮಾದರಿಯ ಹೋರಾಟಕ್ಕೆ ಕರೆ ನೀಡುವುದಾಗಿ ಎಚ್ಚರಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಚಂದ್ರಶೇಖರ ಕಂಬಾರ, ಲೇಖಕಿ ಬಿ.ಟಿ.ಲಲಿತಾ ನಾಯಕ್, ಡಾ. ಪ್ರಧಾನ ಗುರುದತ್ ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.
ಪ್ರಾದೇಶಿಕತೆ ಮರೆತಿವೆ
ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಕುರಿತಂತೆ ಪ್ರತಿಕ್ರಿಯಿಸಿದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ, ಪ್ರಾದೇಶಿಕ ಪಕ್ಷಗಳು ಪ್ರಾದೇಶಿಕತೆಗೆ ಒತ್ತು ನೀಡಬೇಕು. ತಮಿಳುನಾಡಿನ ಡಿಎಂಕೆ ಪಕ್ಷ ಬಿಟ್ಟರೆ ಎಲ್ಲಾ ಪಕ್ಷಗಳು ರಾಷ್ಟ್ರೀಯ ಪಕ್ಷಗಳನ್ನು ಅಪ್ಪಿಕೊಳ್ಳುತ್ತಿವೆ.ಹೀಗಾದರೆ ಪ್ರಾದೇಶಿಕತೆ ಕಾಪಾಡುವುದು ಎಲ್ಲಿಂದ ಎಂದರು. ಈ ಹಿಂದಿನ ಸರ್ಕಾರದ ಪ್ರಕ್ರಿಯೆ, ಈಗಲೂ ನಡೆಯುತ್ತಿದೆ.ಅಧಿಕಾರಿಗಳ ವರ್ಗಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಕೇಂದ್ರ ವಿದ್ಯಾಲಯಗಳನ್ನು ಸ್ಥಾಪನೆ ಮಾಡಿತು.ಆದರೆ ಈಗ ಎಲ್ಲಾ ಮಕ್ಕಳಿಗೂ ಅಲ್ಲಿ ಕಲಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.