Advertisement
ಕೆಣಕಿದವರೇ ಸ್ಫೂರ್ತಿಆರೇಳು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಗಾಯನ ಸಮಾಜದಲ್ಲಿ ಹರಿಕಥೆ ಕಾರ್ಯಕ್ರಮವೊಂದು ನಡೆದಿತ್ತು. ಪುರಂದರದಾಸರ ಕುರಿತಾದ ಹರಿಕಥೆ ಮಾಡಲು ಬಂದಿದ್ದವರು ತಮಿಳುನಾಡಿನವರು. ಕಾರ್ಯಕ್ರಮ ಶ್ರೋತೃಗಳಿಂದ ಕಿಕ್ಕಿರಿದು ತುಂಬಿತ್ತು. ಕಾರ್ಯಕ್ರಮ ಶುರುವಾಗುವುದಕ್ಕೆ ಮುನ್ನ ಜನಪ್ರಿಯರೂ ಮತ್ತು ಪ್ರತಿಭಾನ್ವಿತರೂ ಆಗಿದ್ದ ಆ ಮಹಾಶಯರು ಒಂದು ಮಾತು ಹೇಳಿದರು. “ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರ ಗೀತೆಗಳು ಕನ್ನಡದಲ್ಲಿವೆ. ನನಗೆ ಕನ್ನಡ ಸರಿಯಾಗಿ ಬಾರದು. ಆದ್ದರಿಂದ ಉಚ್ಛಾರಣೆಯಲ್ಲಿ ದೋಷವಾದರೆ ಕ್ಷಮಿಸಿ. ಈ ಪದಗಳನ್ನು ಹಾಡಲು ಇಲ್ಲಿ ಯಾರೂ ಇಲ್ಲವೇನೋ ಗೊತ್ತಿಲ್ಲ, ತಮಿಳುನಾಡಿನಿಂದ ನನ್ನನ್ನು ಕರೆಸಿದ್ದಾರೆ.’ ಅವರ ಈ ಮಾತನ್ನು ಕೇಳಿ ಅಲ್ಲಿ ನೆರೆದಿದ್ದ ಕನ್ನಡಿಗರಿಗೆ ಚಾಟಿ ಏಟು ಬೀಸಿದ ಹಾಗಾಗಿತ್ತು. ಎದುರಿನ ಸಾಲಿನಲ್ಲಿ ಕೂತಿದ್ದ ವೀಣಾ ಮೋಹನ್ ಅವರಂತೂ ದಿಗ್ಭ್ರಮೆಗೊಂಡಿದ್ದರು. ಈ ಘಟನೆಯನ್ನು ಅವರು ಅಮೆರಿಕದ ಗೆಳೆಯರ ವಾಟ್ಸಾéಪ್ ಗ್ರೂಪಿನಲ್ಲಿ ಹಂಚಿಕೊಂಡಿದ್ದರು. ಗೆಳತಿಯೊಬ್ಬಳು “ದೂರು ಹೇಳ್ಳೋದು ತುಂಬಾ ಸುಲಭ, ನೀನು ಮಾಡಿ ತೋರಿಸು ನೋಡೋಣ…’ ಎಂದುಬಿಟ್ಟರು. ಸವಾಲನ್ನು ಸ್ವೀಕರಿಸಿದ ವೀಣಾ, ತಿಂಗಳುಗಳ ಕಾಲ ಅಧ್ಯಯನ ನಡೆಸಿ, ಅದೇ ಗೆಳತಿಯ ಮನೆಯಲ್ಲಿ ಮೊಟ್ಟಮೊದಲ ಬಾರಿಗೆ ಹರಿಕಥೆ “ಗಜಗೌರಿ ವ್ರತ’ವನ್ನು ನಡೆಸಿಕೊಟ್ಟಿದ್ದರು. ಇಂದು ವೀಣಾ ಅವರು ಅಮೆರಿಕದಾದ್ಯಂತ ಕರ್ನಾಟಕದ ಹರಿಕಥೆ ಸಂಸ್ಕೃತಿಯನ್ನು ಪಸರಿಸುತ್ತಿದ್ದಾರೆ.
