ಮೈಸೂರು: ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನದ ವಿಕಾಸ ಮತ್ತು ಉದ್ಯೋಗ ಗಳಿಕೆ ದೃಷ್ಟಿಯಿಂದ ಕನ್ನಡ ಭಾಷೆ ಜೊತೆಗೆ ಆಂಗ್ಲ ಭಾಷೆ ಕಲಿಕೆ ಮಕ್ಕಳಿಗೆ ಬಾಲ್ಯದಲ್ಲೇ ಲಭಿಸಬೇಕು ಎಂದು ಪಿಡಿಒ ರವಿಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಮೆಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2019 – 20ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ, ನೂತನವಾಗಿ ಆರಂಭವಾಗಿರುವ ಆಂಗ್ಲ ಮಾಧ್ಯಮ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕನ್ನಡ ಭಾಷೆ ಜೊತೆಗೆ ಇಂಗ್ಲಿಷ್ ಭಾಷೆ ಕಲಿತು ವಿದ್ಯಾರ್ಥಿಗಳು ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕೆಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಟಿ.ಸತೀಶ್ ಜವರೇಗೌಡ ಮಾತನಾಡಿ, ಶಿಕ್ಷಣ ಪಡೆಯುವಿಕೆ ದುಬಾರಿಯಾಗುತ್ತಿರುವ ಕಾಲಘಟ್ಟದಲ್ಲಿ ಉಳ್ಳವರ ಮಕ್ಕಳು ಮಾತ್ರ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಡ ರೈತರ ಮತ್ತು ಕಾರ್ಮಿಕರ ಮಕ್ಕಳು ಈ ಆಂಗ್ಲ ಮಾಧ್ಯಮದಿಂದ ವಂಚಿತರಾಗಿದ್ದರು.
ಆದರೆ, ಸರ್ಕಾರ ಈ ವರ್ಷದಿಂದಲೇ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ತೆರೆಯಲು ಆದೇಶ ಮಾಡಿರುವುದರಿಂದ, ಅವಕಾಶ ವಂಚಿತರಾಗಿದ್ದ ಬಡ ರೈತ ಮತ್ತು ಕಾರ್ಮಿಕರ ಮಕ್ಕಳು ಆಂಗ್ಲ ಭಾಷಾ ಮಾಧ್ಯಮದಲ್ಲಿ ಕಲಿಯಲಿದ್ದಾರೆಂದರು.
ಗ್ರಾಪಂ ಅಧ್ಯಕ್ಷೆ ಮಂಚಮ್ಮ ಟೇಪು ಕತ್ತರಿಸುವ ಮೂಲಕ ಆಂಗ್ಲ ಮಾಧ್ಯಮ ವಿಭಾಗವನ್ನು ಉದ್ಘಾಟಿಸಿದರು. ಎಸ್‌ಡಿಎಂಸಿ ಸದಸ್ಯ ಮಲ್ಲೇಶ್, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಜ್ಯೋತಿ, ಮುಖ್ಯ ಶಿಕ್ಷಕಿ ಎನ್.ಅನುಪಮಾ ಉಪಸ್ಥಿತರಿದ್ದರು.
ಮೊದಲ ದಿನ ಶಾಲೆಗೆ ಆಗಮಿಸಿದ ಮಕ್ಕಳನ್ನು ಮೆರವಣಿಗೆಯಲ್ಲಿ ಕರೆ ತಂದ ಶಿಕ್ಷಕರ ವೃಂದ ಹಾಗೂ ಎಸ್‌ಡಿಎಂಸಿ ಸದಸ್ಯರು, ಮಕ್ಕಳಿಗೆ ಗುಲಾಬಿ ಹೂ ನೀಡುವ ಮೂಲಕ ಶಾಲೆಗೆ ಸ್ವಾಗತಿಸಿದರು. ಮಕ್ಕಳಿಗೆ ಮಧ್ಯಾಹ್ನ ಸಿಹಿ ಊಟದ ವ್ಯವಸ್ಥೆ ಮಾಡುವುದರ ಜೊತೆಗೆ, ಮನರಂಜನಾತ್ಮಕ ಆಟಗಳ ಮೂಲಕ ಶಾಲಾ ವಾತಾವರಣವನ್ನು ಆಕರ್ಷಕವಾಗಿ ಕಾಣುವಂತೆ ಮಾಡಲಾಗಿತ್ತು.