ಹರಿಕಥೆ ಕನ್ನಡ ನಾಡಿನ ಸಂಸ್ಕೃತಿಯ ಭಾಗ. ಪೌರಾಣಿಕವಾಗಿ, ಐತಿಹಾಸಿಕವಾಗಿ ಭಾರತೀಯರಿಗೆ ಸುಲಭವಾಗಿ ಕನೆಕ್ಟ್ ಆಗುವ ಕಲಾಪ್ರಕಾರವಿದು. ವೀಣಾ ಅವರು ನಮ್ಮ ಹರಿಕಥೆಯನ್ನು ಇಂಗ್ಲಿಷಿಗೆ ತರ್ಜುಮೆಗೊಳಿಸಿ ಕನ್ನಡಿಗರಲ್ಲದವರ ಮುಂದೆ ನಮ್ಮ ಸಂಸ್ಕೃತಿಯನ್ನು ಪ್ರಚುರಪಡಿಸುತ್ತಿದ್ದಾರೆ. ಅಮೆರಿಕದಲ್ಲಿ ಅವರ ಇಂಗ್ಲಿಷ್ ಹರಿಕಥೆ ಕೇಳಲು ಕನ್ನಡಿಗರು ಮಾತ್ರವಲ್ಲದೆ, ತಮಿಳರು, ತೆಲುಗರು, ಉತ್ತರ ಭಾರತೀಯರು ಮತ್ತು ಶ್ರೀಲಂಕನ್ನರೂ ಬರುತ್ತಾರಂತೆ. ಹರಿಕಥೆಯ ಮೂಲಕ ವೀಣಾರವರು ಭಾರತೀಯರನ್ನು ಒಗ್ಗೂಡಿಸುವ ಕೆಲಸದಲ್ಲೂ ನಿರತರಾಗಿದ್ದಾರೆ. ಆದರೂ ಯಾವುದೇ ಭಾಷೆಗೆ ತರ್ಜುಮೆ ಮಾಡಿದರೂ ಕನ್ನಡದಲ್ಲಿನ ಸೊಬಗು ಬೇರೆ ಭಾಷೆಯಲ್ಲಿ ಮೂಡಿ ಬರುವುದಿಲ್ಲ. ಯಾವ ಕಲಾಪ್ರಕಾರವೇ ಆದರೂ ಆಡುಭಾಷೆಯಲ್ಲೇ ಚೆನ್ನ ಎನ್ನುವುದು ಅವರ ಅನುಭವದ ಮಾತು.
Related Articles
Advertisement
ಹರಿಕಥೆಯನ್ನು ಹೇಗೋ ಕಷ್ಟಪಟ್ಟು ಇಂಗ್ಲಿಷಿಗೆ ಅನುವಾದಿಸಿಬಿಡಬಹುದು. ಬೆಣ್ಣೆಯನ್ನು ನೋಡ್ತಿದ್ದ ಹಾಗೇ ಕೃಷ್ಣನ ಬಾಯಲ್ಲಿ ಜೊಲ್ಲು ಸುರೀತು. ಇದನ್ನು “ಕೃಷ್ಣಾಸ್ ಮೌತ್ ವಾಟರ್x’ ಅಂತೇನೋ ಹೇಳಿ ಮುಗಿಸಬಹುದು. ಆದರೆ ಕನ್ನಡ ಭಾಷೆ ಕೊಡುವ ಅನುಭೂತಿ, ಅರ್ಥವನ್ನು ಇಂಗ್ಲಿಷ್ ಕೊಡುವುದಿಲ್ಲ.
ವೀಣಾ ಮೋಹನ್
ಈ ವಾರಾಂತ್ಯ ವೀಣಾ ಅವರ “ಪುರಂದರದಾಸರು’ ಹರಿಕಥಾ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯುತ್ತಿದೆ.ಎಲ್ಲಿ?: ರಂಗಂ ಶ್ರೀಮದ್ ಆಂಡವನ್ ಆಶ್ರಮ,
ಶೇಷಾದ್ರಿಪುರಂ
ಯಾವಾಗ?: ಜ. 20, ಭಾನುವಾರ, ಬೆಳಿಗ್ಗೆ 11 ಹರ್ಷವರ್ಧನ್ ಸುಳ್ಯ